ಮಸಾಲೆ ಪದಾರ್ಥಗಳಲ್ಲೂ ಕಲಬೆರಕೆ: ಕರ್ನಾಟಕದ ಮನವಿ ಮೇರೆಗೆ EtO ಬಳಕೆಗೆ ಬ್ರೇಕ್ ಹಾಕಲು ಸಮಿತಿ ರಚಿಸಿದ ಕೇಂದ್ರ
ಮಸಾಲೆ ಪದಾರ್ಥಗಳಲ್ಲಿ ಕೃತಕ ಬಣ್ಣ ಹಾಗೂ ಎಥಿಲೀನ್ ಆಕ್ಸೈಡ್ (EtO) ಬಳಕೆ ಕುರಿತು ಅನುಮಾನಗಳು ವ್ಯಕ್ತವಾಗಿರುವ ಬೆನ್ನಲ್ಲೇ, ಆಹಾರ ಸುರಕ್ಷತಾ ಇಲಾಖೆ ಕೇಂದ್ರ FSSAIಗೆ ಕ್ರಮಕ್ಕೆ ಮನವಿ ಮಾಡಿದೆ. ರಾಜ್ಯದ ಮನವಿ ಬೆನ್ನಲ್ಲೇ ಮಸಾಲೆ ಪದಾರ್ಥಗಳ ಬಳಕೆ ಮತ್ತು ಮಾನದಂಡಗಳ ಕುರಿತು ಪರಿಶೀಲನೆಗೆ ಕೇಂದ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ.

ಮುಖ್ಯಾಂಶಗಳು
- ಮಸಾಲೆಗಳಲ್ಲಿ EtO ಬಳಕೆ ಬಗ್ಗೆ ಆತಂಕ
- FSSAIಗೆ ರಾಜ್ಯ ಆಹಾರ ಇಲಾಖೆ ಪತ್ರ
- ಮಸಾಲೆಗಳಿಗೆ ಹೊಸ ಮಾನದಂಡ ರೂಪಿಸಲು ಚಿಂತನೆ
ಬೆಂಗಳೂರು, ಆಗಸ್ಟ್ 17: ಸ್ಟಾರ್ ಹೋಟೆಲ್‌ಗಳು, ಪ್ರತಿಷ್ಠಿತ ರೆಸ್ಟೋರೆಂಟ್‌ಗಳು ಹಾಗೂ ವಿವಿಧ ಆಹಾರ ಉತ್ಪನ್ನಗಳ ಮೇಲೆ ದಾಳಿ ನಡೆಸುತ್ತಿರುವ ಆಹಾರ ಸುರಕ್ಷತಾ ಇಲಾಖೆ (Food Saftey Department) ಇದೀಗ ಮಸಾಲೆ ಪದಾರ್ಥಗಳತ್ತವೂ (Masala Items) ಗಮನ ಹರಿಸಿದೆ. ಗರಂ ಮಸಾಲೆ, ಚಿಕನ್ ಮಸಾಲೆ, ಬಿರಿಯಾನಿ ಪೌಡರ್, ಸಾಂಬಾರ್ ಪೌಡರ್, ರಸಂ ಪೌಡರ್ ಸೇರಿದಂತೆ ರೆಡಿಮೇಡ್ ಮಸಾಲೆಗಳಲ್ಲಿ ಕೃತಕ ಬಣ್ಣ ಹಾಗೂ ಇತರ ರಾಸಾಯನಿಕಗಳ ಬಳಕೆಯ ಕುರಿತು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಇಲಾಖೆ ಈ ಕ್ರಮ ಕೈಗೊಂಡಿದೆ.
ಅಡುಗೆಗೆ ವ್ಯಾಪಕವಾಗಿ ಬಳಕೆಯಾಗುವ ಮಸಾಲೆ ಪದಾರ್ಥಗಳ ಗುಣಮಟ್ಟ ಮತ್ತು ಅವುಗಳಲ್ಲಿ ಬಳಸುವ ರಾಸಾಯನಿಕಗಳ ಪ್ರಮಾಣದ ಕುರಿತು ಹೆಚ್ಚಿನ ನಿಗಾ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಮಸಾಲೆ ಉತ್ಪನ್ನಗಳ ಬಳಕೆಗೆ ಸ್ಪಷ್ಟವಾದ ಮಾನದಂಡ ರೂಪಿಸುವ ಅಗತ್ಯವನ್ನೂ ಇಲಾಖೆ ಒತ್ತಿಹೇಳಿದೆ.
ಮಸಾಲೆಗಳಲ್ಲಿ EtO ಬಳಕೆ ಬಗ್ಗೆ ಆತಂಕ
ಮಸಾಲೆ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ (EtO) ಬಳಕೆ ಕುರಿತು ಆಹಾರ ಸುರಕ್ಷತಾ ಇಲಾಖೆಯಲ್ಲಿ ಆತಂಕ ವ್ಯಕ್ತವಾಗಿದೆ. ರಫ್ತು ಮಾಡುವ ಮಸಾಲೆ ಉತ್ಪನ್ನಗಳಿಗೆ ಅನ್ವಯಿಸುವ ಮಿತಿಗಿಂತ (30 ಅಥವಾ 50) ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಲವು ಉತ್ಪನ್ನಗಳಲ್ಲಿ EtO ಪ್ರಮಾಣ (200 -150) ಹೆಚ್ಚಿರಬಹುದು ಎಂಬ ಅನುಮಾನವನ್ನು ಇಲಾಖೆ ವ್ಯಕ್ತಪಡಿಸಿದೆ.
EtO ಅತಿಯಾದರೆ ದುಷ್ಪರಿಣಾಮ ಏನು?
EtOಗೆ ದೀರ್ಘಕಾಲದ ಅಥವಾ ಹೆಚ್ಚಿನ ಪ್ರಮಾಣದ ಒಡ್ಡಿಕೊಳ್ಳುವಿಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. EtO ಹೆಚ್ಚು ಸೇವನೆಯಿಂದ ಕಾರ್ಸಿನೋಜೆನಿಕ್ ಉತ್ಪತ್ತಿಯಾಗಿ ಕಾನ್ಸರ್ ತಗಲುವ ಸಂಭವವಿದೆ. ಜೊತೆಗೆ ಅಸಿಡಿಟಿ, ಕರುಳು ಬೇನೆ ಸೇರಿ ಅನೇಕ ಸಮಸ್ಯೆ ಬರುತ್ತದೆ. ಹೀಗಾಗಿ ಮಸಾಲೆ ಪದಾರ್ಥಗಳಲ್ಲಿನ ಇಂತಹ ರಾಸಾಯನಿಕಗಳ ಬಳಕೆಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ ಸೂಕ್ತ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಇಲಾಖೆ ಹೇಳಿದೆ.
FSSAIಗೆ ರಾಜ್ಯದಿಂದ ಪತ್ರ
ಈ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವಾದ FSSAIಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಸಾಲೆ ಪದಾರ್ಥಗಳಲ್ಲಿನ EtO ಬಳಕೆ ಹಾಗೂ ಅವುಗಳ ಗುಣಮಟ್ಟದ ಮಾನದಂಡಗಳ ಕುರಿತು ಪರಿಶೀಲನೆ ನಡೆಯಲಿದೆ.
ಇದನ್ನೂ ಓದಿ: ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ!
ಮುಂದಿನ ದಿನಗಳಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆ, ಬಳಕೆ ಹಾಗೂ ಅವುಗಳಲ್ಲಿ ರಾಸಾಯನಿಕಗಳ ಪ್ರಮಾಣದ ಮೇಲೆ ಹೆಚ್ಚಿನ ನಿಯಂತ್ರಣ ಜಾರಿಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Mon, 17 August 26




