ಭರಮಸಾಗರದಲ್ಲಿ 9 ದಿನಗಳ ತರಳಬಾಳು ಹಣ್ಣಿಮೆಗೆ ಚಾಲನೆ: ಈ ವರ್ಷದ ವಿಶೇಷವೇನು ಗೊತ್ತೇ?
9 ದಿನಗಳ ಕಾಲ ನಡೆಯುವ ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆಗೆ ಚಾಲನೆ ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಈ ವರ್ಷದ ತರಳಬಾಳು ಹುಣ್ಣಿಮೆ ನಡೆಯುತ್ತಿರುವುದು ವಿಶೇಷ. ಕಾರಣ ಹತ್ತಾರು ವರ್ಷಗಳ ಹೋರಾಟದ ನಂತರ ಚಿತ್ರದುರ್ಗದ ಹತ್ತಾರು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಬಂದಿದೆ. ಇದಕ್ಕೆ ಸಿರಿಗೆರೆ ಸ್ವಾಮೀಜಿಯೇ ಕಾರಣೀಕರ್ತರು. ಈ ವರ್ಷದ ತರಳುಬಾಳು ಹುಣ್ಣಿಮೆ ವಿಶೇಷದ ಬಗ್ಗೆ ಇಲ್ಲಿದೆ ವಿವರ.

ಚಿತ್ರದುರ್ಗ, ಫೆಬ್ರವರಿ 5: ಚಿತ್ರದುರ್ಗ ತಾಲೂಕಿನ ಭರಮಸಾಗರ ಒಂದು ರೀತಿಯಲ್ಲಿ ಐತಿಹಾಸಿಕ ಸ್ಥಳ. ವಿಶೇಷವಾಗಿ ಚಿತ್ರದುರ್ಗ ಹಾಗೂ ದಾವಣಗೆರೆ ನಡುವೆ ಇರುವ ಭರಮಸಾಗರ ವಾಣಿಜ್ಯ ಕೇಂದ್ರವೂ ಹೌದು. ಇಂತಹ ಐತಿಹಾಸಿಕ ಪ್ರದೇಶ ಹಿಂದೆ ಬರ ಪೀಡಿತ ಪ್ರವೇಶವಾಗಿತ್ತು. ಈಗ ಎಲ್ಲಿ ನೋಡಿದರಲ್ಲಿ ನೀರು ನೀರು ತುಂಬಿದೆ. ಇದಕ್ಕೆ ಕಾರಣ ದಾವಣಗೆರೆ ಜಿಲ್ಲೆಯ ಹರಿಹರ ಬಳಿಯ ತುಂಗಭದ್ರಾ ನದಿಯಿಂದ ಪೈಪ್ಲೈನ್ ಮೂಲಕ ಕೆರೆಗಳಿಗೆ ತುಂಬಿಸಲಾಗುತ್ತಿರುವುದು. ಇದೀಗ ಇಂಥ ಖುಷಿಯ ಸಂದರ್ಭದಲ್ಲೇ ಭರಮಸಾಗರದಲ್ಲಿ 9 ದಿನಗಳ ತರಳಬಾಳು ಹಣ್ಣಿಮೆಗೆ ಚಾಲನೆ ಸಿಕ್ಕಿದೆ. ರಾಜ್ಯದ ಬಹುತೇಕ ಕಡೆ ನಡೆದ ತರಳಬಾಳು ಹುಣ್ಣಿಮೆ ಈ ಸಲ ಭರಮಸಾಗರದಲ್ಲಿ ನಡೆಯುತ್ತಿದೆ. ಇದಕ್ಕೂ ತುಂಗಭದ್ರಾ ನದಿಯಿಂದ ನೀರು ಬರುವಂತಾಗಿರುವುದಕ್ಕೂ ಇದೆ ನಂಟು!
ತುಂಗಭದ್ರಾ ನದಿಯಿಂದ ನೀರು ಬರುವಂತಾಗಲು ಸಿರಿಗೆರೆ ಸ್ವಾಮೀಜಿಯೇ ಪ್ರಮುಖ ಕಾರಣೀಕರ್ತರು. ಜತೆಗೆ ಈ ಬಾರಿ ಭರಮಸಾಗರದಲ್ಲೇ ತರಳಬಾಳು ಹುಣ್ಣಿಮೆ ನಡೆಯುತ್ತಿದೆ.
ಮೊದಲ ದಿನ ಏನೇನು ಕಾರ್ಯಕ್ರಮ?
ಮೊದಲ ದಿನವಾದ ಮಂಗಳವಾರ ಶಿಕ್ಷಣ, ಸಮಾಜದ ಬಗ್ಗೆ ಚಿಂತನೆ ನಡೆಯಿತು. ಸಚಿವ ಮಧುಬಂಗಾರಪ್ಪ ಅವರು ಚಾಲನೆ ನೀಡಿದ್ದರು. ವಿಶೇಷವಾಗಿ ತರಳಬಾಳು ಗುರಪೀಠದ ಈ ಹುಣ್ಣಿಮೆ ಅಂದರೆ ಸಂಗೀತ ಸಾಹಿತ್ಯ, ನೃತ್ಯ, ಕಲೆ ಜೊತೆಗೆ ಕಸರತ್ತುಗಳ ಮೇಳ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಕ, ಬಾಲಕಿಯರ ಹಗ್ಗದ ಮೇಲಿನ ಕಸರತ್ತು ಗಮನ ಸೆಳೆಯಿತು.

ತರಳಬಾಳು ಹಣ್ಣಿಮೆ ಕಾರ್ಯಕ್ರಮದಲ್ಲಿ ಕಸರತ್ತು ಪ್ರದರ್ಶಿಸಿದ ಬಾಲಕಿಯರು
ಸಮಾರಂಭದಲ್ಲಿ ಮಾತನಾಡಿದ ತರಳಬಾಳು ಗುರುಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಣ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ರೈತನ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಮುಂದೆ ಒಂದು ದಿನ ಬರುತ್ತದೆ, ನಾಲ್ಕು ಎಕರೆ ಅಡಿಕೆ ತೋಟ ಇದ್ದ ರೈತನಿಗೆ ಹುಡಾಡಿಕೊಂಡು ಬಂದು ಹೆಣ್ಣು ಕೊಡುತ್ತಾರೆ ಎಂದರು.
ನಟ ಡಾಲಿ ಧನಂಜಯ ಕೂಡ ಬಸವಣ್ಣ ಹಾಗೂ ಅಲ್ಲಮನ ವಚನಗಳನ್ನು ಹೇಳಿ ಸಭಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಡಾಲಿ ಧನಂಜಯ ನೋಡಲು ಜನಸಾಗರ; ಲಾಠಿ ಬೀಸಿದ ಪೊಲೀಸರು
ನಿತ್ಯ ಒಂದೊಂದು ವಿಚಾರಗಳನ್ನಿಟ್ಟಿಕೊಂಡು ಒಟ್ಟು ಒಂಬತ್ತು ದಿನ ತರಳಬಾಳು ಹುಣ್ಣಿಮೆ ನಡೆಯುತ್ತದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಹಾಲಿ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ಪ್ರಮುಖರು ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ