ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿಗಳಿಗೆ ಊರು ಬಿಟ್ಟವರೇ ಟಾರ್ಗೆಟ್ ..!
ಕೆಲಸಕ್ಕಾಗಿ ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ಕಡೆ ಗುಳೆ ಹೋಗಿದ್ದ ಜನರು, ಕೊರೊನಾ ಸಮಯದಲ್ಲಿ ತಮ್ಮೂರಿಗೆ ಬರುತ್ತೇವೆ ಎಂದರೆ ಬೇಡ ಎನ್ನುತ್ತಿದ್ದ ಗ್ರಾಮದ ಜನತೆ ಇದೀಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಹಾಕಲು ಊರಿಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.
ಕಲಬುರಗಿ: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವ ಈ ಗಾದೆ ಮಾತು ಇದೀಗ ಗ್ರಾಮೀಣ ಭಾಗದಲ್ಲಿ ಮತ್ತೆ ಪುಲ್ ಫೇಮಸ್ ಆಗಿದ್ದು, ಇದಕ್ಕೆ ಅಸಲಿ ಕಾರಣ ಗ್ರಾಮ ಪಂಚಾಯತಿ ಚುನಾವಣೆ. ಹೌದು ಕೆಲಸಕ್ಕಾಗಿ ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ಕಡೆ ಗುಳೆ ಹೋಗಿದ್ದ ಜನರು, ಕೊರೊನಾ ಸಮಯದಲ್ಲಿ ತಮ್ಮೂರಿಗೆ ಬರುತ್ತೇವೆ ಎಂದರೆ ಬೇಡ ಎನ್ನುತ್ತಿದ್ದ ಗ್ರಾಮದ ಜನತೆ ಇದೀಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಹಾಕಲು ಊರು ಬಿಟ್ಟು ಹೋದವರನ್ನು ಪೋನ್ ಮಾಡಿ ಊರಿಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ಜನರು ಪ್ರತಿ ವರ್ಷ ಬೇಸಿಗೆಯ ಸಂದರ್ಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ವಲಸೆ ಹೊಗುತ್ತಿದ್ದು, ಮುಂಬೈ, ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಾರೆ. ಕಲಬುರಗಿ ಜಿಲ್ಲೆಯಲ್ಲಿಯೇ 2 ಲಕ್ಷಕ್ಕೂ ಅಧಿಕ ಜನರು ಬೇರೆ ಬೇರೆ ನಗರಗಳಿಗೆ ಗುಳೆ ಹೋಗುತ್ತಾರೆ. ಸದ್ಯ ಈ ರೀತಿ ಗುಳೆ ಹೋದ ಜನರ ಮೇಲೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುವವರ ಕಣ್ಣು ಬಿದ್ದಿದ್ದು, ತಮ್ಮೂರಿನಿಂದ ಯಾರೆಲ್ಲಾ ಗುಳೆ ಹೋಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಅವರಿಗೆ ಕರೆ ಮಾಡಿ, ಮತದಾನದ ದಿನ ಬಂದು ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಜೊತೆಗೆ ತಾವು ಬಂದು ಹೋಗಲು ಬೇಕಾದ ಖರ್ಚನ್ನೂ ಕೂಡಾ ತಾವೇ ಭರಿಸುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈನಿಂದ ಬಂದಿದ್ದ ಕಾರ್ಮಿಕರನ್ನು ಶತ್ರುಗಳಂತೆ ನೋಡಿದ್ದರು! ಈ ಹಿಂದೆ ಗುಳೆ ಹೋದ ಕಾರ್ಮಿಕರು ಕೊರೊನಾ ಸಂದರ್ಭದಲ್ಲಿ ತಮ್ಮೂರಿಗೆ ಬಂದರೆ, ಅವರನ್ನು ಶತ್ರುಗಳಂತೆ ಇದೇ ಗ್ರಾಮದ ಜನರು ನೋಡುತ್ತಿದ್ದರು. ಯಾಕಾದ್ರು ಊರಿಗೆ ಬಂದ್ರೋ ಎಂದು ಶಪಿಸುತ್ತಿದ್ದರು. ಇಷ್ಟೇ ಅಲ್ಲದೇ ಅಂದು ಗ್ರಾಮದ ಜನರನ್ನು ಯಾರೂ ಸೇರಿಸಿಕೊಂಡಿರಲಿಲ್ಲ. ಇದರಿಂದಾಗಿ ಅನೇಕರು ಗ್ರಾಮದಲ್ಲಿ ತಮ್ಮ ಮನೆಯಿದ್ದರೂ ಮನೆಗೆ ಹೋಗಲಿಕ್ಕಾಗದೇ ಕೃಷಿ ಜಮೀನಿನಲ್ಲಿಯೇ ಅನೇಕ ದಿನಗಳ ಕಾಲ ಆಶ್ರಯ ಪಡೆದಿದ್ದರು.
ಅದರಲ್ಲೂ ಮುಂಬೈನಿಂದ ಬಂದಿದ್ದ ಸಾವಿರಾರು ಕಾರ್ಮಿಕರನ್ನು ಅವರ ಗ್ರಾಮಗಳ ಜನರು ಪಾಕಿಸ್ತಾನದಿಂದ ಬಂದವರಂತೆ ನೋಡುತ್ತಿದ್ದರು. ಹೀಗಾಗಿ ಗುಳೆ ಹೋದ ಜನರು ತಮ್ಮೂರಿಗೆ ಹೋಗಲು ಪರದಾಡಿದ್ದರು. ಆದರೆ ಯಾವ ಜನರು ಊರಿಗೆ ಬರದಂತೆ ಎಚ್ಚರಿಕೆ ನೀಡಿದ್ದರೋ, ಅದೇ ಜನರು ಇದೀಗ ಗ್ರಾಮಕ್ಕೆ ಬರುವಂತೆ ದುಂಬಾಲು ಬಿದ್ದಿದ್ದಾರೆ.
ಗುಳೆ ಹೋದವರಿಗೇಕೆ ಇಷ್ಟೊಂದು ಡಿಮ್ಯಾಂಡ್ ? ಗ್ರಾಮ ಪಂಚಾಯತಿ ಚುನಾವಣೆ, ಲೋಕಸಭಾ, ವಿಧಾನಸಭಾ ಚುನಾವಣೆಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ತುರುಸಿನಿಂದ ಕೂಡಿದೆ. ಹೇಗಾದ್ರು ಮಾಡಿ ಗೆಲ್ಲಲೇಬೇಕು ಎಂದು ಎಲ್ಲರೂ ಪಣ ತೊಟ್ಟಿದ್ದಾರೆ. ಇನ್ನು ಕೆಲವರು ತಮಗೆ ಬೇಕಾದವರನ್ನು ಗೆಲ್ಲಿಸಲು, ಬೇಡವಾದವರನ್ನು ಸೋಲಿಸಲು ಹಗಲಿರಳು ಕಾರ್ಯತಂತ್ರ ರೂಪಿಸುತ್ತಿದ್ದು, ಹೀಗಾಗಿ ಗೆಲ್ಲಲು ಒಂದೊಂದು ಮತ ಕೂಡಾ ಬಹುಮುಖ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಏಕೆಂದರೆ 1 ವಾರ್ಡ್ಗೆ 400 ಮತದಾರರು ಇರುವುದರಿಂದ ಸೋಲು ಗೆಲುವು ಬೆರಳಣಿಕೆಯಷ್ಟು ಮತಗಳಲ್ಲಿ ಮಾತ್ರ ನಿರ್ಧಾರವಾಗುತ್ತದೆ. ಹೀಗಾಗಿ ಗುಳೆ ಹೋದ ಮತದಾರರ ಹಿಂದೆ ಚುನಾವಣೆಗೆ ಸ್ಪರ್ಧಿಸಿದವರು ಬಿದ್ದಿದ್ದಾರೆ.
ಹತ್ತಾರು ಆಮಿಷಗಳನ್ನು ನೀಡುತ್ತಿರುವ ಸ್ಪರ್ಧಿಗಳು ಕೊರೊನಾ ಕಡಿಮೆಯಾದ ಮೇಲೆ ಮತ್ತೆ ಗ್ರಾಮೀಣ ಭಾಗದ ಜನರು ಮುಂಬೈ, ಬೆಂಗಳೂರಿಗೆ ಹೋಗಿ ದುಡಿಮೆ ಮಾಡುತ್ತಿದ್ದಾರೆ. ಆದರೆ ಇದೀಗ ಮತ್ತೆ ತಮ್ಮೂರಿಗೆ ಬಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಹಾಕಿ ಹೋಗಬೇಕಾದರೆ ಒಬ್ಬರಿಗೆ ಸಾವಿರದಿಂದ ಎರಡು ಸಾವಿರ ರೂಪಾಯಿ ಬೇಕಾಗುತ್ತದೆ. ಹೀಗಾಗಿ ಬಹುತೇಕರು ದುಡಿಮೆ ಬಿಟ್ಟು, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬರಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ ಅನೇಕರು ಮತದಾರರ ಮನವೊಲಿಕೆಗೆ ಮುಂದಾಗಿದ್ದು, ನೀವು ಬಂದು ಮತಹಾಕಿ, ನಿಮಗೆ ಬಂದು ಹೋಗಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವೇ ಮಾಡ್ತೀವಿ. ಖರ್ಚಿಗೆ ಒಂದಿಷ್ಟು ದುಡ್ಡು ಕೂಡಾ ಕೊಡ್ತೀವಿ ಎಂದು ಹೇಳುತ್ತಿದ್ದಾರಂತೆ. ಕೆಲವರು ನಿಮಗೆ ರೇಷನ್ ಕಾರ್ಡ್ ಮಾಡಿಸಿಕೊಡುತ್ತೇವೆ, ಗೆದ್ದರೆ ಮನೆ ಮಂಜೂರಿ ಮಾಡಿಸಿಕೊಡ್ತೇವೆ, ಸರ್ಕಾರದ ಎಲ್ಲಾ ಕೆಲಸ ನಾವೇ ಮುಂದೆ ನಿಂತು ಮಾಡಿಕೊಡುತ್ತೇವೆ. ಬಂದು ಮತ ಹಾಕಿ ಹೋಗಿ ಎಂದು ಮನವಿ ಮಾಡ್ತಿದ್ದಾರಂತೆ. ಹೀಗಾಗಿ ಅನೇಕರು ತಮ್ಮೂರಿಗೆ ಹೋದ ಹಾಗೆ ಆಗುತ್ತದೆ, ಮತ ಹಾಕಿದ ಹಾಗೆ ಆಗುತ್ತದೆ ಎಂದು ಊರಿಗೆ ಹೋಗಲು ಅನೇಕ ಗುಳೆ ಕಾರ್ಮಿಕರು ಮುಂದಾಗಿದ್ದಾರೆ.
ಗ್ರಾಂ.ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯಕುಮಾರ್ ಆತ್ಮಹತ್ಯೆಗೆ ಶರಣು