Shakti Scheme: ಇದು ಎಷ್ಟು ‘ಉಚಿತ’? ಫ್ರೀ ಬಸ್ ದುಷ್ಪರಿಣಾಮ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಜೀವನಾಧಾರ ಆಟೋಗಳನ್ನೆ ಮಾರಾಟಕ್ಕೆ ಇಟ್ಟಿದ್ದಾರೆ!
ಇದು ಕೇವಲ ಹುಬ್ಬಳ್ಳಿ-ಧಾರವಾಡ ಕಥೆಯಲ್ಲ. ರಾಜ್ಯದ ಬಹುತೇಕ ಕಡೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮಗೆ 20 ಕಿಲೋ ಮೀಟರ್ ವ್ಯಾಪ್ತಿ ಬಿಟ್ಟು ಉಳಿದ ಕಡೆ ಉಚಿತ ಮಾಡಲಿ. ಅಲ್ಲದೆ ಆಟೋ ಚಾಲಕರಿಗೆ ತಿಂಗಳಿಗೆ 10 ಸಾವಿರ ಹಣ ಕೊಡಬೇಕು ಎಂಬುದು ಆಟೋ ಚಾಲಕರ ಬೇಡಿಕೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 12 ದಿನ ಆಯ್ತು. ಶಕ್ತಿ ಯೋಜನೆಗೆ (Shakti Scheme) ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ( Free Bus) ಹಿನ್ನೆಲೆಯಲ್ಲಿ ಮಹಿಳೆಯರೆಲ್ಲ ದೇವರ ದರ್ಶನಕ್ಕೆ ಹೊರಟಿದ್ದಾರೆ. ಬಸ್ ಗಳೆಲ್ಲ ಫುಲ್ ರಶ್.. ಪುರುಷ ಪ್ರಯಾಣಿಕರಿಗೆ ಸೀಟ್ ಸಿಗ್ತಿಲ್ಲ. ಅಷ್ಟೊಂದು ಮಹಿಳೆಯರು (Women) ಯೋಜನೆಯ ಲಾಭ ಪಡೆಯೋಕೆ ಮುಂದಾಗಿದ್ದಾರೆ. ಆದ್ರೆ ಇದೇ ಯೋಜನೆಗೆ ಸೈಡ್ ಎಫೆಕ್ಟ್ ಭಯಾನಕವಾಗಿದೆ. ಮಹಿಳೆಯರೆಲ್ಲ ಬಸ್ ಹತ್ತೋಕೆ ಮುಂದಾಗಿದ್ದರೆ, ಇತ್ತ ಆಟೋಗೆ ಪ್ರಯಾಣಿಕರೇ ಇಲ್ಲ. ಇದರಿಂದ ಆಟೋ ಚಾಲಕರು (Auto Rickshaw) ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ನಮಗೆ ಮರಣ ಭಾಗ್ಯ ಕೊಡಿ ಎಂದು ಆಗ್ರಹಿಸಿದರೆ, ಮತ್ತೊಂದು ಕಡೆ ತಾವು ನಂಬಿದ ಆಟೋಗಳನ್ನೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಜೀವನಕ್ಕೆ ಆಧಾರವಾಗಿದ್ದ ಆಟೋ ರಿಕ್ಷಾವನ್ನೇ ಮಾರಾಟ ಮಾಡಲು ಮುಂದಾಗಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..
ಅದು ಛೋಟಾ ಮುಂಬೈ.. ವಾಣಿಜ್ಯ ನಗರಿ ಎಂದು ಹೆಸರಾದ ನಗರ.. ವ್ಯಾಪಾರ ವಹಿವಾಟಕ್ಕೆಂದೇ ಅಲ್ಲಿಗೆ ದಿನಕ್ಕೆ ಲಕ್ಷಾಂತರ ಜನ ಹುಬ್ಬಳ್ಳಿಗೆ ಬರ್ತಾರೆ. ಹೀಗಿರುವಾಗ ಹುಬ್ಬಳ್ಳಿ ಆಟೋ ಚಾಲಕರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಬಂದು ಹೋಗೋ ಪ್ರಯಾಣಿಕರನ್ನೆ ನಂಬಿ ಜೀವನ ಮಾಡ್ತಿದ್ದ ಆಟೋ ಚಾಲಕರು ಇದೀಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣ ಹಾಲಿ ಕಾಂಗ್ರೆಸ್ ಸರ್ಕಾರ.
ಎಸ್ ಸರ್ಕಾರ ಜಾರಿ ಮಾಡಿರೋ ಶಕ್ತಿ ಯೋಜನೆ ಜಾರಿಯಾದ ಬಳಿಕ ಹುಬ್ಬಳ್ಳಿ ಧಾರವಾಡ ಆಟೋ ಚಾಲಕರು ಅಕ್ಷರಶಃ ಕಂಗಾಲಾಗಿದ್ದಾರೆ. ದುಡಿಮೆ ಇಲ್ಲದೆ ದಿನ ಸಾಗಿಸೋಕು ಕಷ್ಟ ಪಡತೀದಾರೆ. ಕಳೆದ 12 ದಿನಗಳಿಂದ ಆಟೋಗಳಿಗೆ ಮಹಿಳಾ ಪ್ರಯಾಣಿಕರೇ ಬರ್ತಿಲ್ಲ. ಬಸ್ ಪ್ರಯಾಣ ಫ್ರೀ ಆಗಿದ್ದೆ ತಡ ಮಹಿಳೆಯರೆಲ್ಲ ಬಸ್ ಹತ್ತುತ್ತಿದ್ದಾರೆ. ಈ ನಡುವೆ ಆಟೋ ಚಾಲಕರು ದುಡಿಮೆ ಇಲ್ಲದೆ ಖಾಲಿ ಕೂತಿದ್ದಾರೆ. ಹೀಗಾಗಿ ತಾವು ನಂಬಿದ ಆಟೋಗಳನ್ನೆ ಮಾರಾಟಕ್ಕೆ ಇಟ್ಟಿದ್ದಾರೆ.
ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 25 ಸಾವಿರ ಆಟೋಗಳಿವೆ. ದಿನಕ್ಕೆ 100 ರೂಪಾಯಿಯೂ ದುಡಿಮೆ ಇಲ್ಲ. ಹೀಗಾಗಿ ಕೆಲ ಆಟೋ ಚಾಲಕರು ಆಟೋಗಳನ್ನೆ ಮಾರಾಟ ಮಾಡಿ ಬೇರೆ ದುಡಿಮೆ ಕಡೆ ವಾಲುತ್ತಿದ್ದಾರೆ. ದುಡಿಮೆ ಇಲ್ಲದೆ ಆಟೋಗಳನ್ನ ಮಾರಾಟಕ್ಕೆ ಇಟ್ಟಿದ್ದು, ಕೆಲವರು ಆತ್ಮಹತ್ಯೆಗೂ ಮುಂದಾಗಿದ್ದಾರೆ ಅನ್ನೋ ಮಾತಿದೆ. ಮನೆ ಸಂಸಾರ ನಿರ್ವಹಣೆ ಮಾಡಲಾಗದೆ ಕೆಲವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಅಕಸ್ಮಾತ್ ಯಾರಾದರೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರೆ ಅದಕ್ಕೆ ಸರ್ಕಾರವೇ ಕಾರಣವಾದೀತು. ಅವರ ಶವ ತಂದು ವಿಧಾನಸೌಧ ಮುಂದೆ ಹೋರಾಟ ಮಾಡ್ತೀವಿ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜಶೇಖರ ಮಠಪತಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸುಮಾರು 25 ಸಾವಿರ ಆಟೋಗಳಿವೆ. ಇವರೆಲ್ಲ ಅವತ್ತಿಗೆ ಅವತ್ತು ದುಡಿದು ತಿನ್ನಬೇಕು. ಆದ್ರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಆಟೋಗಳಿಗೆ ಡಿಮ್ಯಾಂಡ್ ಕಡಿಮೆ ಆಗಿದೆ. ಆಟೋ ಒಡಾಡೋದೆ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ. ಅಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರೋ ಕಾರಣಕ್ಕೆ ಮಹಿಳೆಯರು ಆಟೋ ಕಡೆ ಮುಖ ಮಾಡ್ತಿಲ್ಲ. ಕೆಲವರು ಆಟೋ ಚಾಲಕರಾಗಿಯೇ ಉದ್ಯೋಗ ಮಾಡಿ ಮನೆ ನಡೆಸುತ್ತಿದ್ದರು.
ಇನ್ನು, ಆಟೋ ಬಾಡಿಗೆ ತಗೆದುಕೊಂಡು ಆಟೋ ಓಡಿಸೋ ಚಾಲಕರಿಗಂತೂ ವಿಪರೀತ ಸಂಕಷ್ಟ ಆಗಿದೆ. ಹಾಗಾಗಿ ಆಟೋ ಚಾಲಕರಿಗೆ ದಿಕ್ಕುತೋಚದಂತಾಗಿದೆ. ತಾವು ನಂಬಿದ ಆಟೋಗಳನ್ನೆ ಮಾರಾಟ ಮಾಡಲು ಮುಂದಾಗಿದ್ದಾರೆ. ಸರ್ಕಾರ ನಮಗೆ ಮರಣ ಭಾಗ್ಯ ಕೊಟ್ಟು ಬಿಡಲಿ ನಾವೇನು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ವಿಷದ ಬಾಟಲಿ ಕೊಡಿ ಎಂದು ಹುಬ್ನಳ್ಳಿಯ ಆಟೋ ಚಾಲಕನೋರ್ವ ಅಳಲು ತೋಡಿಕೊಂಡಿರೋದು ಸಾಕಷ್ಟು ವೈರಲ್ ಆಗಿದೆ.
ಇದು ಕೇವಲ ಹುಬ್ಬಳ್ಳಿ-ಧಾರವಾಡ ಕಥೆಯಲ್ಲ. ರಾಜ್ಯದ ಬಹುತೇಕ ಕಡೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮಗೆ 20 ಕಿಲೋ ಮೀಟರ್ ವ್ಯಾಪ್ತಿ ಬಿಟ್ಟು ಉಳಿದ ಕಡೆ ಉಚಿತ ಮಾಡಲಿ ಎಂಬುದು ಆಟೋ ಚಾಲಕರ ಬೇಡಿಕೆ. ಅಲ್ಲದೆ ಆಟೋ ಚಾಲಕರಿಗೆ ತಿಂಗಳಿಗೆ 10 ಸಾವಿರ ಹಣ ಕೊಡಬೇಕು ಎಂದೂ ಸರ್ಕಾರಕ್ಕೆ ಆಟೋ ಚಾಲಕರ ಸಂಘ ಆಗ್ರಹಿಸಿದೆ. ಸರ್ಕಾರ ಬಸ್ ಫ್ರೀ ಮಾಡಿ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದಿರುವುದಂತೂ ಸತ್ಯ.
ಧಾರವಾಡ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ