AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕಂದಗಿರಿಯಲ್ಲಿ ಟ್ರೆಕ್ಕಿಂಗ್​​ಗೆ ಮತ್ತೆ ಅವಕಾಶ: ವಾರಾಂತ್ಯದಲ್ಲಿ ಶುಲ್ಕ ಹೆಚ್ಚಳಕ್ಕೆ ಚಾರಣಿಗರಿಂದ ತೀವ್ರ ಆಕ್ಷೇಪ

ಆರು ತಿಂಗಳ ಬಳಿಕ ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟದಲ್ಲಿ ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದ್ದು, ವಾರಾಂತ್ಯದಲ್ಲಿ ಶುಲ್ಕವನ್ನು 500 ರೂ.ಗೆ ಹೆಚ್ಚಿಸಿರುವುದಕ್ಕೆ ಚಾರಣಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸ್ಕಂದಗಿರಿಗೆ ವಿಶೇಷವಾಗಿ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಶುಲ್ಕವನ್ನು ದುಪ್ಪಟ್ಟು ಮಾಡಿದ್ದರೂ, ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ ಎಂದು ಹಲವರು ದೂರಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಕಂದಗಿರಿಯಲ್ಲಿ ಟ್ರೆಕ್ಕಿಂಗ್​​ಗೆ ಮತ್ತೆ ಅವಕಾಶ: ವಾರಾಂತ್ಯದಲ್ಲಿ ಶುಲ್ಕ ಹೆಚ್ಚಳಕ್ಕೆ ಚಾರಣಿಗರಿಂದ ತೀವ್ರ ಆಕ್ಷೇಪ
ಸ್ಕಂದಗಿರಿ ಟ್ರೆಕ್ಕಿಂಗ್​​ಗೆ ವಾರಾಂತ್ಯ ಶುಲ್ಕ ಹೆಚ್ಚಳ: ಚಾರಣಿಗರ ಆಕ್ಷೇಪImage Credit source: karnatakatourism.org
ಪ್ರಸನ್ನ ಹೆಗಡೆ
|

Updated on:Oct 15, 2026 | 11:59 AM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​​ 15: ಆರು ತಿಂಗಳ ಸ್ಥಗಿತದ ಬಳಿಕ ಬೆಂಗಳೂರಿಗೆ ಸಮೀಪವಿರುವ ಸ್ಕಂದಗಿರಿ ಬೆಟ್ಟದ ಚಾರಣಕ್ಕೆ ಅವಕಾಶ ನೀಡಲಾಗಿದೆಯಾದರೂ, ವಾರಾಂತ್ಯದಲ್ಲಿ ಚಾರಣದ ಶುಲ್ಕ ಹೆಚ್ಚಳವೀಗ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ವಾರದ ದಿನಗಳಲ್ಲಿ ಪ್ರತಿ ವ್ಯಕ್ತಿಗೆ 250 ರೂಪಾಯಿ ಶುಲ್ಕವಿದ್ದರೆ, ಶನಿವಾರ ಮತ್ತು ಭಾನುವಾರ ಪ್ರತಿ ವ್ಯಕ್ತಿಗೆ 500 ರೂಪಾಯಿ ಪಾವತಿಸಬೇಕಿದೆ. ಈ ನಿರ್ಧಾರದ ಬಗ್ಗೆ ಕೆಲ ಚಾರಣಿಗರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಅಧಿಕಾರಿಗಳು ಮಾತ್ರ ವಾರಾಂತ್ಯದ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ.

ಜನಪ್ರಿಯ ಚಾರಣ ಸ್ಥಳಗಳಲ್ಲಿ ಸರಣಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಸ್ಕಂದಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ನಿಷೇಧಿಸಲಾಗಿತ್ತು. ಅಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ ಬಳಿಕ ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದ ಎಸ್​​ಒಪಿ ನಿಯಮಗಳನ್ನು ಪಾಲಿಸಿ ಚಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಅವಕಾಶ ನೀಡಿದ್ದಾರೆ. ಪ್ರವಾಸಿಗರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಹೊಸ ವ್ಯವಸ್ಥೆಯಡಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮೊಬೈಲ್ ನೆಟ್‌ವರ್ಕ್ ಲಭ್ಯವಿರುವ ಸ್ಥಳಗಳನ್ನು ಗುರುತಿಸಲಾಗಿದೆ. ನಿಯಂತ್ರಣ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಿಯನ್ನು ನಿಯೋಜಿಸಲಾಗುತ್ತದೆ. ಗುಂಪಿನಲ್ಲಿರುವ ಎಲ್ಲರ ಸಂಪರ್ಕ ವಿವರಗಳು ಮಾರ್ಗದರ್ಶಿಯ ಬಳಿ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  ಚಾರಣ ಪ್ರಿಯರಿಗೆ ಗುಡ್​ನ್ಯೂಸ್​! ಆರು ತಿಂಗಳ ಬಳಿಕ ಸ್ಕಂದಗಿರಿಯಲ್ಲಿ ಮತ್ತೆ ಟ್ರೆಕ್ಕಿಂಗ್ ಶುರು

‘ಶುಲ್ಕ ಹೆಚ್ಚಳ ಮಾಡಲಾಗಿದೆಯಾದರೂ ಹೆಚ್ಚಿನ ಸೌಲಭ್ಯಗಳಿಲ್ಲ’

ಆದರೆ, ವಾರಾಂತ್ಯದಲ್ಲಿ ಶುಲ್ಕವನ್ನು ದುಪ್ಪಟ್ಟು ಮಾಡಿರುವ ನಿರ್ಧಾರಕ್ಕೆ ನಿಯಮಿತ ಚಾರಣಿಗರಿಂದ ವಿರೋಧ ವ್ಯಕ್ತವಾಗಿದೆ. ಸ್ಕಂದಗಿರಿಗೆ ವಿಶೇಷವಾಗಿ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಶುಲ್ಕವನ್ನು ದುಪ್ಪಟ್ಟು ಮಾಡಿದ್ದರೂ, ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ. ಬೆಟ್ಟದ ಕಡೆಗೆ ಹೋಗುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಪರಿಸರ ಸ್ನೇಹಿ ವಾಹನಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲ. ಕನಿಷ್ಠ ಪಕ್ಷ ಪರಿಸರ ಪ್ರವಾಸೋದ್ಯಮ ಇಲಾಖೆ ಭದ್ರತೆ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂದು ಚಾರಣಿಗರೊಬ್ಬರು ಹೇಳಿದ್ದಾರೆ.ಹೊಸ ಶುಲ್ಕದಿಂದ ಕುಟುಂಬಗಳಿಗೆ ಚಾರಣ ದುಬಾರಿಯಾಗಲಿದೆ. ನಾಲ್ವರು ಕುಟುಂಬ ಸದಸ್ಯರು ತಲಾ 500 ರೂಪಾಯಿ ಪಾವತಿಸಿದರೆ ಒಟ್ಟು 2,000 ರೂಪಾಯಿ ಆಗುತ್ತದೆ. ಗುಂಪು ಟಿಕೆಟ್‌ಗಳ ವ್ಯವಸ್ಥೆಯೂ ಇಲ್ಲದಿರುವಾಗ ಇದು ಬಹಳ ಹೊರೆಯಾಗಲಿದೆ ಎಂದು ಮತ್ತೊಬ್ಬ ಪ್ರವಾಸಿಗರು ತಿಳಿಸಿರೋದಾಗಿ ಬೆಂಗಳೂರು ಮಿರರ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:17 am, Thu, 15 October 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More