ಹಾಸನ: ಆನೆ ಟಾಸ್ಕ್ ಫೋರ್ಸ್ ತಂಡಕ್ಕೆ ಕೂಡಲೇ ಅಧಿಕಾರಿಗಳ ನೇಮಕ; ಆದೇಶ ಹೊರಡಿಸಿದ ಸರ್ಕಾರ
ಹಾಸನ ಸೇರಿದಂತೆ ಕೊಡಗು, ಮೈಸೂರು, ಚಿಕ್ಕಮಗಳೂರಿನಲ್ಲಿ ಜನರನ್ನು ಜೀವ ಹಿಂಡುತ್ತಿರುವ ಕಾಡಾನೆ ಹಾವಳಿ ತಡೆಗೆ ಆನೆ ಟಾಸ್ಕ್ ಫೋರ್ಸ್ ಘೊಷಣೆ ಮಾಡಿದ್ದು, ಘೋಷಣೆಯಾದ ಒಂದೇ ವಾರಕ್ಕೆ ಅಧಿಕಾರಿಗಳನ್ನು ನೇಮಕಮಾಡಲು ಆದೇಶ ಹೊರಡಿಸಿದೆ.
ಹಾಸನ: ಕಾಡಾನೆ ಹಾವಳಿ ತಡೆಗೆ ಕಡೆಗೂ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆನೆ ಟಾಸ್ಕ್ ಫೋರ್ಸ್(Elephant Task Force) ಮೂಲಕ ಕಾಡಿನಿಂದ ನಾಡಿಗೆ ಬಂದು ಕಾಫಿ ತೋಟ, ಮನೆ, ಊರುಗಳಲ್ಲಿ ಅಲೆಯುತ್ತ ಸಿಕ್ಕ ಸಿಕ್ಕವರ ಬಲಿ ಪಡೆಯತ್ತಿವೆ. ಕಾಡಾನೆಗಳನ್ನು ನಿಯಂತ್ರಿಸಿ, ಕಾಡಿಗೆ ಹಿಮ್ಮೆಟ್ಟಿಸುವ ಕೆಲಸವನ್ನು ಡಿಸಿಎಫ್ ನೇತೃತ್ವದ ಈ ವಿಶೇಷ ಟಾಸ್ಕ್ ಫೋರ್ಸ್ ತಂಡ ಮಾಡುತ್ತದೆ. ಗನ್ನು, ಪಟಾಕಿ, ವಾಕಿಟಾಕಿ ಜೊತೆಗೆ ಈ ವಿಶೇಷ ತಂಡ ರೆಡಿಯಾಗಿದ್ದು, ನಾಡಿಗೆ ಬರುವ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವ ಈ ಟಾಸ್ಕ್ ಫೋರ್ಸ್ ತಂಡಕ್ಕೆ ಕೂಡಲೇ ಅಧಿಕಾರಿಗಳನ್ನು ನೇಮಿಸಿ ಎಂದು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು ಭಾಗದ ಕಾಡಂಚಿನ ಜನರ ನಿದ್ದೆಗೆಡಿಸಿದ್ದ ಕಾಡಾನೆ ಹಾವಳಿ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ನೂರಾರು ಜನರನ್ನು ಬಲಿ ಪಡೆದಿತ್ತು. ಹಾಗಾಗಿಯೇ ಜನರು ಸಾಕಷ್ಟು ಹೋರಾಟ ಮಾಡಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಿ ಎಂದು ಒತ್ತಾಯ ಮಾಡಿದ್ದರು. ಇನ್ನು ಆನೆ ಹಾವಳಿ ತಡೆಗೆ ಆನೆ ಕಂದಕ, ಸೋಲಾರ್ ಬೇಲಿ ಸೇರಿ ಹಲವು ಕ್ರಮ ಕೈಗೊಂಡಿದ್ದ ಅರಣ್ಯ ಇಲಾಖೆ ಎಲ್ಲವೂ ಫಲ ನೀಡದಿದ್ದಾಗ ಮುಂದೇನು ಎನ್ನುವ ಪ್ರಶ್ನೆ ಮೂಡಿತ್ತು. ನವೆಂಬರ್ 1ರಂದು ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಓರ್ವ ಬಲಿಯಾಗಿದ್ದು, ಈ ಪ್ರಕರಣದ ಬಳಿಕ ಎಚ್ಚೆತ್ತ ಸರ್ಕಾರ ಎರಡು ದಶಕದ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ.
ಕಳೆದ ವಾರ ಸಿಎಂ ತಮ್ಮ ಅಧ್ಯಕ್ಷೆತೆಯಲ್ಲಿ ನಡೆಸಿದ ತಜ್ಞರ ಸಭೆ ಬಳಿಕ ಕಾಡಾನೆ ಹಾವಳಿ ತಡೆಗೆ ಈ ನಾಲ್ಕೂ ಜಿಲ್ಲೆಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ವಿಶೇಷ ಆನೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿದ್ದರು, ಇದಾದ ಒಂದೇ ವಾರಕ್ಕೆ ಈ ಟೀಮ್ಗೆ ಅಧಿಕಾರಿಗಳನ್ನು ನೇಮಿಸಿ ಎಂದು ಆದೇಶ ಹೊರಡಿಸಲಾಗಿದೆ. ಇನ್ನು ಹಾಸನಕ್ಕೆ ಇಲ್ಲಿನ ಅರಣ್ಯ ತನಿಖಾ ವಿಭಾಗದ ರವೀಂದ್ರ ಕುಮಾರ್ ಅವರನ್ನು ಡಿಸಿಎಫ್ ಆಗಿ ನೇಮಕ ಮಾಡಲಾಗಿದ್ದು, ಓರ್ವ ಎಸಿಎಫ್, ಓರ್ವ ಆರ್.ಎಫ್.ಓ. ನಾಲ್ವರು ಡಿ.ಆರ್.ಎಫ್.ಓಗಳು, ಎಂಟು ಫಾರೆಸ್ಟ್ ಗಾರ್ಡ್ಗಳ ಜೊತೆಗೆ 32 ಜನರು ಅರೆಗುತ್ತಿಗೆ ಸಿಬ್ಬಂದಿ ಈ ತಂಡದಲ್ಲಿ ಇರಲಿದ್ದು ಇನ್ಮುಂದೆ ಆನೆ ಇದ್ದಲ್ಲಿ ಈ ತಂಡ ಪ್ರತ್ಯಕ್ಷವಾಗಿ ಬೆಳೆ ಪ್ರಾಣ ಹಾನಿ ತಡೆಗೆ ಮುಂದಾಗಲಿದೆ.
ಇದನ್ನೂ ಓದಿ:Pushpaka Vimana: ‘ಪುಷ್ಪಕ ವಿಮಾನ’ ಚಿತ್ರಕ್ಕೆ 35 ವರ್ಷ; ಭಾವನಾತ್ಮಕ ಪತ್ರ ಬರೆದ ಕಮಲ್ ಹಾಸನ್
ಹಾಸನ ಜಿಲ್ಲೆಯ ಆಲೂರು, ಸಕಲೇಶಫುರ, ಬೇಲೂರು, ಅರಕಲಗೂಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿ ಜನರು ಇನ್ನಿಲ್ಲದಂತೆ ಪರಿತಪಿಸಿ ಹೋಗಿದ್ದಾರೆ. ಇದುವರೆಗೆ 74 ಜನರು ಆನೆ ದಾಳಿಯಿಂದ ಬಲಿಯಾಗಿದ್ದಾರೆ. ಕೋಟಿ ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಆನೆಗಳ ಬಲಿಯೂ ನಡೆದು ಹೋಗಿದೆ ಇಷ್ಟಿದ್ದರೂ ಇಷ್ಟು ದಿನಗಳವರೆಗೆ ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಆಗಿರಲಿಲ್ಲ. ಪ್ರತಿಬಾರಿ ಯಾರಾದರೂ ಆನೆ ದಾಳಿಗೆ ಬಲಿಯಾದಾಗ ಶಾಶ್ವತ ಪರಿಹಾರದ ಕೂಗು ಕೇಳಿ ಬರುತ್ತಿತ್ತು. ಆದರೆ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿದೆ. ಎರಡು ದಶಕಗಳಿಂದ ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದ ಕಾಡಂಚಿನ ಜನರು, ಇದೀಗ ಅಂತಿಮವಾಗಿ ಆನೆ ಟಾಸ್ಕ್ ಫೋರ್ಸ್ ಮೂಲಕ ಆನೆ ಮಾನವ ಸಂಘರ್ಷ ತಡೆಗೆ ಹೊಸ ತಂತ್ರ ಹೆಣೆದಿದ್ದು, ಇದು ಯಾವ ರೀತಿಯ ಫಲ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ್.ಕೆ.ಬಿ ಟಿವಿ9 ಹಾಸನ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ