ಬೀದರ್: ನಗರದ ಕೊಳಚೆ ನೀರಿನಿಂದ ಮಲಿನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು

ಕಳೆದೆರಡು ವರ್ಷದಿಂದ ಇಲ್ಲಿ ತರಕಾರಿ ಬೆಳೆ ಬೆಳೆಯುವುದನ್ನು ರೈತರು ನಿಲ್ಲಿಸಿದ್ದು, ಒಂದು ವೇಳೆ ತರಕಾರಿ ಬೆಳೆಯಲಿಕ್ಕೆ ಹೋದರು ಕೂಡಾ ಇಲ್ಲಿ ತರಕಾರಿ ಬೆಳೆ ಬರುತ್ತಿಲ್ಲ. ಅದಕ್ಕೆ ಕಾರಣವೆಂದರೆ ಬೀದರ್ ನಗರದ ಚರಂಡಿ ನೀರು ಒಳಕೋಟೆಯೊಳಗಿರುವ ಜಮೀನಿಗೆ ಬರುತ್ತಿದೆ.

ಬೀದರ್: ನಗರದ ಕೊಳಚೆ ನೀರಿನಿಂದ ಮಲಿನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು
ಗಲೀಜು ನೀರು ಗ್ರಾಮದ ಹೊಲಕ್ಕೆ ಬರುತ್ತಿದೆ
Follow us
TV9 Web
| Updated By: preethi shettigar

Updated on:Oct 18, 2021 | 8:51 AM

ಬೀದರ್: ಐತಿಹಾಸಿಕ ಬೀದರ್ ಕೋಟೆಯೊಳಗೊಂದು ಪುಟ್ಟ ಊರಿದೆ. ಈ ಊರಲ್ಲಿರುವ ಇನ್ನೂರು ಎಕರೆಯಷ್ಟು ಜಮೀನಿನಲ್ಲಿ ರೈತರು ತರಕಾರಿ ಬೆಳೆಸುತ್ತಾ ನೆಮ್ಮದಿಯಿಂದಿದ್ದರು. ಇಲ್ಲಿ ಬೆಳೆಸುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆದರೀಗ ಆ ರೈತರಿಗೆ ತರಕಾರಿ ಬೆಳೆಯೋಕೆ ಸಾಧ್ಯವಾಗುತ್ತಿಲ್ಲ ಯಾಕೆ ಅಂತೀರಾ ಈ ವರದಿ ನೋಡಿ.

ನಗರದ ಗಲೀಜು ನೀರು ಗ್ರಾಮದ ಹೊಲಕ್ಕೆ ಬರುತ್ತಿದೆ. ಇದರಿಂದ ಇಲ್ಲಿರುವ ಬಾವಿಯ ನೀರು ಮಲಿನವಾಗುತ್ತಿದೆ. ಕುಡಿಯೋ ನೀರು ಸೇರಿ ಕೃಷಿಗೂ ಇದರಿಂದ ಹೊಡೆತ ಬಿದ್ದಿದೆ. 200 ಎಕರೆಗಳಷ್ಟು ಜಮೀನಿನಲ್ಲಿ ಕೃಷಿಯನ್ನೇ ನಂಬಿದ್ದ 25 ಕುಟುಂಬ, ಬೆಳೆಹಾನಿಯಿಂದ ಕಂಗಾಲಾಗಿದೆ. ಐತಿಹಾಸಿ ಬೀದರ್ ಕೋಟೆಯು ಅತ್ಯಂತ ವಿಶಾಲವಾದ ಕೋಟೆಯಾಗಿದ್ದು, 15ನೇಯ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿಸಲಾಗಿದೆ.

ಈ ಕೋಟೆಯ ಒಳಗಡೆಯೊಂದು ಪುಟ್ಟ ಊರಿದ್ದು, ಇಲ್ಲಿ 25 ಕ್ಕೂ ಹೆಚ್ಚು ಮನೆಗಳಿವೆ. ಇನ್ನೂರು ಎಕರೆಯಷ್ಟು ಫಲವತ್ತಾದ ಜಮೀನು ಇಲ್ಲಿದ್ದು, ಇಲ್ಲಿ ನೂರಾರು ವರ್ಷದಿಂದ ಗ್ರಾಮಸ್ಥರು ತರಕಾರಿಯನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಬೆಳೆಯಲಾಗುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೇಡಿಕೆಯಿದ್ದು, ಪಕ್ಕದ ಹೈದರಾಬಾದ್ ಬೀದರ್​ನ ಒಳಕೊಟೆಯ ಪುದಿನಾ ಎಂದರೆ ಮುಗಿಬಿದ್ದು ಖರೀದಿಸುತ್ತಾರೆ. ಅಷ್ಟೊಂದು ಸುವಾಸನೆ ಇಲ್ಲಿ ಬೆಳೆಯುವ ಪುದಿನಾದಾಗಿದ್ದು, ಮುಸ್ಲಿಂ ಹಬ್ಬದಲ್ಲಿ ಈ ಪುದಿನಾಗೆ ಬಾರೀ ಬೇಡಿಕೆಯಿದೆ.

ಆದರೀಗ ಕಳೆದೆರಡು ವರ್ಷದಿಂದ ಇಲ್ಲಿ ತರಕಾರಿ ಬೆಳೆ ಬೆಳೆಯುವುದನ್ನು ರೈತರು ನಿಲ್ಲಿಸಿದ್ದು, ಒಂದು ವೇಳೆ ತರಕಾರಿ ಬೆಳೆಯಲಿಕ್ಕೆ ಹೋದರು ಕೂಡಾ ಇಲ್ಲಿ ತರಕಾರಿ ಬೆಳೆ ಬರುತ್ತಿಲ್ಲ. ಅದಕ್ಕೆ ಕಾರಣವೆಂದರೆ ಬೀದರ್ ನಗರದ ಚರಂಡಿ ನೀರು ಒಳಕೋಟೆಯೊಳಗಿರುವ ಜಮೀನಿಗೆ ಬರುತ್ತಿದೆ. ಹೀಗಾಗಿ ಇಲ್ಲಿ ತರಕಾರಿ ಬೆಳೆ ಬಾರದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರೈತ ನಾಗೇಶೆಟ್ಟಿ ಪಾಟೀಲ್ ಹೇಳಿದ್ದಾರೆ.

ಈ ಊರಲ್ಲಿರುವ ಎಲ್ಲರೂ ತರಕಾರಿ ಬೆಳೆ ಬೆಳೆದೇ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ತರಕಾರಿ ಬೆಳೆಯುತ್ತಿದ್ದ ರೈತರೀಗ ತಿಂಗಳಿಗೆ ಸಾವಿರ ಲೆಕ್ಕದಲ್ಲಿ ತರಕಾರಿ ಬೆಳೆದು ಬಂದ ಹಣದಲ್ಲಿಯೇ ಉಪ ಜೀವನ ನಡೆಸುವಂತಾಗಿದೆ. ಐದಾರು ವರ್ಷದಿಂದ ನಗರದ ಕೊಳಚೆ ನೀರು ಇಲ್ಲಿನ ಜಮೀನಿಗೆ ಬರುತ್ತಿದೆ. ಆದರೆ ಈಗ ಕಳೆದ ಎರಡು ವರ್ಷದಲ್ಲಿ ಇಲ್ಲಿಗೆ ಹರಿದು ಬರುವ ನೀರು ದುಪ್ಪಟ್ಟಾಗಿದ್ದು ಲಕ್ಷಾಂತರ ಲೀಟರ್ ನೀರು ಇಲ್ಲಿನ ಜಮೀನಿಗೆ ಬಂದು ನಿಲ್ಲುತ್ತಿದೆ. ಹೀಗಾಗಿ ಇಲ್ಲಿ ತರಕಾರಿ ಬೆಳೆಯಲು ಸಾಧ್ಯವಾಗುತ್ತಿಲ್ಲ.

ಕೊಳಚೆ ನೀರು ಇಲ್ಲದ ಜಮೀನಿನಲ್ಲಿ ತರಕಾರಿ ಬೆಳೆ ಬೆಳೆಯೋಣವೆಂದರೆ ಇಲ್ಲಿನ ಬಾವಿಯಲ್ಲಿ ಅದೆ ಕೊಳಚೆಯ ವಿಷಕಾರಿ ನೀರು ಸೇರಿಕೊಂಡಿದ್ದು, ಆ ನೀರು ಹೊಲಕ್ಕೆ ಬಿಟ್ಟು ತರಕಾರಿ ಬೆಳೆದರೆ ಉತ್ತಮ ಇಳುವರಿ ಬರುತ್ತಿಲ್ಲ. ಇದು ಸಹಜವಾಗಿಯೇ ಇಲ್ಲಿನ ರೈತರನ್ನು ಕಂಗೆಡಿಸಿದೆ. ಈ ವಿಚಾರದ ಬಗ್ಗೆ ಹತ್ತಾರು ಸಲ, ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಇವರ ಸಮಸ್ಯೆಯನ್ನು ಹೇಳಿಕೊಂಡರು ಏನು ಪ್ರಯೋಜನವಾಗುತ್ತಿಲ್ಲ ಹೀಗಾಗಿ ರೈತರು ಕೈಕಟ್ಟಿಕೊಂಡು ಕುಳಿತುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ.

ನಿಜಾಮರ ಕಾಲದಲ್ಲಿಯೂ ಇದೇ ಜಾಗದಲ್ಲಿ ಬೆಳೆದ ತರಕಾರಿಯನ್ನು ಅಂದಿನಕಾಲದ ರಾಜ ಮಹಾರಾಜರು ಸೇವನೆ ಮಾಡುತ್ತಿದ್ದರು ಎಂದು ಕೂಡಾ ಇಲ್ಲಿ ಹೇಳಲಾಗುತ್ತಿದೆ. ಇನ್ನೋಂದು ವಿಶೇಷವೆಂದರೇ ಎಂತಹ ಸಮಯದಲ್ಲಿಯೂ ಇಲ್ಲಿನ ಬಾವಿಯಲ್ಲಿ ನೀರು ಖಾಲಿಯಾಗುವುದಿಲ್ಲ. ಒಂದೇ ಒಂದು ಬಾವಿಯ ನೀರು ಇಲ್ಲಿನ 200 ಎಕರೆಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಟಿದೆ. ಆದರೆ ಈಗ ನಗರದ ಚರಂಡಿ ನೀರು ರೈತರ ಹೊಲಕ್ಕೆ ನುಗ್ಗಿ ಇಲ್ಲಿನ ರೈತರ ಬದುಕನ್ನು ಬೀದಿಗೆ ತಳ್ಳಿದ್ದು ದುರಂತವೇ ಸರಿ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ನಿರಂತರ ಮಳೆಯಿಂದ ಕಲಬುರಗಿ ರೈತರು ಕಂಗಾಲು; ಜಮೀನಿನಲ್ಲಿ ಕೊಳೆಯುತ್ತಿರುವ ತೊಗರಿ ಬೆಳೆ

ಬೀದರ್: 1 ಎಕರೆಯಲ್ಲಿ ಭರಪೂರ ಬೆಳೆ; ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತನ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್

Published On - 8:43 am, Mon, 18 October 21