ಪದ್ಮಶ್ರೀ ಹರೇಕಳ ಹಾಜಬ್ಬರಿಗೂ ಎಸ್ಐಆರ್ ನೋಟಿಸ್! ನಾಲ್ಕೇ ಗಂಟೆಯಲ್ಲಿ ವಾಪಸ್ ಪಡೆದ ಅಧಿಕಾರಿಗಳು
ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ಹೆಸರು ವ್ಯತ್ಯಾಸ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ದಾಖಲೆ ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಅದಾದ ನಂತರದ ನಾಲ್ಕೇ ಗಂಟೆಗಳಲ್ಲಿ ಅಧಿಕಾರಿಗಳು ನೋಟಿಸ್ ವಾಪಸ್ ಪಡೆದು ಹೆಸರು ಸರಿಪಡಿಸುವ ಭರವಸೆ ನೀಡಿದ್ದಾರೆ. ಕಿತ್ತಲೆ ಮಾರಿ ಶಾಲೆ ಕಟ್ಟಿದ ಹಾಜಬ್ಬರಿಗೆ ನೋಟಿಸ್ ಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಚ್ಚರಿಗೆ ಕಾರಣವಾಗಿತ್ತು.

ಮುಖ್ಯಾಂಶಗಳು
- ಹರೇಕಳ ಹಾಜಬ್ಬರಿಗೂ ಎಸ್ಐಆರ್ ನೋಟಿಸ್
- ನಾಲ್ಕೇ ಗಂಟೆಯಲ್ಲಿ ನೋಟಿಸ್ ವಾಪಸ್
- ಹೆಸರಿನ ವ್ಯತ್ಯಾಸ ಸರಿಪಡಿಸಲು ಭರವಸೆ
ಮಂಗಳೂರು, ಸೆಪ್ಟೆಂಬರ್ 8: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಿಸಿ ಇದೀಗ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಎಂದೇ ಖ್ಯಾತರಾದ ಹರೇಕಳ ಹಾಜಬ್ಬರಿಗೂ ತಟ್ಟಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ಹಿಂದಿನ ಎಸ್ಐಆರ್ ವೇಳೆ ದಾಖಲಾಗಿದ್ದ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದಾಖಲೆಗಳೊಂದಿಗೆ ಹಾಜರಾಗುವಂತೆ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಅದನ್ನು ವಾಪಸ್ ಪಡೆದಿದ್ದಾರೆ.
ಹೆಸರಿನ ವ್ಯತ್ಯಾಸದಿಂದ ನೋಟಿಸ್
ಚುನಾವಣಾ ಅಧಿಕಾರಿಗಳು ಹರೇಕಳ ಹಾಜಬ್ಬ ಅವರ ಮನೆಗೆ ತೆರಳಿ ನೋಟಿಸ್ ನೀಡಿದ್ದರು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ಹೆಸರು ಮತ್ತು ಹಿಂದಿನ ಎಸ್ಐಆರ್ ವೇಳೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿರುವ ಹೆಸರಿನ ನಡುವೆ ವ್ಯತ್ಯಾಸವಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿ ಎದುರು ಹಾಜರಾಗುವಂತೆ ಸೂಚಿಸಲಾಗಿತ್ತು. ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ಸೆಪ್ಟೆಂಬರ್ 11ರಂದು ಹರೇಕಳ ಗ್ರಾಮ ಪಂಚಾಯಿತಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ನಾಲ್ಕೇ ಗಂಟೆಯಲ್ಲಿ ನೋಟಿಸ್ ವಾಪಸ್!
ನೋಟಿಸ್ ಪಡೆದ ಹರೇಕಳ ಹಾಜಬ್ಬರಿಗೆ ಅಚ್ಚರಿ ಎದುರಾಗಿದೆ. ನೋಟಿಸ್ ತಲುಪಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತೆ ಅವರ ಮನೆಗೆ ತೆರಳಿ ನೋಟಿಸ್ ವಾಪಸ್ ಪಡೆದಿದ್ದಾರೆ. ಸದ್ಯ ನೋಟಿಸ್ ಹಿಂಪಡೆದಿರುವ ಚುನಾವಣಾಧಿಕಾರಿಗಳು, ಹೆಸರಿನಲ್ಲಿರುವ ವ್ಯತ್ಯಾಸವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
‘ಹಾಜಬ್ಬ’ ಹೆಸರಿನಿಂದ ‘ಹರೇಕಳ ಹಾಜಬ್ಬ’ವರೆಗೆ
ಹರೇಕಳ ಹಾಜಬ್ಬ ಅವರು ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದರು. ಕಿತ್ತಳೆ ಹಣ್ಣು ಮಾರಾಟದಿಂದ ಬಂದ ಹಣವನ್ನು ಉಳಿಸಿ ಹರೇಕಳದಲ್ಲಿ ಶಾಲೆ ನಿರ್ಮಿಸಿ ದೇಶದ ಗಮನ ಸೆಳೆದಿದ್ದರು. 2000ನೇ ಇಸವಿವರೆಗೆ ಅವರ ದಾಖಲೆಗಳಲ್ಲಿ ಕೇವಲ ‘ಹಾಜಬ್ಬ’ ಎಂಬ ಹೆಸರೇ ಇತ್ತು ಎನ್ನಲಾಗಿದೆ. ಬಳಿಕ ಅವರು ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆ ಕಟ್ಟಿದ ವಿಚಾರ ದೇಶಾದ್ಯಂತ ಸುದ್ದಿಯಾದ ನಂತರ ‘ಹರೇಕಳ ಹಾಜಬ್ಬ’ ಎಂಬ ಹೆಸರು ವ್ಯಾಪಕವಾಗಿ ಬಳಕೆಗೆ ಬಂದಿದ್ದು, ಅವರೂ ಸಹ ಅದನ್ನೇ ಎಲ್ಲೆಡೆ ಬಳಸುತ್ತಿದ್ದಾರೆ.
ಆ ಬಳಿಕ ಆಧಾರ್, ಪಾಸ್‌ಪೋರ್ಟ್, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆಗಳಲ್ಲೂ ‘ಹರೇಕಳ ಹಾಜಬ್ಬ’ ಎಂಬ ಹೆಸರು ನಮೂದಾಗಿತ್ತು.
ದಾಖಲೆ ತಿದ್ದುಪಡಿಗೆ ಅಧಿಕಾರಿಗಳ ಭರವಸೆ
ಹೆಸರಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ನೀಡಲಾಗಿದ್ದ ಎಸ್ಐಆರ್ ನೋಟಿಸ್ ಇದೀಗ ವಾಪಸ್ ಪಡೆಯಲಾಗಿದೆ. ದಾಖಲೆಗಳಲ್ಲಿನ ಹೆಸರನ್ನು ಸರಿಪಡಿಸುವುದಾಗಿ ಚುನಾವಣಾಧಿಕಾರಿಗಳು ಭರವಸೆ ನೀಡಿದ್ದಾರೆ.
ಸಣ್ಣ ತಪ್ಪಾಗಿದೆ ಎಂದರು, ನೋಟಿಸ್ ವಾಪಸ್ ಪಡೆದರು: ಹಾಜಬ್ಬ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ‘ಮಧ್ಯಾಹ್ನ 12 ಗಂಟೆ ಸುಮಾರಿಗೆ ನನಗೆ ನೋಟಿಸ್ ಬಂದಿತ್ತು. ಸೆಪ್ಟೆಂಬರ್ 11ರಂದು ಹರೇಕಳ ಗ್ರಾಮ ಪಂಚಾಯಿತಿಗೆ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇಬ್ಬರು ಅಂಗನವಾಡಿ ಶಿಕ್ಷಕಿಯರು ಮನೆಗೆ ಬಂದು ನೋಟಿಸ್ ನೀಡಿ ದಾಖಲೆಗಳನ್ನು ತರಲು ಹೇಳಿದರು. ಬಳಿಕ ನೋಟಿಸ್ ನೀಡಿರುವುದರ ಫೋಟೋ ತೆಗೆಯಬೇಕು ಎಂದು ತಿಳಿಸಿದರು’ ಎಂದು ಹೇಳಿದರು.
‘ಆ ವೇಳೆ ರಾಷ್ಟ್ರಪತಿಗಳು ನೀಡಿರುವ ಪದ್ಮಶ್ರೀ ಪ್ರಶಸ್ತಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡೆ. ನನ್ನ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್ ಸೇರಿದಂತೆ ಎಲ್ಲ ದಾಖಲೆಗಳಲ್ಲೂ ‘ಹರೇಕಳ ಹಾಜಬ್ಬ’ ಎಂದೇ ಇದೆ. ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪ್ರಮಾಣಪತ್ರದಲ್ಲೂ ಇದೇ ಹೆಸರಿದೆ’ ಎಂದು ಹಾಜಬ್ಬ ತಿಳಿಸಿದರು.
‘ಸಂಜೆ ಸುಮಾರು 5 ಗಂಟೆಗೆ ಗ್ರಾಮ ಲೆಕ್ಕಾಧಿಕಾರಿ ಕರೆ ಮಾಡಿ, ‘ಸಣ್ಣ ತಪ್ಪಾಗಿದೆ, ನಿಮ್ಮ ನೋಟಿಸ್ ವಾಪಸ್ ಕೊಡಿ’ ಎಂದು ಕೇಳಿದರು. ಬಳಿಕ ತಕ್ಷಣ ಮನೆಗೆ ಬಂದು ನೋಟಿಸ್ ವಾಪಸ್ ಪಡೆದುಕೊಂಡು ಹೋದರು. ದಾಖಲೆಗಳನ್ನು ನಾವೇ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ನಾನು ನೋಟಿಸ್ ವಾಪಸ್ ನೀಡಿದೆ’ ಎಂದು ಹೇಳಿದರು.
2000ಕ್ಕೂ ಮೊದಲು ಕೇವಲ ಹಾಜಬ್ಬ ಎಂದಿತ್ತು: ಸ್ಪಷ್ಟನೆ
‘2000ನೇ ಇಸವಿಗೂ ಮೊದಲು ನನ್ನ ಹೆಸರು ಕೇವಲ ‘ಹಾಜಬ್ಬ’ ಎಂದೇ ಇತ್ತು. ಬಳಿಕ ಸಮಾಜ ನನ್ನನ್ನು ಗುರುತಿಸಿದ ನಂತರ ‘ಹರೇಕಳ ಹಾಜಬ್ಬ’ ಎಂಬ ಹೆಸರು ಬಳಕೆಗೆ ಬಂತು. ಆ ಬಳಿಕ ಹಲವು ಪ್ರಶಸ್ತಿ, ಗೌರವಗಳು ಹಾಗೂ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದೇ ನಮೂದಿಸಲಾಗಿದೆ. ಈಗ ಅಧಿಕಾರಿಗಳು ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆ. ಅವರಿಂದ ಸಣ್ಣ ತಪ್ಪಾಗಿದೆ ಎಂದು ತಿಳಿಸಿದ್ದಾರೆ. ಹೆಸರು ಸರಿಪಡಿಸುವ ವಿಶ್ವಾಸವಿದೆ’ ಎಂದು ಹರೇಕಳ ಹಾಜಬ್ಬ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:22 am, Tue, 8 September 26




