ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಜೆಪಿಗೆ 3 ಮತಗಳ ರೋಚಕ ಗೆಲುವು, ಜಿದ್ದಾಜಿದ್ದಿ ರಣಕಣದಲ್ಲಿ ಗೆದ್ದು ಸೋತ ಕಾಂಗ್ರೆಸ್ ಅಭ್ಯರ್ಥಿ

ಇಡೀ ರಾಜ್ಯದಲ್ಲೇ ಅತ್ಯಂತ ಕುತೂಹಲ ಕೆರಳಿಸಿದ ಕಾಫಿನಾಡಿನ ಜಿದ್ದಾಜಿದ್ದಿನ ಕಣದಲ್ಲಿ ಬಿಜೆಪಿ ತಿಣುಕಾಡಿ ಗೆಲುವಿನ ನಿಟ್ಟುಸಿರು ಬಿಟ್ಟಿದ್ದು ಹೇಗೆ? ಇಲ್ಲಿದೆ ರೋಚಕ ಕಣದ ವಿವರ.

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಜೆಪಿಗೆ 3 ಮತಗಳ ರೋಚಕ ಗೆಲುವು, ಜಿದ್ದಾಜಿದ್ದಿ ರಣಕಣದಲ್ಲಿ ಗೆದ್ದು ಸೋತ ಕಾಂಗ್ರೆಸ್ ಅಭ್ಯರ್ಥಿ
ರೋಚಕ ಹಣಾಹಣಿಯ ನಂತರ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಬಿಜೆಪಿಗೆ ಒಲಿಯಿತು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 14, 2021 | 10:58 PM

ಚಿಕ್ಕಮಗಳೂರು: ಅಂತೂ ಇಂತೂ ಪರಿಷತ್ ಚುನಾವಣೆ ಮುಗಿದಿದೆ. ಕಾಫಿನಾಡಿನಲ್ಲಿ ಇನ್ನೇನು ಮುಗ್ಗರಿಸಿ ಬಿಡ್ತು ಅನ್ನುವಷ್ಟರಲ್ಲಿ ಮೇಲೆದ್ದು ಸಾವರಿಸಿಕೊಂಡ ಬಿಜೆಪಿ ಕೇವಲ 3 ಮತಗಳ ಅಂತರದಲ್ಲಿ ಏದುಸಿರು ಬಿಟ್ಟು ಗೆಲುವಿನ ದಡ ತಲುಪಿದೆ. ಇಡೀ ರಾಜ್ಯದಲ್ಲೇ ಅತ್ಯಂತ ಕುತೂಹಲ ಕೆರಳಿಸಿದ ಕಾಫಿನಾಡಿನ ಜಿದ್ದಾಜಿದ್ದಿನ ಕಣದಲ್ಲಿ ಬಿಜೆಪಿ ತಿಣುಕಾಡಿ ಗೆಲುವಿನ ನಿಟ್ಟುಸಿರು ಬಿಟ್ಟಿದ್ದು ಹೇಗೆ? ತೀವ್ರ ಪೈಪೋಟಿ ಕೊಟ್ಟ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಕೋರ್ಟ್ ಮೆಟ್ಟಿಲೇರಲು ಹೋಗಿದ್ದೇಕೆ ಎನ್ನುವುದರ ಸಂಪೂರ್ಣ ವಿವರ ನೀಡಿದ್ದಾರೆ ಚಿಕ್ಕಮಗಳೂರು ವರದಿಗಾರ ಪ್ರಶಾಂತ್.

ಚಿಕ್ಕಮಗಳೂರು ಜಿಲ್ಲೆ 70ರ ದಶಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯವಾಗಿ ಮರುಜನ್ಮ ಕೊಟ್ಟ ಜಿಲ್ಲೆ. ಅಂದೇ ರಾಷ್ಟ್ರದ ಗಮನ ಸೆಳೆದಿದ್ದ ಕಾಫಿನಾಡು, ಆಗಾಗ ರಾಜ್ಯ, ರಾಷ್ಟ್ರದ ಜನರನ್ನ ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಅದಕ್ಕೆ ಈ ಬಾರಿ ನಡೆದ ಪರಿಷತ್ ಚುನಾವಣೆ ಕೂಡ ಹೊರತಾಗಿರಲಿಲ್ಲ. ಈ ಬಾರಿ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ ಅವರು, ಟಿಕೆಟ್ ಖಾತ್ರಿ ಮಾಡಿಕೊಂಡರೂ ಗೆಲುವು ಮಾತ್ರ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಮಧ್ಯೆ ರಣೋತ್ಸಾಹ ತೋರಿದ್ದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡರ ಛಲ ಕಮಲ ಪಡೆಯನ್ನು ಚಕಿತಗೊಳಿಸಿದ್ದು ಸುಳ್ಳಲ್ಲ. ತೀವ್ರ ಕುತೂಹಲ ಕೆರಳಿಸಿದ್ದ ಮತ ಎಣಿಕೆಯಲ್ಲಿ ಇಬ್ಬರ ನಡುವೆ ಆರಂಭದಿಂದಲೂ ಜಿದ್ದಾಜಿದ್ದಿ ಸ್ಪರ್ಧೆ ನಡೆಯುತ್ತಿತ್ತು. ಈ ಬಗ್ಗೆ ಕಳೆದ ಡಿ 6ರಂದು ಟಿವಿ9 ಜಾಲತಾಣವು ವಿಶ್ಲೇಷಣೆ ಪ್ರಕಟಿಸಿ, ಕಾಫಿನಾಡಿನಲ್ಲಿ ಸಮಬಲದ ಹೋರಾಟ ನಡೆಯಲಿದೆ ಎಂದು ತಿಳಿಸಿತ್ತು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 315 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೂ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಸಮಬಲದ ಹೋರಾಟ ನಡೆಯಲಿದೆ ಎನ್ನುವುದನ್ನು ಘಂಟಾಘೋಷವಾಗಿ ಖಚಿತಪಡಿಸಿತ್ತು. ಇಂದು ನಡೆದ ಜಿದ್ದಾಜಿದ್ದಿನ ಹೋರಾಟ ಈ ವಿಶ್ಲೇಷಣೆಯನ್ನು ನಿಜ ಮಾಡಿದೆ.

ಅಭ್ಯರ್ಥಿ ಗೆಲ್ಲಲು 1186 ಮತಗಳ ಟಾರ್ಗೆಟ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 2410 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಬರೋಬ್ಬರಿ 39 ಮತಗಳು ಅಸಿಂಧು ಆಗಿದ್ದರಿಂದ ಉಳಿದ 2371 ಮತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮೊದಲ ಪ್ರಾಶಸ್ತ್ಯದ ಮತಗಳನ್ನು ಯಾರು ಪಡೆಯುವರೋ ಅವರಿಗೆ ಗೆಲುವಿನ ಕಿರೀಟ ಸಿಕ್ಕಂತೆ ಆಗುತ್ತದೆ. ಅಂದರೆ 1186 (2371/2) ಮತಗಳನ್ನು ತಲುಪುವ ಅಭ್ಯರ್ಥಿಗೆ ವಿಜಯ ಖಾತ್ರಿಯಾಗುತ್ತದೆ. ಈ ಹಂತದಲ್ಲಿಯೇ ಕೈ-ಕಮಲ ಅಭ್ಯರ್ಥಿಗಳ ನಡುವೆ ರೋಚಕ ಸ್ಪರ್ಧೆ ಆರಂಭವಾಯಿತು.

ಒಮ್ಮೆ ಬಿಜೆಪಿ ಅಭ್ಯರ್ಥಿ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸನಿಹಕ್ಕೆ ಬರುತ್ತಿದ್ದರು. ಮತ ಎಣಿಕೆ ಕೇಂದ್ರದಲ್ಲಿದ್ದ ಪಕ್ಷದ ಏಜೆಂಟರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಸಹ ಈ ರೋಚಕ ಸ್ಪರ್ಧೆ ನೋಡಿ ಅಚ್ಚರಿಪಡುತ್ತಿದ್ದರು. ಇಬ್ಬರ ನಡುವಿನ ಕಾದಾಟ ಹಾವು-ಏಣಿ ಆಟದಂತೆ ಬದಲಾಗುತ್ತಲೇ ಇತ್ತು. ಮೊದಮೊದಲು 20, 30 ಮತಗಳಿಗಿಂತ ಹೆಚ್ಚು ಮುನ್ನಡೆ ಪಡೆದಿದ್ದ ಎಂ.ಕೆ.ಪ್ರಾಣೇಶ್, ಆ ಬಳಿಕ ಬಂದ ಫಲಿತಾಂಶ ನೋಡಿ ಕಂಗಾಲಾಗುವಂತಾಯ್ತು. ಜಯದ ಮಾಲೆ ತೂಗೂಯ್ಯಲೆಯಂತೆ ಆ ಕಡೆ-ಈ ಕಡೆ ವಾಲುತ್ತಿತ್ತು. ಮತ ಎಣಿಕೆ ಕೇಂದ್ರದಲ್ಲಿದ್ದ ಕೈ-ಕಮಲ ಅಭ್ಯರ್ಥಿಗಳಲ್ಲಿ ಕಂಪನ ಶುರುವಾಗುತ್ತಿತ್ತು. ಅಂತೂ ಇಂತೂ ಕೊನೆಗೆ ಬಿಜೆಪಿ ಅಭ್ಯರ್ಥಿ 1188 ಮತಗಳನ್ನು ಪಡೆದರೆ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ 1182 ಮತಗಳನ್ನು ಪಡೆದು ಗೆಲುವಿನ ಸನಿಹ ಬಂದು ಸೋಲು ಅನುಭವಿಸುವಂತಾಯ್ತು. ಅಂದರೆ ಗೆಲುವಿಗೆ ನಿಗದಿಯಾಗಿದ್ದ ಮತಗಳಿಗಿಂತ ಕೇವಲ 3 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ನಿಟ್ಟುಸಿರುಬಿಟ್ಟರು. ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ ಎಂ.ಕೆ.ಪ್ರಾಣೇಶ್, ನಾನು ಈ ರೀತಿಯ ಹೋರಾಟ ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಫೈಟ್ ಕೊಟ್ಟಿದ್ದಾರೆ. ಗೆಲುವು ಖುಷಿ ಕೊಟ್ಟಿದೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: MLC Election Results: ಈ 10 ಕಾರಣಗಳಿಂದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿಗೆ ಸಮಸ್ಯೆ ತಂದೊಡ್ಡಲಿದೆ

Congress-Workers

ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರು

ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಕೇವಲ 3 ಮತಗಳ ಅಂತರದಿಂದ ಪರಾಭವಗೊಂಡ ಸುದ್ದಿ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಮರು ಮತ ಎಣಿಕೆಯಾಗಬೇಕು ಎಂದು ಪಟ್ಟು ಹಿಡಿದು ಮತಎಣಿಕೆ ಕೇಂದ್ರದ ಮುಂಭಾಗದಲ್ಲಿ ಧರಣಿ ನಡೆಸಲು ಮುಂದಾದರು. ಪರಿಷತ್ ಚುನಾವಣೆಯಲ್ಲಿ ಪಟ್ಟಣ ಪಂಚಾಯ್ತಿ, ಪುರಸಭೆಗೆ, ಸರ್ಕಾರದಿಂದ ನಾಮ ನಿರ್ದೇಶಿತವಾದ 10 ಮಂದಿ ಮತ ಚಲಾಯಿಸಿದ್ದಾರೆ ಎಂದೂ ವಾದಿಸಿತ್ತು. ಇನ್ನು ಕುತೂಹಲ ಹುಟ್ಟಿಸಿದ್ದು ಅಸಿಂಧುವಾದ 39 ಮತಗಳು. ಈ 39ರಲ್ಲಿ ನಾಲ್ಕು ಮತಗಳು ಕಾಂಗ್ರೆಸ್​ಗೆ ಬಂದಿದ್ದರೂ ಸಾಕಿತ್ತು. ಮರು ಮತ ಎಣಿಕೆ ಮಾಡಿದ್ದರೆ ಅಸಿಂಧು ಮತಗಳಲ್ಲಿ ಯಾವುದಾದರೂ ನಮಗೆ ಪ್ಲಸ್ ಆಗಬಹುದು ಅಂತಾ ಭಾವಿಸಿ ಕಾಂಗ್ರೆಸ್ ಪ್ರತಿಭಟನೆಯಿಂದ ಹಿಂದೆ ಸರಿಯಲೇ ಇಲ್ಲ. ಕೈ-ಕಮಲ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ-ನೂಕಾಟದ ಹಂತಕ್ಕೂ ಹೋಗಿತ್ತು. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.

ಕಣ್ಣೀರಿಟ್ಟ ಪರಾಜಿತ ಅಭ್ಯರ್ಥಿ ಮತ ಎಣಿಕೆ ಕೇಂದ್ರದಿಂದ ಹೊರಬಂದ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಇದು ನನ್ನ ಸೋಲಲ್ಲ, ಗೆಲುವು. ಮತ ಎಣಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದು, ಕೋರ್ಟ್ ಮೆಟ್ಟಿಲೇರುವುದಾಗಿ ಪ್ರತಿಕ್ರಿಯಿಸಿದರು. ಪ್ರತಿಭಟನೆ ಮಾಡುತ್ತಿದ್ದ, ಬಿಕ್ಕಿಬಿಕ್ಕಿ ಅಳುತ್ತಿದ್ದ ಕಾರ್ಯಕರ್ತರನ್ನು ತಾವೇ ಸಮಾಧಾನ ಪಡಿಸಿದರು. ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಮತಗಟ್ಟೆಯಲ್ಲಿ ಅಧಿಕಾರಿಗಳು ಲೋಪವೆಸಗಿದ್ದಾರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಭಾವುಕರಾಗಿ ಕಣ್ಣೀರಿಟ್ಟ ಘಟನೆಯೂ ನಡೆಯಿತು.

ಇದನ್ನೂ ಓದಿ: MLC Election Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ವಿವರ

Gayatri-Shantegowda

ಚಿಕ್ಕಮಗಳೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ

ಜಸ್ಟ್​ ಪಾಸ್​ ಫಲಿತಾಂಶಕ್ಕೆ ಬಿಜೆಪಿಯ ಅತಿ ಆತ್ಮವಿಶ್ವಾಸವೇ ಕಾರಣವೇ? ಗ್ರಾಮ ಪಂಚಾಯಿತಿ ಸದಸ್ಯರೇ ಪರಿಷತ್ ಸದಸ್ಯರನ್ನು ಚುನಾಯಿಸುವ ಹಕ್ಕು ಹೊಂದಿರುವ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ದಿನದಿಂದಲೇ ಬಿಜೆಪಿಗೆ ಗೆದ್ದುಬಿಟ್ಟೆ ಎನ್ನುವ ಹುಮ್ಮಸ್ಸು ಇತ್ತು. ಒಟ್ಟು 2417 ಮತದಾರರಲ್ಲಿ ಬಿಜೆಪಿ ಸದಸ್ಯರೇ 1400 ಇದ್ದಾರೆ ಎನ್ನುವ ಪಟ್ಟಿಯೊಂದನ್ನು ಬಿಜೆಪಿ ಇರಿಸಿಕೊಂಡಿತ್ತು. ಈ ಪಟ್ಟಿಯ ಜೊತೆಗೆ ಮತ್ತೊಂದಿಷ್ಟು ಮತಗಳನ್ನು ತನ್ನ ಬುಟ್ಟಿಗೆ ಸೆಳೆದುಕೊಂಡರೆ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಅದೇ ರೀತಿಯ ತಂತ್ರಗಾರಿಕೆ ಮಾಡಿ ಚುನಾವಣಾ ಪ್ರಚಾರವನ್ನು ಬಿಜೆಪಿ ಮಾಡುತ್ತಿತ್ತು. ಕಡಿಮೆ ಎಂದರೂ 500ರಿಂದ 600 ಮತಗಳ ಅಂತರದಲ್ಲಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಅವರದ್ದಾಗಿತ್ತು. ವಸ್ತುಸ್ಥಿತಿ ಹೀಗಿದ್ದರೂ ಎದೆಗುಂದದ ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ಆರಂಭಿಸಿತ್ತು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೈ ನಾಯಕರೆಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದರು. ಕೆಲ ಜೆಡಿಎಸ್ ನಾಯಕರು ಪಕ್ಷ ಬಿಟ್ಟು ಗಟ್ಟಿಯಾಗಿ ಕೈ ಹಿಡಿದುಕೊಂಡ್ರು. ತೆನೆ ಹೊತ್ತ ಪಕ್ಷದಿಂದ ಅಭ್ಯರ್ಥಿ ಸ್ಪರ್ಧೆ ಮಾಡಲಿಲ್ಲ . ಈ ಅಂಶಗಳು ಕೈ ಪಡೆಯ ವಿಶ್ವಾಸ ಹೆಚ್ಚುವಂತೆ ಮಾಡಿ ಕೊನೆಕ್ಷಣದವರೆಗೂ ಕೈ ಅಭ್ಯರ್ಥಿಯನ್ನು ಗೆಲುವಿನ ದಡದವರೆಗೂ ತಂದು ನಿಲ್ಲಿಸುವಂತಾಯ್ತು. 500ರಿಂದ 600 ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದುಕೊಂಡಿದ್ದ ಬಿಜೆಪಿ, ಕೊನೆಗೆ ಕೇವಲ ಮೂರು ಮತಗಳ ಅಂತರದಿಂದ ಗೆದ್ದು ಏದುಸಿರು ಬಿಟ್ಟಿದ್ದು ಸುಳ್ಳಲ್ಲ.

ಇದನ್ನೂ ಓದಿ: ಕೋಲಾರ ರಾಜಕಾರಣ: ಬಿಜೆಪಿ ಜೆಡಿಎಸ್​ ಅಬ್ಬರದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಬಲ, ಮುಂದಿನ ಬೆಳವಣಿಗೆಗೆ ಇದು ದಿಕ್ಸೂಚಿಯೇ? ಇದನ್ನೂ ಓದಿ: ಜೆಡಿಎಸ್ ಮುಗಿಸಲು ಬಿಜೆಪಿ-ಕಾಂಗ್ರೆಸ್ ಷಡ್ಯಂತ್ರ: ಎಚ್​ಡಿ ಕುಮಾರಸ್ವಾಮಿ ಆಕ್ರೋಶ

Published On - 10:48 pm, Tue, 14 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ