ಜಗತ್ತಿನ 100 ಬಿಸಿ ನಗರಗಳಲ್ಲಿ 95 ಭಾರತದ್ದೇ! ‘ಹಾಟ್ ಸ್ಪಾಟ್’ ಆದ ಕರ್ನಾಟಕದ 3 ಜಿಲ್ಲೆಗಳು
ವಿಶ್ವದ ಅತಿ ಹೆಚ್ಚು ಬಿಸಿಲು ಇರುವ 100 ನಗರಗಳ ಪೈಕಿ 95 ಭಾರತದ ನಗರಗಳೇ ಆಗಿವೆ. ಈ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು, ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಗಳೂ ಸ್ಥಾನ ಪಡೆದಿರುವುದು ಆತಂಕಕಾರಿಯಾಗಿದೆ. ದೆಹಲಿಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಬೆಂಗಳೂರು, ಏಪ್ರಿಲ್ 27: ಕರ್ನಾಟಕವೂ ಒಳಗೊಂಡಂತೆ ಭಾರತ ಈಗ ಅಕ್ಷರಶಃ ಕೆಂಡದಂತಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಬಿಸಿಲು ಇರುವ 100 ನಗರಗಳ ಪೈಕಿ 95 ನಗರಗಳು ಭಾರತದಲ್ಲೇ ಇರುವುದು ಈಗ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅಂದಹಾಗೆ, ಈ 95 ರಲ್ಲಿ ಕರ್ನಾಟಕದಲ್ಲೂ (Karnataka) 3 ಹಾಟ್ಸ್ಪಾಟ್ಗಳಿವೆ. ರಿಯಲ್ ಟೈಮ್ ಗ್ಲೋಬಲ್ ಟೆಂಪರೇಚರ್ (Real-time Global Temperature) ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಅಂತ್ಯಕ್ಕೆ ಭಾರತವು ಜಗತ್ತಿನ ‘ಹಾಟ್ ಸೆಂಟರ್’ ಆಗಿ ಬದಲಾಗಿದೆ.
ಕರ್ನಾಟಕದ ಮೂರು ಜಿಲ್ಲೆಗಳಿಗೆ ಸ್ಥಾನ
ವಿಶ್ವದ ಅತ್ಯಂತ ಬಿಸಿಯಾದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸ್ಥಾನ ಪಡೆದಿದೆ. ಇದು ರಾಜ್ಯದಲ್ಲಿ ತಾಪಮಾನ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ:
- ರಾಯಚೂರು: ಜಗತ್ತಿನಲ್ಲೇ 54ನೇ ಸ್ಥಾನ
- ಬಾಗಲಕೋಟೆ: ಜಗತ್ತಿನಲ್ಲೇ 74ನೇ ಸ್ಥಾನ
- ಯಾದಗಿರಿ: ಜಗತ್ತಿನಲ್ಲೇ 88ನೇ ಸ್ಥಾನ
ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಸೂರ್ಯನ ಪ್ರತಾಪ ಅತಿಯಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಕಾದ ಕೆಂಡವಾದ ಉತ್ತರ ಭಾರತ
ದೆಹಲಿಯಲ್ಲಿ ಭಾನುವಾರ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲ ಅಲೆಯ ತೀವ್ರತೆ (Heatwave) ಹೆಚ್ಚಾಗುತ್ತಿರುವ ಕಾರಣ ಹವಾಮಾನ ಇಲಾಖೆ ದೆಹಲಿಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ. ಕೇವಲ ಬಿಸಿಲು ಮಾತ್ರವಲ್ಲದೆ, ವಾಯು ಗುಣಮಟ್ಟವೂ ಕಳಪೆ ಮಟ್ಟಕ್ಕೆ ಕುಸಿದಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ದೇಶಾದ್ಯಂತ ಉಷ್ಣ ಅಲೆಯ ತಾಂಡವ
ದೆಹಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಲಕ್ನೋ, ಮಹಾರಾಷ್ಟ್ರದ ನಾಗ್ಪುರ ಮತ್ತು ಅಕೋಲಾ, ಒಡಿಶಾದ ಭುವನೇಶ್ವರ ಹಾಗೂ ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಹಲವು ನಗರಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಹೆಚ್ಚಾಗಿದೆ. ಡಜನ್‌ಗಟ್ಟಲೆ ನಗರಗಳಲ್ಲಿ ತಾಪಮಾನ 40ರ ಗಡಿ ದಾಟಿದೆ. ಸಾರ್ವಜನಿಕರು ಅನಗತ್ಯವಾಗಿ ಮಧ್ಯಾಹ್ನ ವೇಳೆ ಹೊರಬರದಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವಂತೆ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆಗೆ ಇಳಿಯುತ್ತಿವೆ 2866 ಹೊಸ ವಾಹನಗಳು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 am, Mon, 27 April 26



