Crab Farming: ಕಡಿಮೆ ಜಾಗದಲ್ಲಿ, ಕಡಿಮೆ ಬಂಡವಾಳ ಹಾಕಿ, ಹೆಚ್ಚಿನ ಆದಾಯ ತರುವ ಏಡಿ ಕೃಷಿ: ಕಲಘಟಗಿ ರೈತನ ಯಶೋಗಾಥೆ
ಬರೀ 2.5 ಲಕ್ಷ ರೂ ವೆಚ್ಚದಲ್ಲಿ ಏಡಿ ಕೃಷಿ ಶುರು ಮಾಡಿದ್ದು, 3 ತಿಂಗಳಿಗೊಮ್ಮೆ ಏಡಿಗಳ ಮಾರಾಟ ಮಾಡಲಾಗುತ್ತಿದೆ. 1 ವರ್ಷದ ನಂತರ ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದಂತೆ. ಏಡಿಯಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ವಿಟಮನ್, ಮಿನರಲ್ಸ್, ಓಮೆಗಾ-3 ಇರುತ್ತದೆ.
ಸಮಗ್ರ ಕೃಷಿ ನೀತಿಯಲ್ಲಿ ಬಹುತೇಕ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳೊಂದಿಗೆ ಮೀನು ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಕೃಷಿ ಅಂತಹ ಕೃಷಿ ಮಾಡುವ ಮೂಲಕ ಯಶೋಗಾಥೆ ಬರೆದಿದ್ದಾರೆ. ಆದರೆ, ಜಿಲ್ಲೆಯ ಕಲಘಟಗಿ ರೈತನೋರ್ವ ಪ್ರಥಮ ಬಾರಿಗೆ ವಿನೂತನ ಏಡಿ ಕೃಷಿಯನ್ನು (Crab Farming) ಕೈಗೊಂಡಿದ್ದಾರೆ. ಇವರ ಹೆಸರು ಎಸ್.ಎನ್. ಉದ್ದನ್ನವರ್. ಧಾರವಾಡ ಜಿಲ್ಲೆ ಕಲಘಟಗಿ (Kalghatgi, Dharwad) ತಾಲೂಕಿನ ದುಮ್ಮವಾಡ ಗ್ರಾಮದ ಪ್ರಗತಿಪರ ರೈತರಾಗಿರೋ ಇವರ ತೋಟದಲ್ಲಿ ಸಚಿನ್ ಭೂಸದ್ ಎಂಬುವವರು ಕಳೆದ ಆರು ತಿಂಗಳಿಂದ ಏಡಿ ಕೃಷಿ ಕೈಗೊಂಡಿದ್ದಾರೆ. ಆ ಮೂಲಕ ಸುತ್ತಲಿನ ಇತರ ರೈತರ ಗಮನ ಸೆಳದಿದ್ದಾರೆ. ಮೀನು, ಕೋಳಿ, ಹೈನುಗಾರಿಕೆ ಅಂತಹ ಉಪ ಕೃಷಿಗಳಿಗೆ ಹೆಚ್ಚಿನ ಬಂಡವಾಳದ ಅಗತ್ಯವಿದೆ. ಆದರೆ, ಏಡಿ ಕೃಷಿಗೆ ಹೇಳಿಕೊಳ್ಳುವ ಬಂಡವಾಳ ಬೇಕಿಲ್ಲ. ಕಡಿಮೆ ಜಾಗದಲ್ಲಿ, ಕಡಿಮೆ ಬಂಡವಾಳ ಹಾಕಿ, ಹೆಚ್ಚಿನ ಆದಾಯ ತರುವ ಏಡಿಗಳನ್ನು ಸಾಕುವ ಮೂಲಕ ರೈತರು ಆದಾಯ ದ್ವಿಗುಣಗೊಳಿಸಬಹುದು ಎಂಬುದನ್ನು ಸಚಿನ್ ತೋರಿಸಿಕೊಟ್ಟಿದ್ದಾರೆ (Success Story).
ಮಹಾರಾಷ್ಟ್ರದ ಲಾತೂರಿನಲ್ಲಿ ಏಡಿ ಸಾಕುವ ಕುರಿತು ಎರಡ್ಮೂರು ದಿನಗಳ ಕಾಲ ತರಬೇತಿ ಪಡೆದಿರುವ ಇವರು, ಹೊಲದ ಒಂದು ಭಾಗದಲ್ಲಿ 55 x 55 ಅಡಿ ಜಾಗದಲ್ಲಿ ಒಂದು ಕೊಳ ಸೃಷ್ಟಿ ಮಾಡಿದ್ದಾರೆ. ಅಲ್ಲಿಯೇ ಏಡಿಗಳನ್ನು ಸಾಕುತ್ತಿದ್ದು, ಮೀನು, ಚಿಕನ್ ವೇಸ್ಟ್ ಗಳನ್ನು ಅವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಆರು ತಿಂಗಳ ಹಿಂದೆ ರಾಕ್ ಅಂಡ್ ಮಡ್ ಜಾತಿಯ 1,500 ಏಡಿಗಳನ್ನು ತಂದಿದ್ದು, ಈಗ ಅವುಗಳು ಸಂತಾನೋತ್ಪತ್ತಿ ಮಾಡುತ್ತಿದ್ದು ಅವುಗಳ ಸಂಖ್ಯೆ 2,000 ದಾಟಿದೆ.
ಎರಡೂವರೆ ವರ್ಷ ಜೀವಿತಾವಧಿಯ ಒಂದು ಏಡಿ ವರ್ಷಕ್ಕೆ 100 ಮರಿಗಳನ್ನು ಹಾಕುತ್ತದೆ. ಈ ಪೈಕಿ ವಿವಿಧ ಕಾರಣಗಳಿಂದ 25 ರಿಂದ 30 ಏಡಿಗಳು ಮಾತ್ರ ಬದುಕುತ್ತವೆ. ಒಂದು ಏಡಿ ಅಂದಾಜು ಅರ್ಧ ಕೆಜಿವರೆಗೂ ತೂಗುತ್ತಿದ್ದು, ಹೋಟೆಲ್ ಹಾಗೂ ಮಾರುಕಟ್ಟೆಯಲ್ಲಿ ಒಂದು ಏಡಿಗೆ ರೂ. 250 ರಿಂದ 300 ವರೆಗೂ ಮಾರಾಟ ಆಗುತ್ತಿವೆಯಂತೆ.
ಬರೀ ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಏಡಿ ಕೃಷಿ ಶುರು ಮಾಡಿದ್ದು, ಮೂರು ತಿಂಗಳಿಗೊಮ್ಮೆ ಏಡಿಗಳ ಮಾರಾಟ ಮಾಡಲಾಗುತ್ತಿದೆ. ಒಂದು ವರ್ಷದ ನಂತರ ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದಂತೆ. ಏಡಿಯಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ವಿಟಮನ್, ಮಿನರಲ್ಸ್, ಓಮೆಗಾ-3 ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಏಡಿಗೆ ತುಂಬ ಬೇಡಿಕೆ ಇದೆ.
ಬೇರೆ ಬೇರೆ ಬೆಳೆಗಳ ಮಧ್ಯೆ ಏಡಿ ಸಾಕಾಣಿಕೆ ಲಾಭ ತರುವಲ್ಲಿ ಸಂಶಯವೇ ಇಲ್ಲ. ನೈಸರ್ಗಿಕವಾಗಿ ನದಿ, ಹಳ್ಳ-ಕೊಳ್ಳದ ರೀತಿಯಲ್ಲಿ ಏಡಿಗಳಿಗೆ ಪರಿಸರ ರಚಿಸಿಕೊಟ್ಟರೆ ಉತ್ತಮವಾಗಿ ಏಡಿ ಕೃಷಿ ಮಾಡಬಹುದು. ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಮಹಾರಾಷ್ಟ್ರ, ಬೆಳಗಾವಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇನ್ನುಳಿದ ರೈತರು ಸಹ ಸಮಗ್ರ ಕೃಷಿಯಲ್ಲಿ ಏಡಿ ಕೃಷಿ ಸೇರಿಸಿಕೊಳ್ಳುವ ಮೂಲಕ ರೈತರ ಆದಾಯ ಹೆಚ್ಚಿಸಲು ಪ್ರಯತ್ನಗಳನ್ನು ನಡೆಸಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ