ಜೈಪುರದಲ್ಲಿ ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು: ಲೇಡಿ ಪಿಎಸ್ಐ ಸೇರಿ ಮೂವರು ಅರೆಸ್ಟ್
ದೇಶದಲ್ಲೇ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಗೌರವವನ್ನು ಮೂವರು ಪೊಲೀಸರು ರಾಜಸ್ಥಾನದಲ್ಲಿ ಹರಾಜು ಹಾಕಿರುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನಿಖೆ ನೆಪದಲ್ಲಿ ಹೋದವರು ಆರೋಪಿ ಬಳಿಯೇ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಆರೋಪಿಯೇ ಇವರಿಗೆ ಸರಿಯಾದ ಪಾಠ ಕಲಿಸಿದ್ದಾನೆ.

ಬೆಂಗಳೂರು, ಜೂನ್ 14: ನ್ಯಾಯ ಕೊಡಿಸುವಲ್ಲಿ ಕರ್ನಾಟಕ (Karnataka) ಪೊಲೀಸ್ ದೇಶದಲ್ಲೇ ನಂಬರ್ ಒನ್. ಆದರೆ ಬೆಂಗಳೂರಿನ ಮೂವರು ಪೊಲೀಸರು ಜೈಪುರದಲ್ಲಿ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದವರು ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾರೆ.
ಮುಖ್ಯಾಂಶಗಳು
- ಜೈಪುರದಲ್ಲಿ ಬೆಂಗಳೂರಿನ ಮೂವರು ಪೊಲೀಸರು ಎಸಿಬಿ ಬಲೆಗೆ
- 40 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸರು
- ಜೈಪುರ ಎಸಿಬಿ ಎಎಸ್ಪಿ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ದಾಳಿ
ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಜೈಪುರಕ್ಕೆ ತೆರಳಿದ್ದ ಪೊಲೀಸರು
ದೊಡ್ಡ ದೊಡ್ಡ ಪ್ರಕರಣದಲ್ಲಿ ಸುಮ್ಮನಾಗುವ ಪೊಲೀಸರು ವರದಕ್ಷಿಣೆ ಪ್ರಕರಣದಲ್ಲಿ ರಾಜಸ್ಥಾನಕ್ಕೆ ಹೋಗಿದ್ದರು. ಆರೋಪಿಯನ್ನ ಬಂಧಿಸಿ ಕರೆದುಕೊಂಡು ಬರುವುದನ್ನು ಬಿಟ್ಟು ಹಣ ಮಾಡಲು ಮುಂದಾಗಿದ್ದರು. ಆರೋಪಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆರೋಪಿ ಇದನ್ನು ಬಂಡವಾಳ ಮಾಡಿಕೊಂಡು ಜೈಪುರ್ ಎಸಿಬಿಗೆ ದೂರು ನೀಡಿದ್ದಾನೆ. ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಎಸಿಬಿ ರಾಜ್ಯದ ಪಿಎಸ್ಐ ಸೇರಿ ಮೂವರನ್ನ ಬಂಧಿಸಿದ್ದಾರೆ.
2 ಲಕ್ಷ ರೂ ಲಂಚಕ್ಕೆ ಬೇಡಿಕೆ
ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಹೆಚ್ಎಎಲ್ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಅನಿತಾ, ಕಾನ್ಸ್‌ಟೇಬಲ್ ಯತೀಶ್ ಕುಮಾರ್, ಉಳ್ವಪ್ಪ ತೆರಳಿದ್ದರು. ಆರೋಪಿಯನ್ನು ಬಂಧಿಸಿದ ಇವರು ದುಡ್ಡು ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ನೆರವು ನೀಡುವುದಾಗಿ ಹೇಳಿ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಪೊಲೀಸರಿಗೆ ಸರಿಯಾದ ಪಾಠ ಕಲಿಸಿದ ಆರೋಪಿ
ಬೆಂಗಳೂರು ಪೊಲೀಸರ ವಸೂಲಿ ಬಾಜಿಯಿಂದ ಬೇಸತ್ತ ಆರೋಪಿ, ತಕ್ಷಣ ಜೈಪುರ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದ. ದೂರು ಸ್ವೀಕರಿಸಿದ ರಾಜಸ್ಥಾನ ಎಸಿಬಿ ಟೀಂ, ಪ್ರಾಥಮಿಕ ತನಿಖೆ ನಡೆಸಿ ಬೆಂಗಳೂರು ಪೊಲೀಸರಿಗೆ ಬಲೆ ಬೀಸಿತ್ತು. ಜೈಪುರದ ಗಂಗೌರ್ ಹೋಟೆಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಎಸ್ಐ ಅನಿತಾ ಸೇರಿ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಡಿಐಜಿ ಓಂ ಪ್ರಕಾಶ್ ಮೀನಾ ಅವರ ಮೇಲ್ವಿಚಾರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ನಕ್ಸಲ್ ಚಟುವಟಿಕೆಗೆ ಬೆಂಗಳೂರಲ್ಲಿ ಹಣಕಾಸು ವಹಿವಾಟು: ರಾಜ್ಯದ ನಾಲ್ವರು ಸೇರಿ 7 ಜನರ ವಿರುದ್ಧ ಎಫ್ಐಆರ್
ಒಟ್ಟಾರೆ ಇಡೀ ದೇಶದಲ್ಲಿ ಬೆಂಗಳೂರು ಪೊಲೀಸರ ಗೌರವ 40 ಸಾವಿರ ರೂ.ಕ್ಕೆ ಹರಾಜಾಗಿದೆ. ಇನ್ನಾದ್ರೂ ಪೊಲೀಸ್ ಇಲಾಖೆ ಆರೋಪಿಗಳ ಬಳಿ ಕೈ ಒಡ್ಡೋದನ್ನ ನಿಲ್ಲಿಸಬೇಕಿದೆ. ಸದ್ಯ ಮೂವರು ಪೊಲೀಸರನ್ನ ಬಂಧಿಸಿರುವ ಜೈಪುರ ಎಸಿಬಿ ಟೀಂ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
ವರದಿ: ವಿಕಾಸ್ ಟಿವಿ9 ಬೆಂಗಳೂರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




