ನೀಟ್ ಮರುಪರೀಕ್ಷೆಯಲ್ಲಿ ಹಾವೇರಿ ವಿದ್ಯಾರ್ಥಿಗೆ ಅನ್ಯಾಯ: ಕಾನೂನು ಹೋರಾಟಕ್ಕಿಳಿದ ಪೋಷಕರು, ಆಗಿದ್ದೇನು?
Haveri NEET News: ನೀಟ್ ಪ್ರಶ್ನೆ ಪತ್ರಿಕೆ ಅಕ್ರಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ರಾಜೀನಾಮೆ ನೀಡಿದ್ದಾರೆ. ಇನ್ನು ನೀಟ್ ಮರುಪರೀಕ್ಷೆಗೆ ಸಂಬಂಧಿಸಿದಂತೆ ಇತ್ತ ಹಾವೇರಿಯಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ನೀಟ್ ಪರೀಕ್ಷೆಯ OMR ಶೀಟ್‌ನಲ್ಲಿ ಲೋಪದೋಷ ಆಗಿರುವುದು ಬೆಳಕಿಗೆ ಬಂದಿದೆ.

ಮುಖ್ಯಾಂಶಗಳು
- ಎರಡನೇ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಅನ್ಯಾಯ ಆರೋಪ
- ಓಎಂಆರ್ ಶೀಟ್‌ನಲ್ಲಿ ಬಂದಿದ್ದು ಕೇವಲ 11 ಅಂಕ
- ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ದೂರು ನೀಡಿದ ವಿದ್ಯಾರ್ಥಿನಿ
ಹಾವೇರಿ, ಜುಲೈ 25: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ, ಮಾರಾಟ ಮತ್ತು ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ವಿಚಾರ ಇಡೀ ದೇಶದಲ್ಲಿ ಕಿಚ್ಚು ಹೊತ್ತಿಸಿತ್ತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತ್ತು. ಈ ಹೋರಾಟದ ಕಿಚ್ಚಿಗೆ, ಪ್ರತಿಭಟನೆಯ ಒತ್ತಡದ ಬಳಿಕ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ನೀಟ್ ಮರುಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಕೆಲ ಲೋಪದೋಷ ಆಗಿರುವುದು ಬೆಳಕಿಗೆ ಬಂದಿದೆ. ತನಗಾದ ಅನ್ಯಾಯದ ಬಗ್ಗೆ ನೆನೆದು ವಿದ್ಯಾರ್ಥಿನಿ (student) ಕಣ್ಣೀರು ಹಾಕಿದ್ದಾರೆ.
ಕೇವಲ 11 ಅಂಕ
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ವಿದ್ಯಾರ್ಥಿ ಬಿಂದುಶ್ರೀ ಪವಾರ ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಹಾವೇರಿಯ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಂದುಶ್ರೀ ಇತ್ತೀಚೆಗೆ ನೀಟ್ ಮರುಪರೀಕ್ಷೆ ಬರೆದಿದ್ದರು. ಆದರೆ ಬಳಿಕ ಬಂದ ಫಲಿತಾಂಶ ನೋಡಿ ಆಘಾತ ಉಂಟಾಗಿದೆ. 720 ಅಂಕಗಳಿಗೆ ಕನಿಷ್ಠ ಅಂದರೂ 668 ಅಂಕಗಳು ಬರಬೇಕಿದ್ದ ಜಾಗದಲ್ಲಿ ಕೇವಲ 11 ಅಂಕಗಳು ಬಂದಿವೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ದೂರು ನೀಡಿರುವ ವಿದ್ಯಾರ್ಥಿನಿ
ತಾವು ಪರೀಕ್ಷೆಯಲ್ಲಿ ಮಾರ್ಕ್ ಮಾಡಿ ಬಂದ ಓಎಮ್‌ಆರ್ ಶೀಟ್‌ಗೂ, ಈಗ ಬಂದಿರುವ ಓಎಮ್‌ಆರ್ ಶೀಟ್‌ಗೂ ಯಾವುದೇ ಸಾಮ್ಯತೆಯಿಲ್ಲ. ಉತ್ತರ ಪತ್ರಿಕೆಯೇ ಅದಲು ಬದಲು ಆಗಿದೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಜುಲೈ 22 ರಂದು ದೂರು ನೀಡಿದ್ದಾರೆ. ಅಲ್ಲದೆ ಸಹಾಯವಾಣಿ ಸಂಖ್ಯೆಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸದ್ಯ ವಿದ್ಯಾರ್ಥಿನಿ ಹಾಗೂ ಕುಟುಂಬಸ್ಥರು ನ್ಯಾಯಕ್ಕಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ನನಗಾಗಿರುವ ಅನ್ಯಾಯ ಸರಿಪಡಿಸಬೇಕು: ಬಿಂದುಶ್ರೀ
ಇನ್ನು ಈ ಬಗ್ಗೆ ಟಿವಿ9 ಜೊತೆಗೆ ವಿದ್ಯಾರ್ಥಿ ಬಿಂದುಶ್ರೀ ಪವಾರ ಮಾತನಾಡಿದ್ದು, ‘‘ನಾನು ಡಾಕ್ಟರ್ ಆಗಬೇಕೆಂಬ ಒಂದೇ ಕನಸಿನಿಂದ ಕಳೆದ ಮೂರು ವರ್ಷಗಳಿಂದ ಕಷ್ಟಪಟ್ಟು ವ್ಯಾಸಂಗ ಮಾಡಿದ್ದೆ. ಪರೀಕ್ಷೆ ಮುಗಿದ ಮೇಲೆ ಪ್ರಶ್ನೆಪತ್ರಿಕೆ ತಾಳೆ ಹಾಕಿ ನೋಡಿದಾಗ ನನಗೆ 720ಕ್ಕೆ ಕನಿಷ್ಠ 668 ಅಂಕಗಳು ಬರುವುದು ಖಚಿತವಾಗಿತ್ತು. ಆದರೆ ಈಗ ರಿಸಲ್ಟ್‌ನಲ್ಲಿ 11 ಅಂಕ ಬಂದಿದೆ. ನಾನು ತುಂಬಿದ ಓಎಮ್‌ಆರ್ ಶೀಟ್ ಇದಲ್ಲವೇ ಅಲ್ಲ, ನನಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಬೇಕು’’ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಈ ಹಿಂದೆ ಪೇಪರ್ ಲೀಕ್ ವಿರುದ್ಧ ಹೋರಾಟ; ಈಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ರಾಜೀನಾಮೆ; ಯಾರೀ ಧರ್ಮೇಂದ್ರ ಪ್ರಧಾನ್?
‘‘ಕೇಂದ್ರ ಸರ್ಕಾರ ನಮಗೆ ನೀಟ್ ಪರೀಕ್ಷೆಯ ಮೂಲಪ್ರತಿ ನೀಡಬೇಕು. ಮುಂದೆ ಕೇಂದ್ರ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಮಾತ್ರವಲ್ಲದೆ, ಹೀಗೆ ಉತ್ತರ ಪತ್ರಿಕೆಯಲ್ಲೂ ಮೋಸವಾಗದಂತೆ ನೋಡಿಕೊಳ್ಳಬೇಕು’’ ಎಂದು ಅವರು ಮನವಿ ಮಾಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 pm, Sat, 25 July 26




