ಸರ್ಕಾರಿ ಬಸ್‌ಗಳಲ್ಲಿ ಮುಂದಿನ ನಿಲ್ದಾಣ…. ಎಂಬ ಆಡಿಯೋ ನಿರ್ದೇಶನ ಮತ್ತೆ ಕೇಳುವಂತೆ ಮಾಡಿದ್ದು ಇವರೆ
ನೀವು ಬಿಎಂಟಿಸಿ ಅಥವಾ ಕೆಎಸ್ಆರ್ಟಿಸಿ ಬಸ್‌ಗಳಲ್ಲಿ ಮುಂದಿನ ನಿಲ್ದಾಣ.... ಎಂಬ ನಿರ್ದೇಶನ ಧ್ವನಿಯನ್ನು ಕೇಳುತ್ತಿರಿ. ಈ ಧ್ವನಿ ಮೆಟ್ರೋ ಹೊರತುಪಡಿಸಿ ಉಳಿದ ಸಾರ್ವಜನಿಕ ವಾಹನಗಳಲ್ಲಿ ಕೆಲ ದಿನಗಳ ಕಾಲ ಬಂದಾಗಿತ್ತು. ಇದು ಮತ್ತೆ ಕೇಳುವಂತೆ ಮಾಡಿದ್ದು ಯಾರು ಗೊತ್ತಾ? ಇಲ್ಲಿದೆ ಓದಿ..
ಬೆಂಗಳೂರು, ಜನವರಿ 05: ನೀವು ಬಿಎಂಟಿಸಿ (BMTC) ಅಥವಾ ಕೆಎಸ್ಆರ್ಟಿಸಿ (KSRTC) ಬಸ್‌ಗಳಲ್ಲಿ ಮುಂದಿನ ನಿಲ್ದಾಣ…. ಎಂಬ ನಿರ್ದೇಶನ ಧ್ವನಿಯನ್ನು ಕೇಳುತ್ತಿರಿ. ಈ ಧ್ವನಿ ಮೆಟ್ರೋ ಹೊರತುಪಡಿಸಿ ಉಳಿದ ಸಾರ್ವಜನಿಕ ವಾಹನಗಳಲ್ಲಿ ಕೆಲ ದಿನಗಳ ಕಾಲ ಬಂದಾಗಿತ್ತು. ಇದು ಮತ್ತೆ ಕೇಳುವಂತೆ ಮಾಡಿದ್ದು ಯಾರು ಗೊತ್ತಾ? ಅವರೇ ವಕೀಲ ಶ್ರೇಯಸ್ ರೆಡ್ಡಿ. ಯಾರು ಈ ಶ್ರೇಯಸ್ ರೆಡ್ಡಿ? ಈ ಧ್ವನಿಗೂ ಇವರಿಗೂ ಏನು ಸಂಬಂಧ? ಇಲ್ಲಿದ ಓದಿ…
ಶ್ರೇಯಸ್ ರೆಡ್ಡಿಯವರು ಅವರು ರೆಟಿನೈಟಿಸ್ ಪಿಗ್ಮೆಂಟೋಸಾ (Retinitis Pigmentosa) ರೋಗದಿಂದ ಬಳಲುತ್ತಿದ್ದಾರೆ. ಈ ರೋಗ ಶ್ರೇಯಸ್ ರೆಡ್ಡಿ ಅವರಿಗೆ ಅನುವಂಶಿಕವಾಗಿ ಬಂದಿದೆ. ಈ ರೋಗದಿಂದ ಶ್ರೇಯಸ್ ರೆಡ್ಡಿ ಅವರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಇದರಿಂದ ಬಾಲ್ಯದಲ್ಲಿ ಇವರನ್ನು ಶಾಲೆಗೆ ಸೇರಿಸಲು ಪೋಷಕರು ಸಾಕಷ್ಟು ಹೆಣಗಾಡಬೇಕಾಯಿತು.
ದೃಷ್ಟಿದೋಷ ಕಾರಣದಿಂದ ಶ್ರೇಯಸ್ ರೆಡ್ಡಿ ಅವರಿಗೆ 73 ಶಾಲೆಗಳಲ್ಲಿ ದಾಖಲಾತಿ ನೀಡಲಿಲ್ಲ. ಆದರೆ ಶ್ರೇಯಸ್ ರೆಡ್ಡಿ ಇದರಿಂದ ಎದೆಗುಂದಲಿಲ್ಲ. ಇದೀಗ ಶ್ರೇಯಸ್ ರೆಡ್ಡಿ ಅವರು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ Disability Law and Constitution ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral Video: ಬಿಸ್ಮಿಲ್ಲಾಖಾನ್ರನ್ನು ನೆನಪಿಸಿದ ಸರ್ದಾರ್ಜೀಯ ಮಿಮಿಕ್ರಿ; ಶಭಾಷ್ ಎಂದ ನೆಟ್ಟಿಗರು
28 ವರ್ಷದವರಾದ ಶ್ರೇಯಸ್ ರೆಡ್ಡಿ ಅವರು ಸಾರ್ವಜನಿಕ ಸಾರಿಗೆಯಲ್ಲಿ ಆಡಿಯೋ ನಿರ್ದೇಶನಕ್ಕಾಗಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದರು. ಶ್ರೇಯಸ್ ರೆಡ್ಡಿ ಅವರ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ದೃಷ್ಟಿ ವಿಕಲಚೇತನರು ಸೇರಿದಂತೆ ವಿಕಲಾಂಗ ವ್ಯಕ್ತಿಗಳಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಡಿಸೆಂಬರ್ 18, 2023 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಇದಾದ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಆಡಿಯೊ ನಿರ್ದೇಶನಗಳನ್ನು ನೀಡುತ್ತಿವೆ ಎಂದು ಶ್ರೇಯಸ್ ರೆಡ್ಡಿ ಹೇಳಿದರು. ಆದರೂ ಇನ್ನೂ ಕೆಲವು ಬಸ್‌ಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿಲ್ಲ ಎಂದು ಅವರು ಹೇಳಿದರು.
ಶ್ರೇಯಸ್ ರೆಡ್ಡಿ ಅವರಿಗೆ ಗುರುವಾರ (ಜ.05) ರಂದು ವಿಶ್ವ ಬ್ರೈಲ್ ದಿನದಂದು “ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ (ಕರ್ನಾಟಕ) ಎಕ್ಸಲೆನ್ಸಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಏನಿದು ರೆಟಿನೈಟಿಸ್ ಪಿಗ್ಮೆಂಟೋಸಾ
ರೆಟಿನೈಟಿಸ್ ಪಿಗ್ಮೆಂಟೋಸಾ ಎಂಬುವುದು ಅನುವಂಶಿಕವಾಗಿ ಬರುವ ಕಾಯಿಲೆಯಾಗಿದ್ದು, ರಾತ್ರಿಯ ಸಮಯದಲ್ಲಿ ಕಣ್ಣು ಕಾಣುವುದಿಲ್ಲ. ಈ ಕಾಯಿಲೆ ಇರುವ ಜನರು ರಾತ್ರಿ ದೃಷ್ಟಿ ಕಳೆದುಕೊಳ್ಳುತ್ತಾರೆ. ಬಾಹ್ಯ ದೃಷ್ಟಿ ಕಡಿಮೆಯಾಗುವುದು. ಇದು ಹೆಚ್ಚಾಗಿ 60 ವರ್ಷ ಮೇಲ್ಪಟ್ಟವರಿಗೆ ಬರುತ್ತದೆ. ಪ್ರಸ್ತುತ, ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದಾಗ್ಯೂ, ಜೀನ್ ಥೆರಪಿ ಮೂಲಕ ಚಿಕಿತ್ಸ ನೀಡಬಹುದಾಗಿದೆ. ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ ರೋಹಿತ್ ಶೆಟ್ಟಿ ವಿವರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Fri, 5 January 24