ಮಹಿಳೆ ಬೆತ್ತಲಾಗಿಲ್ಲ, ಕಾಂಗ್ರೆಸ್ ಸರ್ಕಾರವೇ ಬೆತ್ತಲಾಗಿದೆ: ಮಾಜಿ ಸಚಿವ ಬಿಸಿ ಪಾಟೀಲ್
ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆ ಆಗಿದೆ. ಕಾನೂನು ಸುವ್ಯವಸ್ಥೆ ಎಲ್ಲಿದೆ? ಪೊಲೀಸ್ ಇಲಾಖೆ ಏನು ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹಾವೇರಿಯಲ್ಲಿ ಪ್ರತಿಭಟನೆ ಮಾಡಲಾಗಿದೆ.
ಹಾವೇರಿ, ಡಿಸೆಂಬರ್ 16: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಗರದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿಸಿ ಪಾಟೀಲ್ (BC Patil), ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆ ಆಗಿದೆ. ಕಾನೂನು ಸುವ್ಯವಸ್ಥೆ ಎಲ್ಲಿದೆ? ಪೊಲೀಸ್ ಇಲಾಖೆ ಏನು ಕೆಲಸ ಮಾಡುತ್ತಿದೆ? ಇಂದು ವಿಚಾರ ಮಾಡಬೇಕಿದೆ. ಕಾಂಗ್ರೆಸ್ ಭ್ರಷ್ಟ ಹಾಗೂ ಅದಕ್ಷ ಸರ್ಕಾರ ಎಂದು ವಾಗ್ದಾಳಿ ಮಾಡಿದ್ದಾರೆ.
ಭ್ರೂಣ ಹತ್ಯೆ ಆದರೂ ಕ್ರಮ ತಗೊಳ್ಳುತ್ತಿಲ್ಲ. ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಆಗುತ್ತಿದೆ. ಆದರೂ ಈ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರು ಹಣ ಮಾಡುವುದರಲ್ಲಿ ಪೈಪೋಟಿಗಿಳಿದಿದ್ದಾರೆ. ಅವರವರಲ್ಲೇ ದುಡ್ಡು ಮಾಡುವುದರಲ್ಲಿ ಕಾಂಪಿಟೇಶನ್ ನಡೆದಿದೆ. ಅಭಿವೃದ್ಧಿಯಂತೂ ರಾಜ್ಯದಲ್ಲಿ ಶೂನ್ಯವಾಗಿದೆ. ಇಂಥ ಸರ್ಕಾರಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದೇವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಆಸ್ಪತ್ರೆಗೆ ಭೇಟಿ ನೀಡಿದ ದೆಹಲಿ ಬಿಜೆಪಿ ನಿಯೋಗ
ನಾವು ಕೃಷಿ ಸಚಿವರಿದ್ದಾಗ ಸ್ಪ್ರಂಕ್ಲರ್ಗೆ 1850 ರೂಪಾಯಿ ಇತ್ತು. ಆದರೆ ಇಂದು 4200 ರೂಪಾಯಿ ಮಾಡಿದಾರೆ. ಒಂದು ವರ್ಷದಲ್ಲಿ ಹೇಗೆ ಡಬಲ್ ಆಗಿದೆ ಗೊತ್ತಾಗುತ್ತಿಲ್ಲ. ಏನೋ ಅವ್ಯವಹಾರ ಇಲ್ಲಿ ನಡೆದಿದೆ. ರೈತರ ಮೇಲೆ ಭಾರ ಹಾಕುತ್ತಿದ್ದಾರೆ. ರೈತರು ಅಲ್ಪಾವಧಿ, ಮದ್ಯಮಾವಧಿ ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುತ್ತೇವೆ ಅಂತ ಹೇಳಿದಾರೆ.
ಇದನ್ನೂ ಓದಿ: ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ನೀಡಿದ ಮಾನವ ಹಕ್ಕುಗಳ ಆಯೋಗ
ಬರಗಾಲ ಬಂದು ರೈತರು ಒಂದು ಹೊತ್ತಿಗೆ ಊಟಕ್ಕೂ ಪರದಾಡುತ್ತಿದ್ದಾರೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರಿಗೆ ಅಸಲು ಕಟ್ಟು ಅಂದರೆ ಎಲ್ಲಿ ಕಟ್ಟತಾರೆ? ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಬಡ್ಡಿ ಬದಲು ಅಸಲು ಮನ್ನಾ ಮಾಡಬೇಕಿತ್ತು. ರೈತರಿಗೆ ಭಿಕ್ಷೆ ಕೊಟ್ಟ ರೀತಿ ಎಕರೆಗೆ 2000 ಕೊಡುತ್ತೇವೆ ಅಂತಿದಾರೆ. ನಮ್ಮ ಸರ್ಕಾರ 22 ರಿಂದ 27 ಸಾವಿರ ರೂ. ವರೆಗೆ ಪರಿಹಾರ ಕೊಟ್ಟಿದೆ. ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದಿದ್ದಾರೆ.
ಬಿಜೆಪಿಯಿಂದ ಮೂರು ಜನಕ್ಕೆ ನೋಟಿಸ್
ವಿಶ್ವನಾಥ್, ಶಿವರಾಮ್ ಹೆಬ್ಬಾರ್, ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಐದು ಬೆರಳು ಒಂದೇ ಸಮ ಇರಲ್ಲ. ಈಗಾಗಲೇ ಬಿಜೆಪಿ ಪಕ್ಷದಿಂದ ಮೂರು ಜನಕ್ಕೆ ನೋಟಿಸ್ ಕೊಟ್ಟಿದಾರೆ. ಹೇಗೆ ಸಭೆಯಲ್ಲಿ ಭಾಗಿಯಾದರು ಸ್ಪಷ್ಟನೆ ಕೊಡಿ ಅಂತ ಸೂಚಿಸಿದ್ದಾರೆ. ದೇಹ ಇಲ್ಲಿ, ಮನಸು ಅಲ್ಲಿ ಅಂದರೆ ಆಗಲ್ಲ, ಇದು ದುರದೃಷ್ಟಕರ. ಪಕ್ಷಕ್ಕೂ ಇದರಿಂದ ಮುಜುಗರ. ಅವರು ಒಂದು ನಿರ್ಧಾರ ಮಾಡಬೇಕು. ಹೋಗುವುದಿದ್ದರೆ ಹೋಗಬೇಕು, ಇರೋದಿದ್ದರೆ ಇರಬೇಕು ಎಂದಿದ್ದಾರೆ.
ಇದು ಒಂದು ಪೂರ್ವ ನಿಯೋಜಿತ ಕೃತ್ಯ
ಸಂಸತ್ ಭವನದ ದಾಳಿ ಸಂದರ್ಭದಲ್ಲಿ ನಾನು ಅಲ್ಲೇ ಇದ್ದೆ. ನಾನು ಕಲಾಪ ನೋಡೋದಕ್ಕೆ ಅಂತ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದೆ. ನೋಡಿ ಆಯಿತು ಅಂತ ಹೊರಗೆ ಬಂದೆ. ಅದಾಗಿ 10 ನಿಮಿಷಕ್ಕೆ ಆ ಘಟನೆ ನಡೆದಿದೆ. ಇದು ಒಂದು ಪೂರ್ವ ನಿಯೋಜಿತ ಕೃತ್ಯ. ಅಷ್ಟೊಂದು ಸೆಕ್ಯುರಿಟಿ ಇದ್ದರೂ ಭೇದಿಸಿ ಹೋಗಿದಾರೆ. ಅಂದರೆ ಇದರ ಹಿಂದೆ ವ್ಯವಸ್ಥಿತ ಸಂಚಿದೆ. ಇದರ ಬಗ್ಗೆ ತೀವ್ರ ತನಿಖೆ ಆಗಬೇಕಿದೆ ಎಂದು ಹೇಳಿದ್ದಾರೆ.
ರವಿ ಹೂಗಾರ. Tv9 ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.