ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಯುವಕನ ಮೇಲೆ FIR ದಾಖಲು
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ವಾಯ್ಸ್ ಮೆಸೆಜ್ ಕಳಸಿದ್ದ ಯುವಕನ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೆ ಆರೋಪಿಯನ್ನು ಬಂಧಿಸುವಂತೆ ಹಿಂದೂ ಕಾರ್ಯಕರ್ತರ ಒತ್ತಾಯಿಸಿದ್ದಾರೆ.
ಹಾವೇರಿ, ಜನವರಿ 24: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ವಾಯ್ಸ್ ಮೆಸೆಜ್ ಕಳಸಿದ್ದ ಯುವಕನ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಧಿಕ್ ದಾಲ್ ರೊಟ್ಟಿ (26 ವರ್ಷ)ಯು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜನವರಿ 23ರ ಸಾಯಂಕಾಲ ರಾಣೇಬೆನ್ನೂರು (Ranebennur) ತಾಲೂಕಿನ ಹೆಡಿಯಾಲ ಗ್ರಾಮದ ಯೋಗೇಶ ಷಣ್ಮುಖಪ್ಪ ತೋಟಗೇರ ಎಂಬುವರಿಗೆ ವಾಯ್ಸ್ ಮೆಸೆಜ್ ಕಳುಹಿಸಿದ್ದಾನೆ. ಅಲ್ಲದೇ ಶ್ರೀರಾಮ ಮಂದಿರ ಭಾವಚಿತ್ರದ ಮೇಲೆ ಅಲ್ಲಾ ಹು ಅಕ್ಬರ್ ಅಂತ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.
ಈ ವಿಚಾರ ತಿಳಿಯುತ್ತಿದ್ದಂತೆ ಶಿವನಗೌಡ ಮುಲ್ಕಿಗೌಡರ ಎಂಬುವರು ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೆ ಆರೋಪಿಯನ್ನು ಬಂಧಿಸುವಂತೆ ಹಿಂದೂ ಕಾರ್ಯಕರ್ತರ ಒತ್ತಾಯಿಸಿದರು.
ರಾಮ ಮಂದಿರದ ಫೋಟೋ ತಿರುಚಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್
ರಾಮ ಮಂದಿರದ ಚಿತ್ರವನ್ನು ತಿರುಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್ ದಫೇದಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ಜನವರಿ 22 ರಂದು ತಾಜುದ್ದೀನ್ ದಫೇದಾರ್ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.
ಇದನ್ನೂ ಓದಿ: ಅಯೋಧ್ಯೆ ಮಂದಿರ ಉದ್ಘಾಟನೆ ವೇಳೆ ಶಾಂತಿ ಕದಡುವ ಫೇಸ್ ಬುಕ್ ಪೋಸ್ಟ್: ಕೊಪ್ಪಳ ಪೊಲೀಸರಿಂದ FIR ದಾಖಲು
ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭದಲ್ಲಿ ಇಂತಹ ಘಟನೆ ನಡೆದಿತ್ತು. ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರ ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಲಾಗಿತ್ತು. ಸುದ್ಧಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರ ಹಾಕಿದ್ದರು.
ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೇದಾರ್ ಬಂಧಿಸಿದ್ದರು. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ಪೊಲೀಸ್ ಠಾಣೆಗೆ ದೌಡಾಯಿಸಿ ಯುವಕನಿಗೆ ತರಾಟೆಗೆ ತೆಗೆದುಕೊಂಡಿದ್ದರು. ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪಿಎಸ್‌ಐ ಸೋಮನಗೌಡರು ಮಾಹಿತಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ