ಹಾವೇರಿ: ಸಿಎಂ ತವರು ಜಿಲ್ಲೆಯಲ್ಲಿ ರೋಗಿಗಳ ಪರದಾಟ; ಬೆಳಿಗ್ಗೆ ಬಂದ ರೋಗಿಗೆ ಸಾಯಂಕಾಲ ಚಿಕಿತ್ಸೆ
ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಇರುತ್ತೆ ಅಂತಾ ದೂರದ ಹಳ್ಳಿಗಳಿಂದ ರೋಗಿಗಳು ಬರ್ತಾರೆ. ಆದರೆ ವೈದ್ಯರ ಚಿಕಿತ್ಸೆಗಾಗಿ ನಾಲ್ಕೈದು ಗಂಟೆ ಕಾಯಬೇಕು ಜೊತೆಗೆ ಚಿಕಿತ್ಸೆ ಬಳಿಕ ವೈದ್ಯರು ಬರೆದುಕೊಟ್ಟ ಔಷಧಿಯಾದರೂ ಸರಿಯಾಗಿ ಸಿಗುತ್ತದೆಯೇ ಅಂದರೆ ಅದು ಕೂಡ ಸಿಗಲ್ಲ.
ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಹೋದರೆ ಉಚಿತವಾಗಿ ಚಿಕಿತ್ಸೆ ಸಿಗುತ್ತೆ ಜೊತೆಗೆ ಪಕ್ಕದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಿ ಕೂಡ ಸಿಗುತ್ತೆ ಅಂತಾ ಜಿಲ್ಲೆಯ ಹಳ್ಳಿ ಹಳ್ಳಿಗಳಿಂದ ಸಾವಿರಕ್ಕೂ ಹೆಚ್ಚು ಜನರು ಪ್ರತಿದಿನ ಜಿಲ್ಲಾಸ್ಪತ್ರೆಗೆ ಬರ್ತಾರೆ. ಆದರೆ ಇಲ್ಲಿನ ಅವ್ಯವಸ್ಥೆಯಿಂದ ಬಡ ರೋಗಿಗಳು ಪ್ರತಿದಿನ ಪರದಾಡುವಂತಹ ಸ್ಥಿತಿ ಇದೆ. ಬೆಳಿಗ್ಗೆ 10 ಗಂಟೆಗೆ ರೋಗಿ ಜಿಲ್ಲಾಸ್ಪತ್ರೆಗೆ ಬಂದರೆ ಸಾಯಂಕಾಲ 5 ಗಂಟೆಗೆ ವೈದ್ಯರು ಚಿಕಿತ್ಸೆ ಕೊಡ್ತಾರೆ. ಅಲ್ಲಿವರಗೂ ಆಸ್ಪತ್ರೆಯಲ್ಲಿಯೆ ರೋಗಿಗಳು ತಮಗಾಗುತ್ತಿರುವ ಸಮಸ್ಯೆ ನುಂಗಿ ಕುಳಿತುಕೊಳ್ಳಬೇಕು. ಇನ್ನು 5 ಗಂಟೆ ಬಳಿಕವಾದ್ರೂ ಮನೆಗೆ ಹೋಗಿ ಆರಾಮ ಆಗಿ ಇರಬೇಕು ಅಂದ್ರೆ ವೈದ್ಯರು ಬರೆದುಕೊಡುವ ಔಷಧಿಗಳು ಸರ್ಕಾರಿ ಮೇಡಿಕಲ್ನಲ್ಲಿ ಸೀಗಲ್ಲ. ಕೈಯಲ್ಲಿ ಕಾಸಿಲ್ಲ ಅಂತಾ ಕಷ್ಟ ಪಟ್ಟು ಸರ್ಕಾರಿ ಆಸ್ಪತ್ರೆಗೆ ಬಂದ್ರೆ ಔಷಧಿ ಇಲ್ಲದೆ ಮನೆಗೆ ಹೋಗಬೇಕಾಗುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಒಪ್ಪಿಕೊಂಡಿರುವ ವೈದ್ಯಾಧಿಕಾರಿ ಡಾ. ಹಾವನೂರ ‘ಫಾರ್ಮಾಸಿಸ್ಟ್ ಸಿಬ್ಬಂಧಿ ಕೊರತೆ ಇರುವ ಹಿನ್ನಲೆ ಔಷಧಿಗಳನ್ನು ತರಿಸಲು ವ್ಯತ್ಯಯ ಆಗುತ್ತಿದೆ, ಪ್ರತಿದಿನ ಸಾವಿರಕ್ಕೂ ಹೆಚ್ಚು ರೋಗಿಗಳು, 200 ಕ್ಕೂ ಹೆಚ್ಚು ಡೆಲೆವರಿಗಳು ಆಗುತ್ತವೆ. ಇಲ್ಲಿ ನೂರಿತ ವೈದ್ಯರ ತಂಡದಿಂದ ಉತ್ತಮ ಚಿಕಿತ್ಸೆ ಕೊಡುವುದರಿಂದ ಹೆಚ್ಚಿನ ಸಂಖ್ಯೆ ರೋಗಿಗಳು ಇಲ್ಲಿಗೆ ಬರ್ತಾರೆ. ಇನ್ನುಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಜವಾಬ್ದಾರಿ ವಹಿಸುತ್ತೆನೆ ಎಂದು ತಿಳಿಸಿದರು.
ಇದನ್ನೂ ಓದಿ: ಹಾವೇರಿ: ಸಿಎಂ ತವರು ಜಿಲ್ಲೆಯಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಬೋಧಕರೇ ಇಲ್ಲ; ಕಂಗಾಲಾದ ವಿದ್ಯಾರ್ಥಿಗಳು
ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಘೋಷವಾಕ್ಯವನ್ನು ಹೇಳುವ ಮುಖ್ಯಮಂತ್ರಿಗಳು, ಅವರ ತವರು ಜಿಲ್ಲೆಯಲ್ಲಿಯೇ ರೋಗಿಗಳು ಪ್ರತಿದಿನ ಪರದಾಡುವಂತಹ ಪರಿಸ್ಥಿತಿ ಇರುವಾಗ ಬೇರೆ ಜಿಲ್ಲೆಯಲ್ಲಿನ ಪರಿಸ್ಥಿತಿ ಹೇಗಿದೆ ಎಂಬ ಪ್ರಶ್ನೆ ಮೂಡುತ್ತದೆ.
ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Tue, 21 February 23