ಚಿಕ್ಕಮಗಳೂರು: ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಣ್ಮರೆ; ಎಲೆಚುಕ್ಕೆ ರೋಗದಿಂದ ಕಂಗಾಲಾದ ಅಡಿಕೆ ಬೆಳೆಗಾರರು

ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನು ತಿನ್ನುತ್ತ ಬರುತ್ತದೆ. ಕ್ರಮೇಣ ಸುಳಿಯನ್ನು ತಿಂದ ಮೇಲೆ ಮರ ಸತ್ತೆ ಹೋಗುತ್ತದೆ. ಅಡಿಕೆ ಮರಗಳಲ್ಲಿ ಕಂಡು ಬರುವ ಈ ರೋಗ ಗರಿಗಳ ಮೂಲಕ ಹರಡುತ್ತದೆ. ಗರಿಯಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕೆಗಳು ಗೋಚರಿಸುತ್ತವೆ.

ಚಿಕ್ಕಮಗಳೂರು: ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಣ್ಮರೆ; ಎಲೆಚುಕ್ಕೆ ರೋಗದಿಂದ ಕಂಗಾಲಾದ ಅಡಿಕೆ ಬೆಳೆಗಾರರು
ಎಲೆ ಚುಕ್ಕೆರೋಗ

ಚಿಕ್ಕಮಗಳೂರು: ಮಲೆನಾಡಲ್ಲಿ ವಾಣಿಜ್ಯ ಮತ್ತು ಸಾಂಪ್ರದಾಯಿಕ ಬೆಳೆಯಾದ ಅಡಿಕೆಗೆ ಕಳೆದ 4 ದಶಕಗಳಿಂದ ಬಿಡದೆ ಕಾಡುತ್ತಿರುವ ಹಳದಿ ಎಲೆ ರೋಗದ ಕಾಟಕ್ಕೆ ನಲುಗಿ ಹೋಗಿದೆ. ಇದರಿಂದ ಕೃಷಿಕರು ಕುಗ್ಗಿಹೋಗಿದ್ದರು. ಇದೀಗ ಒಂದು ವರ್ಷದಿಂದ ಬಾಧಿಸುತ್ತಿರುವ ಎಲೆ ಚುಕ್ಕೆರೋಗ ರೈತರನ್ನು ಇನ್ನಷ್ಟು ಕಂಗಲಾಗಿಸಿದೆ. ಸ್ವಂತ ಮಕ್ಕಳಂತೆ ಪೋಷಿಸಿದ ಮರಗಳು ಇದೀಗ ತಮ್ಮ ಕಣ್ಣೆದುರೇ ನಶಿಸಿ ಹೋಗುತ್ತಿರುವುದನ್ನು ಕಂಡು ರೈತರು ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ.

ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಣ್ಮರೆ!
ಯಾವುದನ್ನು ತಮ್ಮ ಜೀವನದ ಆಧಾರ ಅಂದುಕೊಂಡಿದ್ದರೋ ಅದೇ ಅಡಿಕೆ ಮರಗಳು ಇದೀಗ ಅಡಿಕೆ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸಿದ್ದು, ಅಡಿಕೆ ಬೆಳೆಗಾರರ ಪರಿಸ್ಥಿತಿ ಮೀನನ್ನು ನೀರಿನಿಂದ ತೆಗೆದು ಹೊರಹಾಕಿದಂತಾಗಿದೆ. ಶೃಂಗೇರಿಯ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನ ಶೇಕಡಾ 80ರಷ್ಟು ಅಡಿಕೆ ತೋಟಗಳಲ್ಲಿ ಇದೀಗ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ಹೇಗಾದರೂ ಮಾಡಿ ಈ ರೋಗವನ್ನು ಮಟ್ಟ ಹಾಕಬೇಕು ಎಂದು ರೈತರು ಇನ್ನಿಲ್ಲದ ಕಸರತ್ತು ಮಾಡುತ್ತಾ ಬಂದರೂ ಹತೋಟಿಗೆ ಬಾರದೇ ಇರುವುದು ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ಶೃಂಗೇರಿ ಭಾಗದಲ್ಲಿ ಅಡಿಕೆ ಬೆಳೆಯುತ್ತಿದ್ದು, ಇದೀಗ ಒಮ್ಮೆಲ್ಲೇ ಅಡಿಕೆಗೆ ರೋಗ ತಗುಲಿರುವುದು ಜನರನ್ನು ಚಿಂತೆಗೆ ದೂಡಿದೆ.

ಹಳದಿ ರೋಗಕ್ಕಿಂತ ಡೇಂಜರ್? ಎಲೆಚುಕ್ಕೆ ರೋಗದ ಲಕ್ಷಣಗಳೇನು?
ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನು ತಿನ್ನುತ್ತ ಬರುತ್ತದೆ. ಕ್ರಮೇಣ ಸುಳಿಯನ್ನು ತಿಂದ ಮೇಲೆ ಮರ ಸತ್ತೆ ಹೋಗುತ್ತದೆ. ಅಡಿಕೆ ಮರಗಳಲ್ಲಿ ಕಂಡು ಬರುವ ಈ ರೋಗ ಗರಿಗಳ ಮೂಲಕ ಹರಡುತ್ತದೆ. ಗರಿಯಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕೆಗಳು ಗೋಚರಿಸುತ್ತವೆ. ಹಾಗಾಗಿ ಗರಿಗಳು ಕೆಂಪಾಗಿ, ಮರದ ತುಂಡೆ ಸಣ್ಣದಾಗಿ ಅಡಿಕೆ ಮರಗಳು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಅಡಿಕೆಯ ಗರಿಗಳು ಬಾಗಿ ಕ್ರಮೇಣ ಒಣಗಿ ಹೋಗುತ್ತದೆ. ಅಡಿಕೆ ಕಾಯಿಗಳು ಒಡಕು ಕಾಣಿಸಿಕೊಂಡು ಮರದಿಂದ ಬೀಳುತ್ತದೆ. ಇದಾದ ಬಳಿಕ ಒಂದು ವರ್ಷದಲ್ಲಿ ಅಡಿಕೆ ಮರಗಳು ಸತ್ತು ಹೋಗುತ್ತದೆ. ಅಲ್ಲಿಗೆ ಈ ರೋಗ ಕೆಲ ದಶಕಗಳ ಹಿಂದೆ ಕಾಣಿಸಿಕೊಂಡ ಹಳದಿ ರೋಗಕ್ಕಿಂತ ಅಪಾಯಕಾರಿ ಆಗಿದೆ.

ಈಗಾಗಲೇ ಹಳದಿ ರೋಗದ ಬಗ್ಗೆ ಈ ಭಾಗದ ಜನರಿಗೆ ಅರಿವಿದ್ದು, ಅನೇಕ ವರ್ಷಗಳಿಂದ ಅಡಿಕೆ ಮರಗಳಿಗೆ ಹಳದಿ ರೋಗ ತಗುಲಿದರೂ ಫಸಲನ್ನು ಉಳಿಸಿಕೊಳ್ಳುವಲ್ಲಿ ಅಡಿಕೆ ಬೆಳೆಗಾರರು ಇಂದಿಗೂ ಯಶಸ್ವಿಯಾಗಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಕಾಣಿಸಿಕೊಳ್ಳುತ್ತಿರೋ ಈ ಎಲೆಚುಕ್ಕೆ ರೋಗದಿಂದ ಸಂಪೂರ್ಣವಾಗಿ ಅಡಿಕೆ ಮರಗಳು ಸತ್ತು ಹೋಗುತ್ತಿರುವುದು ಜನರನ್ನು ಸಂಕಷ್ಟಕ್ಕೆ ದೂಡಿದೆ.

farmer

ಅಡಿಕೆ ಬೆಳೆಗಾರರಲ್ಲಿ ಆತಂಕ

ಅತಿಯಾದ ಶೀತ ಎಲೆಚುಕ್ಕಿ ರೋಗಕ್ಕೆ ಆಹ್ವಾನ ನೀಡುತ್ತಾ?
ಈ ಹಿಂದೆ ಗುಡ್ಡಕ್ಕೆ ಬೆಂಕಿ ಬೀಳುವುದು ಮತ್ತು ಕಾಡ್ಗಿಚ್ಚು ಬೀಳುವುದರಿಂದ ಹುಳಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವು. ಹೀಗಾಗಿ ಅರಣ್ಯದ ಅಂಚಿನಲ್ಲಿರುವ ಅಡಕೆ ತೋಟಗಳ ಕಡೆಗೆ ಹುಳಗಳು ವಲಸೆ ಬರೋದು ತುಂಬಾ ಕಡಿಮೆಯಿತ್ತು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಮಳೆ ಜಾಸ್ತಿಯಾಗಿ ಕಾಡ್ಗಿಚ್ಚು ಹತೋಟಿಗೆ ಬಂದ ಕಾರಣ ಹುಳಗಳ ಸಂತತಿ ಜಾಸ್ತಿಯಾಗಿದೆ. ಆದ್ದರಿಂದ ತೋಟಗಳ ಮೇಲೆ ಈ ರೋಗ ಪರಿಣಾಮ ಬೀರಿದೆ ಎಂದು ಸ್ಥಳೀಯರ ಅಭಿಪ್ರಾಯಪಟ್ಟಿದ್ದಾರೆ.

ಎಷ್ಟೇ ಔಷಧಿ ಕಂಡುಹಿಡಿದು ಕೀಟನಾಶಕ ಸಿಂಪಡಿಸಿದರು ಬೇರುಹುಳ ಬಾಧೆ, ಹಳದಿ ಎಲೆ ರೋಗ, ಮತ್ತಿತರ ರೋಗಗಳು ಕಾಡಿದಾಗ ತೋಟಗಳ ನಿರ್ವಹಣೆಯನ್ನು ಸವಾಲಾಗಿ ಸ್ವೀಕರಿಸಿದ ರೈತರು ಸ್ವಲ್ಪ ಮಟ್ಟಿಗೆ ನೆಮ್ಮದಿ ಕಂಡುಕೊಂಡಿದ್ದರು. ಆದರೆ ಇದೀಗ ಕೃಷಿಕರಿಗೆ ಎಲೆ ಚುಕ್ಕೆರೋಗ ತಲೆನೋವು ತಂದಿದ್ದು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲ್ಲು ಹರಸಾಹಸ ಪಡುತ್ತಿದ್ದಾರೆ. ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೊರಿದ್ದಾರೆ.

ತಲೆಕೆಡಿಸಿಕೊಳ್ಳದ ಅಡಿಕೆ ಸಂಶೋಧನ ಕೇಂದ್ರದ ಅಧಿಕಾರಿಗಳು!
ಈ ಬಗ್ಗೆ ಶೃಂಗೇರಿಯ ಅಡಿಕೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ರೈತರು ಪರಿಪರಿಯಾಗಿ ತಮ್ಮ ಸಮಸ್ಯೆಯನ್ನ ಅಧಿಕಾರಿಗಳಿಗೆ, ವಿಜ್ಞಾನಿಗಳಿಗೆ ಹೇಳಿಕೊಂಡಿದ್ರೂ ಸ್ಪಂದಿಸದೇ ಇರೋದು ಇಡೀ ರೈತ ಸಮುದಾಯವನ್ನೇ ಆಂತಕಕ್ಕೆ ದೂಡಿದೆ. ಹೀಗಾದರೆ ನಾವು ಜೀವನ ಮಾಡೋದು ಹೇಗೆ ಅಂತಾ ಕಂಗಲಾಗಿ ಹೋಗಿದ್ದಾರೆ. ಈ ಭಾಗದ ಅಡಿಕೆ ಬೆಳೆಗಾರರು. ಸುಮಾರು 15-20 ವರ್ಷಗಳಿಂದ ಮಕ್ಕಳಂತೆ ಬೆಳೆಸಿದ ಅಡಿಕೆ ಮರಗಳು ಈಗಷ್ಟೇ ಫಸಲು ಕೊಡುವುದಕ್ಕೆ ಶುರುಮಾಡಿತ್ತು. ಆದರೆ ಇದೀಗ ಒಂದು ವರ್ಷದಿಂದ ಸಂಪೂರ್ಣ ಅಡಿಕೆ ತೋಟವೇ ಕಣ್ಣೆದುರೇ ಸರ್ವನಾಶವಾಗ್ತಿದೆ. ಹೀಗಾದರೆ ನಾವು ಹೇಗೆ ಬದುಕೋದು, ಸಾವಿರಾರು ರೂಪಾಯಿ ಕೊಟ್ಟು ಔಷಧಿ ಸಿಂಪಡನೆ ಮಾಡಿ ಸಾಕಾಗಿ ಹೋಗಿದೆ. ಇನ್ನೂ ನೂರು ರೂಪಾಯಿ ಕೊಟ್ಟು ವಿಷ ಕುಡಿಯುವುದು ಮಾತ್ರ ಬಾಕಿಯಿದೆ ಎಂದು ರೈತ ಮಹಿಳೆ ಶಾರದಾ ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ: ಪ್ರಶಾಂತ್

ಇದನ್ನೂ ಓದಿ:
Onion Diseases: ಬೆಲೆ ಕುಸಿತದ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ, ರೈತರು ಕಂಗಾಲು

ದಾಳಿಂಬೆ ಬೆಳೆಗೆ ದುಂಡಾಣು ಅಂಗ ಮಾರಿ ರೋಗಬಾಧೆ; ಟ್ರ್ಯಾಕ್ಟರ್​ನಿಂದ ಬೆಳೆ ನಾಶಕ್ಕೆ ಮುಂದಾದ ಬಳ್ಳಾರಿ ರೈತ

 

Read Full Article

Click on your DTH Provider to Add TV9 Kannada