ಸಂಪುಟ ಪುನಾರಚನೆಗೆ ಡಿಕೆಶಿ ವಿರೋಧ: ದಿಲ್ಲಿಗೆ ಹೋದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ
ನಾಯಕತ್ವ ಗೊಂದಲ, ದಾವಣಗೆರೆ ಬೈ ಎಲೆಕ್ಷನ್ ಜಟಾಪಟಿ ನಡುವೆ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ಇಂದು (ಏಪ್ರಿಲ್ 12) ದೆಹಲಿ ಫ್ಲೈಟ್ ಹತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 25ಕ್ಕೂ ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ದೆಹಲಿಗೆ ತೆರಳಿದ್ದಾರೆ. ಆದ್ರೆ, ಇತ್ತ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದು, ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು, (ಏಪ್ರಿಲ್ 13): ಕರ್ನಾಟಕದಲ್ಲಿ ಎರಡು ಉಪ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ (Cabinet Reshuffle) ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25 ಕ್ಕೂ ಅಧಿಕ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆದ್ರೆ, ಶಾಸಕರ ದೆಹಲಿ ಯಾತ್ರೆಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಬೆಂಬಲಿಸಿದರೆ ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ಅಲ್ಲದೇ ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದ್ದು, ಇದು ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ
ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಶಾಸಕರ ದೆಹಲಿ ಪ್ರವಾಸ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲಾ ಶಾಸಕರು ಮಾತನಾಡಬೇಕು. ಕೆಲವರು ಏನೇನು ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮೀಡಿಯಾ ನಿಮ್ಮ ಭವಿಷ್ಯ ಅಲ್ಲ, ಪಾರ್ಟಿ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಇದು ಸಂಪುಟ ಪುನಾರಚನೆ ಕೇಳುವ ಟೈಂ ಅಲ್ಲ. ಈಗ ಮಂತ್ರಿ ಮಾಡೋ ಟೈಂ ಅಲ್ಲ, ಮೊದಲು ಚುನಾವಣೆ ಮಾಡೋಣ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ತೀವ್ರಗೊಂಡ ಸಚಿವ ಸಂಪುಟ ಪುನಾರಚನೆ ಕೂಗು: ದಿಲ್ಲಿ ಯಾತ್ರೆ ಕೈಗೊಂಡಿರುವ ಶಾಸಕರು ಯಾರ್ಯಾರು?
ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ
ವರಿಷ್ಠರನ್ನ ಭೇಟಿ ಮಾಡೋದು ತಪ್ಪೇನಿಲ್ಲ. ಆದ್ರೆ ಬೇಕಾಬಿಟ್ಟಿ ಏನೇನೋ ಕಮೆಂಟ್ ಮಾಡೋದಾದ್ರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಹತ್ತಿರ ಕೆಲವರು ಬಂದು ಹೇಳಿದ್ದರು. ಹೋಗಿ ಕೇಳೋದರಲ್ಲಿ ತಪ್ಪು ಇಲ್ಲ . ಫಸ್ಟ್ ಎಂಎಎಲ್ ಆದವರು, ಎರಡನೇ ಬಾರಿ ಆದವರು ಕೇಳೋದು ತಪ್ಪು ಏನೆಲ್ಲ. ಹಿಂದೆ ಎಲ್ಲಾ ನಡೆದಿದೆ. ಆದ್ರೆ ಇದು ಟೈಮ್ ಅಲ್ಲ, ಇದು ಟೈಮ್ ಅಲ್ಲ. ಈಗ ಎಲೆಕ್ಷನ್ ಇನ್ನೂ ನಡೆಯುತ್ತಿದೆ. ಹೀಗಾಗಿ ಮೊದಲು ಎಲೆಕ್ಷನ್ ಮಾಡೋಣ ಎಂದಿದ್ದಾರೆ.
ಶಾಸಕರ ದೆಹಲಿ ದಂಡಯಾತ್ರೆ ಬೆಂಬಲಿಸಿದ ಸಿಎಂ
ಹೌದು…ಅತ್ತ ಡಿಕೆ ಶಿವಕುಮಾರ್ ಸಚಿವ ಪುನಾರಚಣೆಗೆ ವಿರೋಧ ವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದ್ರೆ, ಇದಕ್ಕೂ ಮೊದಲು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಸಂಬಂಧ ದೆಹಲಿಗೆ ತೆರಳಿದ ಶಾಸಕರ ಪರವಾಗಿ ಮಾತನಾಡಿದ್ದಾರೆ
ಶಾಸಕರ ನಡೆ ಬಗ್ಗೆ ನಿನ್ನೆ(ಏಪ್ರಿಲ್ 12) ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲಿಸಿದ್ದಾರೆ.
ಮತ್ತೆ ಶುರುವಾಯ್ತಾ ಡಿಕೆಶಿ-ಸಿದ್ದರಾಮಯ್ಯ ಮುಸುಕಿನ ಗುದ್ದಾಟ?
ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಮಯ ಸಂದರ್ಭ ಬಂದಾಗೆಲ್ಲಾ ಡಿಕೆ ಶಿವಕುಮಾರ್ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಆಗಾಗ ದೆಹಲಿಗೆ ಹೋಗಿರು ಬರುತ್ತಲೇ ಇದ್ದಾರೆ. ಇನ್ನು ಅವರ ಬೆಂಬಲಿಗ ಶಾಸಕರು ಸಹ ನಾಯಕತ್ವ ಬದಲಾವಣೆ ಬಗ್ಗೆಯೂ ಧ್ವನಿ ಎತ್ತುತ್ತಲೇ ಇದ್ದಾರೆ. ಆದ್ರೆ, ಇದೀಗ ಸಂಪುಟ ಪುನಾರಚನೆಗೆ ಡಿಕೆ ಶಿವಕುಮಾರ್ ಆಗಲಿ ಅಥವಾ ಅವರ ಬಣದ ಶಾಸಕರಾಗಲಿ ಯಾವುದೇ ಬೆಂಬಲ ಕೊಡುತ್ತಿಲ್ಲ, ಬದಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.




