AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೇಡ್ತಿ-ವರದಾ ಯೋಜನೆಗೆ ಪಕ್ಷಾತೀತ ಹೋರಾಟ ಅನಿವಾರ್ಯ’: ಸಂಸದ ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿಗೆ ಪಕ್ಷಾತೀತ ಮತ್ತು ಸುದೀರ್ಘ ಹೋರಾಟ ಅಗತ್ಯ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಕರೆ ನೀಡಿದ್ದಾರೆ. ಗದಗ ಮತ್ತು ಹಾವೇರಿ ಜಿಲ್ಲೆಯ ರೈತರ ಬೃಹತ್ ಸಭೆ ಆಯೋಜಿಸಬೇಕು. ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಮಠಾಧೀಶರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯೋಜನೆಯ ಅಗತ್ಯ ಮನವರಿಕೆ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.

'ಬೇಡ್ತಿ-ವರದಾ ಯೋಜನೆಗೆ ಪಕ್ಷಾತೀತ ಹೋರಾಟ ಅನಿವಾರ್ಯ': ಸಂಸದ ಬಸವರಾಜ ಬೊಮ್ಮಾಯಿ
ಸಂಸದ ಬಸವರಾಜ ಬೊಮ್ಮಾಯಿImage Credit source: Basavar Bommai Facebook
ಪ್ರಸನ್ನ ಹೆಗಡೆ
|

Updated on: Nov 04, 2026 | 5:55 PM

Share

ಹಾವೇರಿ, ನವೆಂಬರ್​​ 04: ಉತ್ತರ ಕರ್ನಾಟಕದ ರೈತರ ಭವಿಷ್ಯ ಬದಲಿಸುವ ಸಾಮರ್ಥ್ಯ ಹೊಂದಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಸುದೀರ್ಘ ಹಾಗೂ ಪಕ್ಷಾತೀತ ಹೋರಾಟ ಅಗತ್ಯವಾಗಿದೆ. ಸರ್ಕಾರಗಳು ಬದಲಾಗಬಹುದು, ಆದರೆ ಯೋಜನೆಗಾಗಿ ನಡೆಯುವ ಹೋರಾಟದ ಸಂಕಲ್ಪ ಅಚಲವಾಗಿರಬೇಕು. ಹಾವೇರಿ ಜಿಲ್ಲೆಯ ಜನರ ಒಗ್ಗಟ್ಟು ಮತ್ತು ಶಕ್ತಿ ಇಡೀ ದೇಶಕ್ಕೆ ಗೊತ್ತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

‘ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ಮುಂದುವರಿಸಬೇಕು’

ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಬೇಡ್ತಿ-ವರದಾ ನದಿ ಜೋಡಣೆ ನೀರಾವರಿ ಯೋಜನೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಬೃಹತ್ ಯೋಜನೆ ಅನುಷ್ಠಾನಕ್ಕೆ ಹಲವು ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ತುಂಗಭದ್ರಾ ಯೋಜನೆ ಜಾರಿಯಾಗಲು ದಶಕಗಳ ಹೋರಾಟ ನಡೆದಿತ್ತು. ಪ್ರಾಮಾಣಿಕ ಪ್ರಯತ್ನ ಮತ್ತು ನಿರಂತರ ಹೋರಾಟದಿಂದ ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು. ಈ ಯೋಜನೆಯೂ ದೀರ್ಘ ಹೋರಾಟವನ್ನು ಬಯಸುತ್ತದೆ. ಹೀಗಾಗಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ಮುಂದುವರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ನದಿಗಳ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ

‘ಡಿಪಿಆರ್ ಪೂರ್ಣಗೊಂಡ ಬಳಿಕವಷ್ಟೇ ಯೋಜನೆಯ ಸ್ಪಷ್ಟ ಚಿತ್ರಣ’

ಹಿಂದಿನ ಯೋಜನೆಯ ರೂಪರೇಷೆಗೂ ಈಗಿನ ಪ್ರಸ್ತಾವನೆಗೂ ವ್ಯತ್ಯಾಸವಿದೆ. ಪ್ರಸ್ತುತ ಯೋಜನೆಯಿಂದ ಯಾವುದೇ ದೊಡ್ಡ ಪ್ರಮಾಣದ ಹಿನ್ನೀರು ಮುಳುಗಡೆ ಉಂಟಾಗುವುದಿಲ್ಲ. ಸುಮಾರು 700 ಹೆಕ್ಟೇರ್ ನದಿ ಪಾತ್ರದ ಪ್ರದೇಶ ಮಾತ್ರ ಯೋಜನೆಗೆ ಒಳಪಡಲಿದೆ. ಡಿಪಿಆರ್ ಪೂರ್ಣಗೊಂಡ ಬಳಿಕವಷ್ಟೇ ಯೋಜನೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಇಡೀ ನದಿಯನ್ನೇ ತಿರುಗಿಸಲಾಗುತ್ತದೆ ಎಂಬ ಆತಂಕಕ್ಕೆ ವೈಜ್ಞಾನಿಕ ಆಧಾರವಿಲ್ಲ. ಡಿಪಿಆರ್ ನಮ್ಮ ಹೋರಾಟಕ್ಕೆ ಭದ್ರ ಬುನಾದಿಯಾಗಲಿದೆ. ಸರ್ವೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಅಧಿಕಾರಿಗಳ ವಾದವಾಗಿದ್ದು, ಡ್ರೋನ್ ಮೂಲಕ ಸರ್ವೆ ನಡೆಸಲು ಸೂಚಿಸಲಾಗಿದೆ. ಯೋಜನೆಗೆ ಸಂಬಂಧಿಸಿದ ಎಂಒಯುಗೆ ಸಹಿ ಮಾಡಿದ್ದು, ಅದಕ್ಕೆ ಬದ್ಧವಾಗಿರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕವಾಗಿ ನೀರಿನ ಪಾಲು ದೊರೆಯಬೇಕು ಎಂಬ ನಿಟ್ಟಿನಲ್ಲೂ ಪ್ರಯತ್ನ ಮುಂದುವರಿದಿದೆ ಎಂದವರು ತಿಳಿಸಿದ್ದಾರೆ.

‘ನೀರು ಯಾರೊಬ್ಬರ ಸ್ವತ್ತಲ್ಲ’

ಹಿರೇವಡ್ಡಟ್ಟಿ ಡ್ಯಾಂನಿಂದ ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ನೀರು ಯಾರೊಬ್ಬರ ಸ್ವತ್ತಲ್ಲ. ಅದು ವ್ಯಕ್ತಿ ಅಥವಾ ಸಂಸ್ಥೆಗೆ ಸೀಮಿತವಾಗದೆ ನಾಡು ಮತ್ತು ದೇಶದ ಸಂಪತ್ತು. ಮಳೆಗಾಲದಲ್ಲಿ ಶೇ.10ರಷ್ಟು ನೀರು ನೀಡಿದರೂ ಯಾರಿಗೂ ತೊಂದರೆಯಾಗುವುದಿಲ್ಲ. ಯೋಜನೆ ಸಾಧ್ಯವಿಲ್ಲ ಎಂಬ ಮನೋಭಾವ ಬಿಟ್ಟು ಅದನ್ನು ಸಾಕಾರಗೊಳಿಸುವತ್ತ ಗಮನಹರಿಸಬೇಕು. 14 ನಿರ್ದೇಶನಾಲಯಗಳ ಅನುಮತಿ ದೊರೆತು, ಬಳಿಕ ಕೇಂದ್ರ ಜಲ ಆಯೋಗದ ಅನುಮೋದನೆ ಸಿಕ್ಕರೆ ಯೋಜನೆ ಅಂತಿಮ ಹಂತ ತಲುಪಲಿದೆ ಎಂದು ಬೊಮ್ಮಾಯಿ ವಿವರಿಸಿದ್ದಾರೆ.

ಗದಗ ಮತ್ತು ಹಾವೇರಿ ಜಿಲ್ಲೆಯ ರೈತರ ಬೃಹತ್ ಸಭೆ ಆಯೋಜಿಸಬೇಕು. ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಮಠಾಧೀಶರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯೋಜನೆಯ ಅಗತ್ಯ ಮನವರಿಕೆ ಮಾಡಬೇಕು. ನಂತರ ಕೇಂದ್ರ ಸಚಿವರನ್ನೂ ಭೇಟಿಯಾಗಬೇಕು. ಉತ್ತರ ಕನ್ನಡ ಭಾಗದಲ್ಲಿ ಯೋಜನೆ ವಿರೋಧಿಸಿ ತೀವ್ರ ಹೋರಾಟ ನಡೆಯುತ್ತಿರುವಾಗ, ನೀರಿನ ಅಗತ್ಯವಿರುವ ನಮ್ಮ ಭಾಗದ ಜನರೂ ಸಂಘಟಿತ ಶಕ್ತಿ ಪ್ರದರ್ಶಿಸಬೇಕು ಎಂದವರು ಕರೆ ನೀಡಿದ್ದಾರೆ.

‘ಅರಣ್ಯ ಪ್ರದೇಶ ಮುಳುಗಡೆ ಎಂಬುದು ಶುದ್ಧ ಸುಳ್ಳು’

ಯೋಜನೆಯಿಂದ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎಂಬುದು ಶುದ್ಧ ಸುಳ್ಳು. ಯೋಜನೆಯನ್ನು ವಿರೋಧಿಸುವವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಬೇಡ್ತಿ-ವರದಾ ಯೋಜನೆಗೆ ಸಂಬಂಧಿಸಿದಂತೆ 128 ಹಳ್ಳಿಗಳು ಪ್ರಸ್ತಾಪದಲ್ಲಿವೆ. ಪಟ್ಟದ ನಾಲಾ, ಶಾಲ್ಮಲಾ ಹಾಗೂ ಸುರೆಮನಿ ಜಂಕ್ಷನ್ ಪಾಯಿಂಟ್‌ಗಳಿಂದ ಹಿರೇವಡ್ಡಟ್ಟಿ ಬ್ಯಾರೇಜ್ ನಿರ್ಮಿಸುವ ಸಾಧ್ಯತೆಯಿದೆ. 28 ಟಿಎಂಸಿ ನೀರು ದೊರೆಯುವ ಅವಕಾಶವಿರುವಾಗ ಯೋಜನೆಗಾಗಿ ಹೋರಾಟ ಮಾಡಬಾರದೇ? ನೀರು ಬೇಕೆನ್ನುವ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಬೇಕು. ಯೋಜನೆಯಿಂದ ರೈತರಿಗೆ ಮಂಡ್ಯ ಮಾದರಿಯಲ್ಲಿ ಅನುಕೂಲವಾಗಲಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಅಭಿಪ್ರಾಯಪಟ್ಟಿದ್ದಾರೆ.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಆಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ವಕೀಲ ಸಂದೀಪ ಪಾಟೀಲ, ರವಿಕಾಂತ ಅಗಡಿ, ಭುವನೇಶ್ವರ ಶಿಡ್ಲಾಪುರ ಈ ವೇಳೆ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More