ಹಾವೇರಿ: ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರದ ಪ್ರಯತ್ನ, ರೈತರಿಂದ ತೀವ್ರ ವಿರೋಧ
ಸುಮಾರು ವರ್ಷಗಳಿಂದ ಕೃಷಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ರೈತರು. ಈಗ ಕೈಗಾರಿಕಾ ಕಾರಿಡಾರ್ ಮಾಡುವುದಾಗಿ ಸರಕಾರ ಅವರ ಜಮೀನು ಸ್ವಾಧೀನಕ್ಕೆ ಮುಂದಾಗಿದೆ. ರೈತರಿಗೆ ಗೊತ್ತಿಲ್ಲದಂತೆ ರೈತರ ಭೂಮಿ ಸ್ವಾಧೀನಕ್ಕೆ ನೊಟೀಸ್ ಹೊರಡಿಸಿದೆ.
ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು, ಅಳಲಗೇರಿ, ಅರಬಗೊಂಡ ಗ್ರಾಮದ ರೈತರು. ತಮ್ಮ ಪಾಡಿಗೆ ತಾವು ಎಂದು ಪಿತ್ರಾರ್ಜಿವಾಗಿ ಬಂದಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (Karnataka Industrial Area Development Board – KIADB) ಕೈಗಾರಿಕಾ ಕಾರಿಡಾರ್ಗಾಗಿ ಮೂರು ಗ್ರಾಮಗಳ 1,017.17 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿಗಳು ರೈತರ ಗಮನಕ್ಕೆ ತಾರದೇ ‘ಫೋರ್ ಒನ್’ ನೊಟೀಸ್ ಹೊರಡಿಸಿದ್ದಾರೆ. ಇದು ಭೂಮಿ ಕಳೆದುಕೊಳ್ಳಲಿರುವ ರೈತರನ್ನು ಕೆರಳಿಸಿದೆ. ರೈತರು ಈಗ ಸರಕಾರದ ವಿರುದ್ಧ ನಿಂತಿದ್ದಾರೆ. ಭೂಸ್ವಾಧೀನಕ್ಕೆ ಒಳಪಡುವ ಮೂರು ಗ್ರಾಮಗಳ ರೈತರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲವೆಂದು, ಮೋಟೆಬೆನ್ನೂರು ಗ್ರಾಮದಿಂದ ಬ್ಯಾಡಗಿ ಪಟ್ಟಣದ ತಹಶೀಲ್ದಾರ್ ಕಚೇರಿಯವರೆಗೆ ಎತ್ತು, ಚಕ್ಕಡಿಗಳ ಮೂಲಕ ಪಾದಯಾತ್ರೆಯಲ್ಲಿ ತೆರಳಿ ತಹಶೀಲ್ದಾರ್ ಕಚೇರಿ ಮುಂದೆ ಇತ್ತೀಚೆಗೆ ಪ್ರತಿಭಟನಾ ಧರಣಿ ನಡೆಸಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದು, ಹಸಿರು ಶಾಲು ಕಟ್ಟಿ ಪ್ರತಿಭಟಿಸಿದರು. ರೈತರು ತಮ್ಮ ಮನೆಗಳಲ್ಲಿನ ಎತ್ತು, ಚಕ್ಕಡಿಗಳನ್ನು ತೆಗೆದುಕೊಂಡು ಬಂದು ಪ್ರಾಣ ಕೊಟ್ಟೆವು, ಭೂಮಿ ಬಿಡೆವು ಎಂದು ಘೋಷಣೆ ಕೂಗಿದರು. ಕೈಗಾರಿಕಾ ಕಾರಿಡಾರ್ಗೆ ಭೂಮಿ ಸ್ವಾಧೀನಕ್ಕಾಗಿ ಒಳಪಡುವ ಜಮೀನಿನಲ್ಲಿ ಬ್ಯಾಡಗಿಯ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಅವರ ಕುಟುಂಬಸ್ಥರ ಒಂದು ನೂರು ಎಕರೆಗೂ ಅಧಿಕ ಜಮೀನಿದೆ. ಆದರೆ ಜಮೀನು ಭೂಸ್ವಾಧೀನಕ್ಕೆ ಒಳಪಡುತ್ತಿರುವ ವಿಚಾರ ಶಾಸಕರು ಮತ್ತು ಅವರ ಕುಟುಂಬದವರಿಗೂ ಗೊತ್ತಿಲ್ಲವೆಂದು ಹೇಳುತ್ತಿದ್ದಾರೆ. ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕುಟುಂಬಸ್ಥರು ಸಹ ಕೈಗಾರಿಕಾ ಕಾರಿಡಾರ್ಗೆ ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎಂದು ರೈತರ ಪ್ರತಿಭಟನೆಯನ್ನು ಬೆಂಬಲಿಸಿದರು.
ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಮೀನುಗಳ ಪೈಕಿ ಬಹುತೇಕ ಭೂಮಿಯಲ್ಲಿ ರೈತರು ನೀರಾವರಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಡಿಕೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದರೆ ಸರಕಾರ ಕೈಗಾರಿಕಾ ಕಾರಿಡಾರ್ ಮಾಡುವುದಕ್ಕೆ ಎಂದು ಫಲವತ್ತಾದ ರೈತರ ಜಮೀನಿನ ಮೇಲೆ ಕಣ್ಣು ಹಾಕಿದೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ಕೆಐಎಡಿಬಿ ರೈತರ ಜಮೀನು ಸ್ವಾಧೀನಕ್ಕೆ ಹೊರಡಿಸಿರುವ ನೊಟೀಸ್ ನೋಡಿ ಕಂಗಾಲಾಗಿದ್ದಾರೆ. ನೊಟೀಸ್ ಹಿಂಪಡೆದು ರೈತರ ಭೂಮಿ ಸ್ವಾಧೀನ ಕೈಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಪ್ರಾಣ ಕೊಟ್ಟೆವು, ಭೂಮಿ ಬಿಡೆವು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂಓದಿ: ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮದುಮಗಳಿಗಷ್ಟೇ ಅಲಂಕಾರ, ಮದುವೆ ಮನೆಗಿಲ್ಲ ತೋರಣ ಭಾಗ್ಯ
ವರದಿ: ಪ್ರಭುಗೌಡ.ಎನ್.ಪಾಟೀಲ ಟಿವಿ9 ಹಾವೇರಿ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ