ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣ: ಸಿಆರ್‌ಪಿಸಿ 91 ಅಡಿ ದಾಖಲೆ ಕೇಳಿದ್ದ 2 ಅರ್ಜಿ ವಜಾ
ಎ4, ಎ5 ಪರ ವಕೀಲರು ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ, ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಚಿತ್ರದುರ್ಗ: ಮುರುಘಾ ಶ್ರೀಗಳ (Shivamurthy Murugha Sharanaru) ವಿರುದ್ಧದ ಪೋಕ್ಸೋ (Pocso) ಪ್ರಕರಣ ಹಿನ್ನೆಲೆ ಸಿಆರ್‌ಪಿಸಿ 91ರಡಿ ದಾಖಲೆ ಕೇಳಿದ್ದ ಎರಡು ಅರ್ಜಿಗಳು ವಜಾ ಮಾಡಲಾಗಿದೆ. ಎ4, ಎ5 ಪರ ವಕೀಲರು ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ, ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲ್ ಡಿಟೇಲ್ಸ್ ಕೋರಿದ್ದ ಅರ್ಜಿ ಸಲ್ಲಿಸಲಾಗಿತ್ತು. ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನ ಬಗ್ಗೆ ಮಾಹಿತಿ ಕೇಳಲಾಗಿದೆ. ಸಂತ್ರಸ್ತೆಯರು ಈ ಮೊದಲು ತೆರಳಿದ್ದಾಗ ಮಾಹಿತಿ ದಾಖಲಾಗಿತ್ತು. ಇನ್ನು ಪ್ರಕರಣ ಸಂಬಂಧ 2ನೇ ಆರೋಪಿ ಲೇಡಿ ವಾರ್ಡನ್ ಜಾಮೀನು ಅರ್ಜಿ ತಿರಸ್ಕಾರ ಮಾಡಲಾಗಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು, ನ್ಯಾಯಾಧೀಶೆ ಕೋಮಲಾ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಕೋರ್ಟ್ ಸೂಚನೆ:
ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಶ್ರೀ ಅವರಿಗೆ ಹೃದಯ ಸಮಸ್ಯೆ ಕಾಯಿಲೆ ಇರುವ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಚಿತ್ರದುರ್ಗ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿದೆ. ಸೆಷನ್ಸ್ ನ್ಯಾಯಾಲಯ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶ್ರೀಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ತಯಾರಿ ಮಾಡಲಾಗುತ್ತಿದೆ. ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾಶ್ರೀ ಸೆ.27ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಮುರುಘಾಶ್ರೀ ಅವರಿಗೆ ಕರೊನರಿ ಎಂಜೋಗ್ರಾಮ್ ಮಾಡಿಸಲು ಅನುಮತಿ ನೀಡಲು ಮುರುಘಾಶ್ರೀ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮರುಘಾ ಮಠದ ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಸಂಬಳ ಇಲ್ಲದೆ ಪೀಕಲಾಟ!
ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾಶ್ರೀ ಜೈಲುಪಾಲಾಗಿದ್ದಾರೆ. ಮುರುಘಾಶ್ರೀಗೆ ಸದ್ಯಕ್ಕೆ ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದು ಎಸ್ ಜೆ ಎಂ ವಿದ್ಯಾಸಂಸ್ಥೆಯ ಸಿಬ್ಬಂದಿಯನ್ನು ಸಂಕಷ್ಟಕ್ಕೆ ದೂಡಿದೆ. ಏಕೆಂದರೆ ಈ ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡಲು ಸಂಸ್ಥೆಯ ಅಧ್ಯಕ್ಷರಾಗಿರುವ ಮುರುಘಾ ಶ್ರೀ ಸಹಿ ಅಗತ್ಯವಾಗಿದೆ. ಮುರುಘಾ ಶ್ರೀ ಪ್ರಸ್ತುತ, ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಇದ್ದಾರೆ.
ಈ ಹಿನ್ನೆಲೆಯಲ್ಲಿ ಕಾರಾಗೃಹದಲ್ಲೇ ಸಹಿ ಮಾಡಲು ಅವಕಾಶ ಕೇಳಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮುರುಘಾಶ್ರೀ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಈ ಆದೇಶ ನೀಡಿದೆ. ಹಾಗಾಗಿ ಎಸ್ ಜೆ ಎಮ್ ವಿದ್ಯಾಸಂಸ್ಥೆಯ ಸಿಬ್ಬಂದಿಗೆ ಸಂಬಳ ಇಲ್ಲದೆ ಸಂಕಷ್ಟ ಎದುರಾಗಿದೆ. ಎಸ್ ಜೆ ಎಂ ವಿದ್ಯಾ ಸಂಸ್ಥೆಯಲ್ಲಿ ಸುಮಾರು 3 ಸಾವಿರ ಸಿಬ್ಬಂದಿಯಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.