ಬೀದರ್ ಜಿಲ್ಲೆಯಲ್ಲಿ ಮಳೆಗೆ 395 ಮನೆಗಳು ಭಾಗಶಃ ಕುಸಿತ; ಕಾರಂಜಾ ಜಲಾಶಯದಲ್ಲಿ 28 ಗ್ರಾಮಗಳ ರೈತರ ಭೂಮಿ ಮತ್ತು ಮನೆಗಳು ಮುಳುಗಡೆ
ಬೀದರ್ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ 395 ಮನೆಗಳು ಭಾಗಶಃ ಕುಸಿತಗೊಂಡಿವೆ.
ಬೀದರ್: ಬೀದರ್ (Bidar) ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ (Rain) ಜಿಲ್ಲೆಯಲ್ಲಿ 395 ಮನೆಗಳು ಭಾಗಶಃ ಕುಸಿತಗೊಂಡಿವೆ. ಬಸವಕಲ್ಯಾಣ 46 (Basavakalyan), ಔರಾದ್ 121, ಕಮಲನಗರ 55, ಬೀದರ್ 82, ಭಾಲ್ಕಿ 40, ಚಿಟ್ಟಗುಪ್ಪಾ 22, ಹುಲಸೂರು 10 ಮತ್ತು ಹುಮ್ನಾಬಾದ್ ತಾಲೂಕಿನಲ್ಲಿ 19 ಮನೆಗಳು ಭಾಗಶಃ ಕುಸಿತವಾಗಿವೆ. ಇನ್ನೂ ಕಾರಂಜಾ ಜಲಾಶಯದಲ್ಲಿ (Karanja Dam) 28 ಹಳ್ಳಿಗಳ ರೈತರು ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ.
ಈ ಸಂಬಂಧ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಜನ ಪ್ರತಿನಿಧಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೃಷ್ಣಾನದಿ ಪ್ರವಾಹ ಭೀತಿ ಹಿನ್ನೆಲೆ ಗ್ರಾಮ ಸ್ಥಳಾಂತರಕ್ಕೆ ಆಗ್ರಹ
ಯಾದಗಿರಿ: ಕೃಷ್ಣಾನದಿ ಪ್ರವಾಹ ಭೀತಿ ಹಿನ್ನೆಲೆ ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷ್ಣಾನದಿ ತೀರದಲ್ಲಿ ಪ್ರವಾಹ ಉಂಟಾದರೆ ಗ್ರಾಮವೇ ಜಲಾವೃತವಾಗುತ್ತದೆ. ಗ್ರಾಮ ಸ್ಥಳಾಂತರ ಮಾಡುವುದಾಗಿ ಬಿ.ಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಈಗ ಭರವಸೆ ಈಡೇರಿಸಿಲ್ಲ ಎಂದು ಯಕ್ಷಿಂತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.