AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ಉತ್ಸವ 2026: ವರ್ಷಕ್ಕೊಮ್ಮೆ ಒಲಿಯುವ ಹಾಸನಾಂಬೆಯ ದರ್ಶನೋತ್ಸವ ಯಾವಾಗ ಆರಂಭ? ಮಾಹಿತಿ ಇಲ್ಲಿದೆ

2026ರ ಸಾಲಿನ ಹಾಸನಾಂಬೆ ದರ್ಶನೋತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಜರುಗಲಿದೆ. ಅಕ್ಟೋಬರ್ 30 ರಿಂದ ಸಾರ್ವಜನಿಕ ದರ್ಶನ ಆರಂಭವಾಗಲಿದ್ದು, ನವೆಂಬರ್ 10 ರವರೆಗೆ ಅವಕಾಶವಿರುತ್ತದೆ. ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರು-ಹಾಸನ ಹಾಗೂ ಅರಸೀಕೆರೆ-ಹಾಸನ ನಡುವೆ ವಿಶೇಷ ರೈಲು ಸೌಲಭ್ಯ ಕಲ್ಪಿಸಿದೆ.

ಹಾಸನಾಂಬೆ ಉತ್ಸವ 2026: ವರ್ಷಕ್ಕೊಮ್ಮೆ ಒಲಿಯುವ ಹಾಸನಾಂಬೆಯ ದರ್ಶನೋತ್ಸವ ಯಾವಾಗ ಆರಂಭ? ಮಾಹಿತಿ ಇಲ್ಲಿದೆ
ಹಾಸನಾಂಬಾ ದೇವಾಲಯ
ಭಾವನಾ ಹೆಗಡೆ
| Edited By: |

Updated on:Oct 16, 2026 | 11:04 AM

Share

ಮುಖ್ಯಾಂಶಗಳು

  • ಹಾಸನಾಂಬೆ ದರ್ಶನೋತ್ಸವ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿದೆ.
  • ಅಕ್ಟೋಬರ್ 30 ರಿಂದ ಭಕ್ತರಿಗೆ ಸಾರ್ವಜನಿಕ ದರ್ಶನ ಲಭ್ಯವಿರಲಿದೆ.
  • ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.

ಹಾಸನ, ಅಕ್ಟೋಬರ್ 16: ಕರ್ನಾಟಕದ ಪ್ರಸಿದ್ಧ ಹಾಗೂ ಪವಾಡಸದೃಶ ಕ್ಷೇತ್ರವಾದ ಹಾಸನದ ಶ್ರೀ ಹಾಸನಾಂಬೆಯ ದೇವಸ್ಥಾನದ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಯುತ್ತದೆ. 2026ರ ಸಾಲಿನ ಹಾಸನಾಂಬೆ ದರ್ಶನೋತ್ಸವದ ದಿನಾಂಕ ನಿಗದಿಯಾಗಿದ್ದು, ಕೋಟ್ಯಂತರ ಭಕ್ತರು ದೇವಿಯ ದರ್ಶನಕ್ಕೆ ಎದುರು ನೋಡುತ್ತಿದ್ದಾರೆ. ಈ ಬಾರಯ ಉತ್ಸವ ಅಕ್ಟೋಬರ್ 29ರಿಂದ ಪ್ರಾರಂಭವಾಗಿ ನವೆಂಬರ್ 11ರವರೆಗೂ ತಾಯಿಯ ದರ್ಶನಕ್ಕೆ ಅವಕಾಶವಿರಲಿದೆ.

ದರ್ಶನೋತ್ಸವದ ವೇಳಾಪಟ್ಟಿ

  • ಬಾಗಿಲು ತೆರೆಯುವ ದಿನ: ಆಶ್ವಯುಜ ಪೂರ್ಣಿಮೆಯ ನಂತರದ ಗುರುವಾರ (ಅ.29) ಮಧ್ಯಾಹ್ನ 12:00 ಗಂಟೆಗೆ ಶಾಸ್ತ್ರೋಕ್ತವಾಗಿ ಗುಡಿಯ ಬಾಗಿಲು ತೆರೆಯಲಾಗುತ್ತದೆ. ಈ ದಿನ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ.
  • ಸಾರ್ವಜನಿಕ ದರ್ಶನ ಆರಂಭ:ಅಕ್ಟೋಬರ್ 30, ಶುಕ್ರವಾರ ದಿಂದ ಭಕ್ತರಿಗೆ ದರ್ಶನ ಲಭ್ಯವಿರುತ್ತದೆ.
  • ಸಾರ್ವಜನಿಕ ದರ್ಶನ ಮುಕ್ತಾಯ: ನವೆಂಬರ್ 10, ಮಂಗಳವಾರ
  • ಬಾಗಿಲು ಮುಚ್ಚುವ ದಿನ: ಬಲಿಪಾಡ್ಯಮಿ ದಿನವಾದ ನವೆಂಬರ್ 11, ಬುಧವಾರದಂದು ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ

ವಿಶೇಷ ರೈಲು ಸೌಲಭ್ಯ

ಕಳೆದ ವರ್ಷ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದೆ. ಸುಗಮ ದರ್ಶನಕ್ಕೆ ಬೇಕಾದ ಬ್ಯಾರಿಕೇಡ್ ವ್ಯವಸ್ಥೆ, ಪ್ರಸಾದ ವಿತರಣೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ.

ದರ್ಶನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಕೆಎಸ್‌ಆರ್ ಬೆಂಗಳೂರು-ಹಾಸನ ಹಾಗೂ ಅರಸೀಕೆರೆ-ಹಾಸನ ನಡುವೆ ವಿಶೇಷ ರೈಲುಗಳ ಸಂಚಾರವನ್ನು ಕಲ್ಪಿಸಿದೆ.

ಇದನ್ನೂ ಓದಿ:ಹಾಸನಾಂಬೆ ದರ್ಶನೋತ್ಸವಕ್ಕೆ 13.5 ಕೋಟಿ ಖರ್ಚು ಅಂದಾಜು: ಜಿಲ್ಲಾಡಳಿತದ ನಡೆಗೆ ಜೆಡಿಎಸ್​ನಿಂದ ತೀವ್ರ ಆಕ್ರೋಶ

ಮನಸ್ತಾಪ ಮರೆತು ಹಾಸನ ಡಿಸಿ-ಎಸ್‌ಪಿ ಹಾಸನಾಂಬೆ ದರ್ಶನ!

ಹಾಸನದಲ್ಲಿ ಇತ್ತೀಚೆಗೆ ಗಣಪತಿ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಹಾಗೂ ಜಟಾಪಟಿ ಕೊನೆಗೂ ಶಮನಗೊಂಡಿದೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಇಬ್ಬರೂ ಹಿರಿಯ ಅಧಿಕಾರಿಗಳು ತಮ್ಮ ಮನಸ್ತಾಪವನ್ನು ಮರೆತು ಒಂದಾಗಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ದಿನಾಂಕ ಫಿಕ್ಸ್: ಈ ಬಾರಿ ಹೇಗಿರಲಿದೆ ಉತ್ಸವ?

ಇಂದು ಒಟ್ಟಾಗಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ ಡಿಸಿ ಹಾಗೂ ಎಸ್‌ಪಿ, ಪರಸ್ಪರ ಹಸ್ತಲಾಘವ ಮಾಡಿ ಆತ್ಮೀಯವಾಗಿ ಅಪ್ಪಿಕೊಳ್ಳುವ ಮೂಲಕ ತಾವು ಒಂದಾಗಿರುವುದನ್ನು ಸಾಬೀತುಪಡಿಸಿದರು. ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಇಬ್ಬರೂ ಅಧಿಕಾರಿಗಳು, ಮಂಗಳಾರತಿ ತಟ್ಟೆಗೆ ಹಣ ಹಾಕುತ್ತಾ ದರ್ಶನೋತ್ಸವದ ಸಿದ್ಧತೆಗಳ ಕುರಿತು ಪರಸ್ಪರ ಸಮಾಲೋಚನೆ ನಡೆಸಿದರು. ಮುಂಬರುವ ಹಾಸನಾಂಬೆ ಉತ್ಸವವನ್ನು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಯಶಸ್ವಿಯಾಗಿ ನಡೆಸಲು ಇಬ್ಬರೂ ಪ್ರಮುಖ ಅಧಿಕಾರಿಗಳು ಸಜ್ಜಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Fri, 16 October 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More