ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಡೈನಮೈಟ್ ಸ್ಪೋಟ: 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಕಾಮಗಾರಿಯಲ್ಲಿ ಡೈನಮೈಟ್ ಬಳಕೆ ಮಾಡಿ ಕಲ್ಲು ಬಂಡೆ ಬ್ಲಾಸ್ಟ್ ಮಾಡಲಾಗುತ್ತಿದ್ದು, ಇದರಿಂದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ (Upper Bhadra Project) ಕಾಮಗಾರಿಯಲ್ಲಿ ಡೈನಮೈಟ್ (Dynamite) ಬಳಕೆ ಮಾಡಿ ಕಲ್ಲು ಬಂಡೆ ಬ್ಲಾಸ್ಟ್ ಮಾಡಲಾಗುತ್ತಿದ್ದು, ಇದರಿಂದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದಲ್ಲಿ ಯೋಜನೆಯ ಕಾಮಗಾರಿ ನಡೆದಿದ್ದು, ಕಾಮಗಾರಿ ವೇಳೆ ಸಿಗುವ ಕಲ್ಲು ಬಂಡೆಗಳನ್ನು ಒಡೆಯಲು ವಿಶ್ವೇಶ್ವರಯ್ಯ ಜಲ ನಿಗಮ (Visvesvaraya Jala Nigam Limited) ಸಿಬ್ಬಂದಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬ್ಲಾಸ್ಟ್ ತೀವ್ರತೆಗೆ ಮನೆಗಳ ಗೋಡೆಗಳು ಬಿರುಕು ಬೀಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರು. ಅಲ್ಲದೇ 5,300 ಕೋಟಿ ರೂಪಾಯಿ ಮೀಸಲಿಡುವುದಾಗಿ ಹೇಳಿದರು.
ಏನಿದು ಮೇಲ್ದಂಡೆ ಯೋಜನೆ? ಯಾರಿಗೆ ಲಾಭ?
ಮಧ್ಯ ಕರ್ನಾಟಕದ ಕುಡಿಯುವ ನೀರು ಹಾಗೂ ನೀರಾವರಿಯ ಉದ್ದೇಶಕ್ಕಾಗಿ ಜಾರಿಗೊಳಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದರಿಂದ ಆ ಯೋಜನೆಗೆ ಮತ್ತಷ್ಟು ಬಲ ಬರಲಿದ್ದು, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಹಲವಾರು ಮಳೆಯಾಧಾರಿತ ಕೃಷಿ ಜಿಲ್ಲೆಗಳಿಗೆ ವರದಾನವಾಗಲಿದೆ. ಇದರಿಂದ ಯೋಜನೆಯನ್ನು ತ್ವರಿತವಾಗಿ ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ, ಸಿದ್ದರಾಮಯ್ಯ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ಷೇಪ
ಭದ್ರಾ ಮೇಲ್ದಂಡೆ ಯೋಜನೆಯಡಿ, ಭದ್ರಾ ನದಿಯಿಂದ 29.90 ಟಿ.ಎಂ.ಸಿ. ನೀರಿನ ಬಳಕೆ ಮಾಡಲು ಅವಕಾಶವಿದೆ. ಅದಕ್ಕೆ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಜೊತೆಗೆ, ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ.
ಎರಡು ಹಂತದ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇಯ ಹಂತದಲ್ಲಿ ಮೂರು ಪ್ಯಾಕೇಜ್ ಗಳಲ್ಲಿ ನಡೆಯಲಿದೆ. ಮೊದಲನೇ ಹಂತದ ಮೊದಲ ಪ್ಯಾಕೇಜ್ ತುಂಗಾ ನದಿಯಿಂದ 17.40 ಟಿ.ಎಂ.ಸಿ ನೀರನ್ನು ಲಿಫ್ಟ್ ಮಾಡಲಿದೆ. ಈ ಮೂಲಕ ಭದ್ರಾ ಜಲಾಶಯಕ್ಕೆ ನೀರು ಹರಿಸುತ್ತದೆ. ಸದ್ಯ ಈ ಕಾಮಾಗಾರಿ ಪ್ರಗತಿಯಲ್ಲಿದೆ. ಇನ್ನು ಪ್ಯಾಕೇಜ್ 2ರಲ್ಲಿ ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಇದನ್ನು ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಕಾಮಗಾರಿಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.
ಕೊನೆಯ ಹಾಗೂ ಮೂರನೇ ಪ್ಯಾಕೇಜ್ ನಲ್ಲಿ ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವುದು. ಇದು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಇನ್ನು ಎರಡನೇಯ ಹಂತದಲ್ಲೂ ತರೀಕೆರೆ ಏತ ನೀರಾವರಿ, ಚಿತ್ರದುರ್ಗ ಶಾಖಾ ಕಾಲುವೆ, ತುಮಕೂರು ಶಾಖಾ ಕಾಲುವೆ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ.
2000ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ
ಇನ್ನು 2000ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಘೋಷಿಸಲಾಯ್ತು. 2003ರಲ್ಲಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2008ರಲ್ಲಿ ಯೋಜನೆಗೆ ಚಾಲನೆ ದೊರಕಿತ್ತು. ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವುದು ವಿಳಂಬವಾಯಿತು. ಅಲ್ಲದೇ ವೆಚ್ಚ ಹೆಚ್ಚಳ ಸೇರಿದಂತೆ ನಾನಾ ಕಾರಣಗಳಿಂದ ಯೋಜನೆ ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿದೆ. ಸದ್ಯ ಕೇಂದ್ರದ ನೆರವಿನಿಂದ ಮತ್ತಷ್ಟು ಉತ್ತೇಜನ ದೊರೆತಿದ್ದು, ವೇಗವಾಗಿ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 10 March 23