ರಾಮಮಂದಿರದ ಮೂರ್ತಿ ಮಾದರಿಯಲ್ಲೇ ಹನುಮಾನ್ ವಿಗ್ರಹ ಕೆತ್ತನೆ: ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿದ ಶಿಲೆ
ದಾವಣಗೆರೆಯ ಹಳೇ ಕುಂದುವಾಡದಲ್ಲಿ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹನುಮಾನ್ ಮತ್ತು ಬಸವೇಶ್ವರ ದೇವಸ್ಥಾನಗಳು ಉದ್ಘಾಟನೆಗೆ ಸಜ್ಜಾಗಿವೆ. ಅಯೋಧ್ಯೆಯ ರಾಮಮಂದಿರದ ವಿಗ್ರಹದ ಮಾದರಿಯಲ್ಲಿರುವ ಹನುಮನ ವಿಗ್ರಹ ಮುಖ್ಯ ಆಕರ್ಷಣೆಯಾಗಿದೆ. ಇನ್ನು ಗ್ರಾಮದಲ್ಲಿ 41 ದಿನಗಳ ಕಾಲ ಮದ್ಯ ಮತ್ತು ಮಾಂಸ ನಿಷೇಧಿಸಲಾಗಿದೆ.

ದಾವಣಗೆರೆ, ಫೆಬ್ರವರಿ 15: ಬೆಣ್ಣೆನಗರಿ ದಾವಣಗೆರೆಯಲ್ಲಿ (Davanagere) ಹಲವು ಧಾರ್ಮಿಕ ಕೇಂದ್ರಗಳಿವೆ. ಈ ಐತಿಹಾಸಿಕ ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಇದೀಗ ಮತ್ತೊಂದು ಭವ್ಯ ಮಂದಿರ ಸೇರ್ಪಡೆಯಾಗುತ್ತಿದೆ. ಅದರಲ್ಲೂ ವಿಶೇಷ ಆಕರ್ಷಣೆಯಾಗಿ ಹಿಂದೂಗಳ ಶ್ರದ್ದಾ ಕೇಂದ್ರ ಅಯೋಧ್ಯೆ ರಾಮಮಂದಿರದ ಮೂರ್ತಿ ಮಾದರಿಯಲ್ಲೇ ವಿಗ್ರಹ ಕೆತ್ತನೆಯಾಗಿದ್ದು, ಭಕ್ತರನ್ನೂ ಸೆಳೆಯುತ್ತಿದೆ. ಕೇಸರಿ ನಂದನನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಇಡೀ ಊರಿಗೆ ಊರೇ ಮದ್ಯ, ಮಾಂಸ ಸೇವನೆಗೆ ನಿಷೇಧ ಏರಿಕೊಂಡಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದೆ. ಆ ಊರು ಯಾವುದು ಅಂತೀರಾ ಈ ಸ್ಟೋರಿ ಓದಿ.
ಅಯೋಧ್ಯೆಯ ಬಾಲರಾಮನ ವಿಗ್ರಹ ಇಡೀ ದೇಶದ ಗಮನ ಸೆಳೆದಿದ್ದು ಗೊತ್ತೆ ಇದೆ. ಈ ಕೈಚಳಕದ ಹಿಂದೆ ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್ ಯೋಗಿರಾಜ್ ಅವರು ಇದ್ದಿದ್ದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಹೀದೆ ಕಲಾಕಾರ ಅರುಣ್ ಯೋಗಿರಾಜ್ ಅವರ ಅದ್ಭುತ ಕೈ ಚಳಕದಿಂದ ಮತ್ತೊಂದು ವಿಗ್ರಹ ಕಣ್ಮನ ಸೆಳೆಯುವಂತಿದೆ. ಈ ಒಂದು ವಿಗ್ರಹ ಸ್ಥಾಪನೆ ಆಗುತ್ತಿರುವುದು ಬೇರೆಲ್ಲೂ ಅಲ್ಲ ನಮ್ಮ ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯಲ್ಲಿ.
ಇದನ್ನೂ ಓದಿ: ಸಿದ್ಧಗಂಗಾ ಶ್ರೀ ಅವರನ್ನು ರಾಷ್ಟ್ರೀಯ ಸಂತ ಎಂದು ಘೋಷಣೆ ಮಾಡಲಿ: ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಈಗಾಗಲೇ ಈ ಒಂದು ಅದ್ಭುತ ವಿಗ್ರಹ ಆಗಮಿಸಿದೆ. ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿಯಿಂದ ಗ್ರಾಮದವರೇ ಹಣ ಹಾಕಿ ಶಿಲೆಯಲ್ಲೇ ಐದುವರೆ ಕೋಟಿ ರೂ ವೆಚ್ಚದಲ್ಲಿ ಶ್ರೀ ಆಂಜನೇಯ, ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪವನ ಸುತ, ವಾಯುಪುತ್ರ, ವಾನರ ಶ್ರೇಷ್ಠ, ಕೇಸರಿನಂದನ, ರಾಮಧೂತ, ಅಂಜನಿ ಪುತ್ರ, ರಾಮನ ಬಂಟ ಎಂದೆಲ್ಲ ಕರೆಸಿಕೊಳ್ಳುವ ಊರ ಕಾಯುವ ಆಂಜನೇಯನಿಗೆ ಭಕ್ತ ಗಣ ಕೇಳಬೇಕೆ, ಅತೀ ಹೆಚ್ಚು ಭಕ್ತ ಗಣ ಹೊಂದಿರುವ ಹನುಮನ ಭವ್ಯ ದೇವಸ್ಥಾನ ಉದ್ಘಾಟನೆಗೆ ಸಿದ್ದವಾಗಿದೆ.
ಶ್ರೀ ಆಂಜನೇಯ ದೇವಸ್ಥಾನಕ್ಕೆ ವಿಶೇಷವಾಗಿ ಕೆತ್ತನೆಯಾಗಿರುವ ವಿಗ್ರಹ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಯೋಧ್ಯೆಯ ಬಾಲರಾಮನ ವಿಗ್ರಹ ಹೋಲುವ ವಿಗ್ರಹವನ್ನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿ ಕೊಟ್ಟಿರುವುದು ಭಕ್ತಗಣವನ್ನ ಕೈ ಬೀಸಿ ಕರೆಯುವಂತೆ ಮಾಡಿದೆ. ಐದುವರೆ ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ದೇಗುಲ, ವಿಶಾಲ ಆವರಣ ಹೊಂದಿರುವ ದೇವಸ್ಥಾನವನ್ನ ಸಂಪೂರ್ಣವಾಗಿ ಶಿಲೆಯಲ್ಲೆ ನಿರ್ಮಿಸಲಾಗಿದೆ.
ಪಕ್ಕದಲ್ಲೇ ಬಸವೇಶ್ವರ ದೇವಸ್ಥಾನವನ್ನ ಅಚ್ಚುಕಟ್ಟಾಗಿ, ಸುಂದರವಾಗಿ ಕಟ್ಟಲಾಗಿದೆ. ಈ ಎರಡು ದೇಗುಲಗಳನ್ನ ಶಿಲ್ಪಿಗಳಾದ ತಮಿಳುನಾಡಿನ ಎಸ್ ವಡಿವೇಲು, ಕೆಆರ್ ಮಾರಿಯಪ್ಪನ್ ಕಟ್ಟಿಕೊಟ್ಟಿದ್ದಾರೆ. ಗ್ರಾಮಸ್ಥರು, ದಾನಿಗಳಿಂದ ದೇಣಿಗೆ ಪಡೆದು ಗ್ರಾಮದ ಮುಖಂಡರು, ಯುವಕರ ಸತತ ಪರಿಶ್ರಮದಿಂದ ದೇವಸ್ಥಾನಗಳು ನಿರ್ಮಾಣಗೊಂಡಿವೆ. ಮುಜುರಾಯಿ ಇಲಾಖೆಗೆ ದೇವಸ್ಥಾನ ಸೇರಿದ್ದರು, ಇಲಾಖೆ ನಯಾಪೈಸೆ ನೀಡಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ. ಆದರು ಸಹ ಛಲ ಬಿಡದೇ ದೇಣಿಗೆ ಸಂಗ್ರಹಿಸಿ ಅದ್ಭುತವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಇದೇ 16-17ರಂದು ಈ ಎರಡು ದೇವಸ್ಥಾನಗಳು ಅದ್ದೂರಿಯಾಗಿ ಉದ್ಘಾಟನೆಗೆ ಸಿದ್ದವಾಗಿದೆ, ಐದು ದಿನಗಳ ಕಾಲ ಮನೆಯಲ್ಲಿ ಯಾರು ಸಹ ಅಡುಗೆ ಮಾಡುವಂತಿಲ್ಲ. ಇಡೀ ಗ್ರಾಮಸ್ಥರಿಗೆ, ಭಕ್ತಾದಿಗಳಿಗೆ ಐದು ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಹಾಗೂ ಪೂರ್ವ ಗೋಧಾವರಿಯ ಪಂಡಿತರಿಂದ ದೇವ ಯಜ್ಞ, ವಿವಿಧ ಹೋಮಗಳ ಮೂಲಕ ದೇವರ ಪ್ರಾಣ ಪ್ರತಿಷ್ಠಾಪನೆ ಜರುಗಲಿವೆ. ಈ ಹಿನ್ನಲೆ ಗ್ರಾಮದಲ್ಲಿ 41 ದಿನಗಳ ಕಾಲ ಮದ್ಯ, ಮಾಂಸ ಮಾರಾಟ, ಸೇವನೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ: ಕನಿಷ್ಠ ವೇತನ ಜಾರಿ ಆಗಲೆಂದು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಮುಸ್ಲಿಂ ಯುವಕ
ಒಟ್ಟಾರೆ ವಾಯುಪುತ್ರನ ಈ ಸುಂದರ ಅದ್ಭುತ ವಿಗ್ರಹ ನೋಡಲು ಜನರು ತಂಡೋಪ ತಂಡವಾಗಿ ಬಂದು ವೀಕ್ಷಣೆ ಮಾಡ್ತಿದ್ದಾರೆ. ವೈದ್ಯರಲ್ಲಿ ಗುಣಮುಖವಾದದ್ದು ಈ ಆಂಜನೇಯ ದೇವಸ್ಥಾನದಲ್ಲಿ ಹುಷಾರಾಗಿದೆ ಎಂಬುದು ಜನರ ನಂಬಿಕೆಯಾಗಿದೆ. ಅಷ್ಟರ ಮಟ್ಟಿಗೆ ಮಹಿಮೆ ಹೊಂದಿದೆ. ಹಲವು ಪವಾಡಗಳ ಮೂಲಕ ಹಳೇ ಕುಂದುವಾಡ ದೇವಾಲಯ ಸಾಕ್ಷಿಯಾಗಿದ್ದು, ಊರ ಕಾಯೋ ನಂಬಿಕೆಯ ಹನುಮನಿಗಾಗಿ ಗ್ರಾಮದ ಜನ ಮದ್ಯ ಮಾಂಸ ತ್ಯಜಿಸಿರೋದು ನಿಜಕ್ಕೂ ಮೆಚ್ಚುವಂತದ್ದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:16 pm, Sat, 15 February 25