ಹಿರಿಯ ನಾಗರಿಕರನ್ನು ಅನಾಥವಾಗಿಸುವ ಮುನ್ನ ಹುಷಾರ್!: ಬರ್ತಿದೆ ಹೊಸ ಮಸೂದೆ
ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಮತ್ತು ಅನಾಥವಾಗಿಸುವ ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ಹೊಸ ಮಸೂದೆ ಸಿದ್ಧಪಡಿಸಿದ್ದು, ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲು ಪ್ರಸ್ತಾಪಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಹೊಸ ಮಸೂದೆಯ ಅಗತ್ಯ ಹೆಚ್ಚಿದೆ ಎನ್ನಲಾಗಿದೆ.

ಬೆಂಗಳೂರು, ಅಕ್ಟೋಬರ್ 31: ಹಿರಿಯ ನಾಗರಿಕರನ್ನು ದೌರ್ಜನ್ಯ ಮತ್ತು ನಿರ್ಲಕ್ಷ್ಯದಿಂದ ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ. ಹಿರಿಯ ನಾಗರಿಕರನ್ನು ಅನಾಥವಾಗಿಸುವ ಪ್ರಕರಣಗಳಲ್ಲಿ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಕರ್ನಾಟಕ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮತ್ತು ನಿರ್ಲಕ್ಷ್ಯ ತಡೆ ಹಾಗೂ ರಕ್ಷಣಾ ಮಸೂದೆ-2025ರ ಕರಡನ್ನು ಪರಿಶೀಲಿಸಿರುವ 12 ಸದಸ್ಯರ ತಜ್ಞರ ಸಮಿತಿಯ, ಹಿರಿಯ ನಾಗರಿಕರನ್ನು ತ್ಯಜಿಸುವುದನ್ನು ಜಾಮೀನು ಸಿಗದ ಅಪರಾಧವನ್ನಾಗಿ ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆಯೂ ಶಿಫಾರಸು ಮಾಡಿದೆ.
ರಾಜ್ಯದಲ್ಲಿಲ್ಲ ಪ್ರತ್ಯೇಕ ಕಾನೂನು
ಪ್ರಸ್ತುತ, ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ನಿಯಮಗಳು ಕೇಂದ್ರದ ಅಸ್ತಿತ್ವದಲ್ಲಿರುವ ಕಾನೂನನ್ನು ಜಾರಿಗೊಳಿಸುತ್ತಿವೆ. ಹಿರಿಯ ನಾಗರಿಕರ ರಕ್ಷಣೆಗಾಗಿ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಇಲ್ಲ. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಗಳ ಪ್ರಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 12 ಸದಸ್ಯರ ತಜ್ಞರ ಸಮಿತಿಯು ಈಗಾಗಲೇ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಜ್ಞಾನಭಾರತಿ ಬಳಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಸಮಗ್ರವಾಗಿ ಒಳಗೊಂಡಿರುವುದು ಈ ಮಸೂದೆಯ ಉದ್ದೇಶವಾಗಿದೆ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮತ್ತು ನಿರ್ಲಕ್ಷ್ಯಕ್ಕೆ ಶಿಕ್ಷೆ, ಆರೈಕೆ ಸಂಸ್ಥೆಗಳಲ್ಲಿ ದೂರುಗಳ ಪರಿಹಾರ ವ್ಯವಸ್ಥೆ ಹಾಗೂ ತಂತ್ರಜ್ಞಾನದ ಬಳಕೆ ಸೇರಿದಂತೆ ಪ್ರಸ್ತುತ ನಿಯಮಗಳಲ್ಲಿ ಇಲ್ಲದ ಹಲವು ಅಂಶಗಳನ್ನು ಕರಡು ಮಸೂದೆ ಒಳಗೊಂಡಿದೆ. ಮಸೂದೆಯನ್ನು 2027ರ ಜೂನ್ ಅಥವಾ ಜುಲೈನಲ್ಲಿ ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಏರಿಕೆ
ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಹೊಸ ಮಸೂದೆಯ ಅಗತ್ಯ ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, 2024ರಲ್ಲಿ ರಾಜ್ಯದಲ್ಲಿ ಹಿರಿಯ ನಾಗರಿಕರ ವಿರುದ್ಧ 4,247 ಅಪರಾಧ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 1,840 ಹಾಗೂ 2022ರಲ್ಲಿ 1,583 ಪ್ರಕರಣಗಳು ದಾಖಲಾಗಿದ್ದವು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:20 pm, Sat, 31 October 26




