AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಡಿಕೆ-ಅಮಿತ್ ಶಾ ತಡರಾತ್ರಿ ಸಭೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಲುಗಾಟದ ಮಧ್ಯೆ ಮಹತ್ವ ಪಡೆದ ಭೇಟಿ

HD Kumarswamy and Amit Shah meeting: ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಉಳಿಯುತ್ತಾ ಎನ್ನುವ ಅನುಮಾನಗಳ ಹೊತ್ತಲ್ಲೇ ಕುಮಾರಸ್ವಾಮಿ ಮತ್ತು ಅಮಿತ್ ಶಾ ಮೇ 4, ತಡರಾತ್ರಿಯಂದು ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೈತ್ರಿ ಮುಂದುವರಿಸುವ ಅಭಯವನ್ನು ಎರಡೂ ನಾಯಕರು ನೀಡಿರುವುದು ಗೊತ್ತಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಈ ಇಳಿ ವಯಸ್ಸಿನಲ್ಲಿ ಇಂತಹ ವೇದನೆ ಬರಬಾರದಿತ್ತು ಎಂದು ಈ ವೇಳೆ ಅಮಿತ್ ಶಾ ಅನುಕಂಪ ತೋರಿದರೆನ್ನಲಾಗಿದೆ.

ಎಚ್​ಡಿಕೆ-ಅಮಿತ್ ಶಾ ತಡರಾತ್ರಿ ಸಭೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಲುಗಾಟದ ಮಧ್ಯೆ ಮಹತ್ವ ಪಡೆದ ಭೇಟಿ
ಎಚ್ ಡಿ ಕುಮಾರಸ್ವಾಮಿ, ಅಮಿತ್ ಶಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2024 | 2:51 PM

Share

ಬೆಂಗಳೂರು, ಮೇ 5: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ (BJP-JDS alliance) ಧಕ್ಕೆ ತರಬಹುದು ಎಂಬ ಅನುಮಾನಗಳ ಮಧ್ಯೆ ಎಚ್.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ ನಡುವೆ ಮಹತ್ವದ ಮಾತುಕತೆ ನಡೆದಿದೆ. ನಿನ್ನೆ ಶನಿವಾರ ತಡರಾತ್ರಿ ನಡೆದ ಈ ಸಭೆಯಲ್ಲಿ ಪ್ರಜ್ವಲ್ ರೇವಣ್ಣ (Prajwal Revanna sex scandal) ಪ್ರಕರಣ ಮತ್ತು ಮೈತ್ರಿ ಬಗ್ಗೆ ಚರ್ಚೆಗಳಾಗಿವೆ. ಈ ವೇಳೆ ಜೆಡಿಎಸ್​ನ ಮಿತ್ರ ಪಕ್ಷವಾಗಿ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದರೆನ್ನಲಾಗಿದೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಏನಾಗುತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಈಗ ತನಗೆ ಮೈತ್ರಿ ಮುಖ್ಯ ಅಲ್ಲ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಎಚ್​ಡಿಕೆ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಈ ನೆಲದ ಕಾನೂನು ಏನಿದೆ ಅದರ ಪ್ರಕಾರವೇ ಹೋಗಲಿ ಎಂದು ಹೇಳಿರುವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅವರ ಇಳಿ ವಯಸ್ಸಿಲ್ಲಿ ಇಂತಹ ನೋಟು ಉಂಟಾಗಬಾರದಾಗಿತ್ತು ಎಂದು ವಿಷಾದಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ರೇವಣ್ಣ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿ, ಪ್ರಜ್ವಲ್​ ಗೆದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ: ಅಶೋಕ್

ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಜೆಡಿಎಸ್​ನ ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಾಗಿ ಬಂದಿದೆ. ಪಕ್ಷದ ಸರ್ವೆ ವರದಿಗಳಲ್ಲೂ ಈ ಅಂಶ ದಾಖಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಯುವ ಬಗ್ಗೆ ಯಾವ ಅನುಮಾನವೂ ಬೇಡ. ಬಿಜೆಪಿ ಪಕ್ಷ ಮೈತ್ರಿಗೆ ಬದ್ಧವಾಗಿದೆ ಎಂದೂ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಕುಮಾರಸ್ವಾಮಿಗೆ ಅಭಯ ನೀಡಿರುವುದು ತಿಳಿದುಬಂದಿದೆ.

ರಾಜಕೀಯ ಷಡ್ಯಂತ್ರಗಳಿಗೆ ಎದೆಗೊಟ್ಟು ಹೋರಾಡುವುದಾಗಿ ಹೇಳಿದ ಕುಮಾರಸ್ವಾಮಿ

ತಮ್ಮ ಕುಟುಂಬದವರ ಮೇಲೆ ಎದ್ದಿರುವ ಲೈಂಗಿಕ ಹಗರಣವೆಂಬ ಬಿರುಗಾಳಿಯನ್ನು ಎದುರಿಸಲು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹರಸಾಹಸ ಮಾಡುತ್ತಿದ್ದಾರೆ. ರೇವಣ್ಣ ಕುಟುಂಬವೇ ಬೇರೆ ತಮ್ಮ ಕುಟುಂಬವೇ ಬೇರೆ. ಆ ಪ್ರಕರಣಗಳಿಗೂ ತಮಗೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರೂ ಕೌಟುಂಬಿಕವಾಗಿ ಮತ್ತು ರಾಜಕೀಯವಾಗಿ ಕನೆಕ್ಷನ್ ಇದ್ದೇ ಇದೆ. ಅಮಿತ್ ಶಾ ಜೊತೆಗಿನ ನಿನ್ನೆಯ ಭೇಟಿಯಲ್ಲಿ ಕುಮಾರಸ್ವಾಮಿ ಅವರು ಪ್ರಜ್ವಲ್ ಪ್ರಕರಣವನ್ನು ಎದುರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್​ಗೆ ಬಿಗ್ ಟ್ವಿಸ್ಟ್: ಗೊಂದಲದ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ

ಸಂಪೂರ್ಣ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಎಲ್ಲಾ ರಾಜಕೀಯ ಷಡ್ಯಂತ್ರಗಳಿಗೆ ಎದೆಗೊಟ್ಟು ಹೋರಾಡುತ್ತೇನೆ ಎಂದು ಕುಮಾರಸ್ವಾಮಿಯೂ ಭರವಸೆ ಕೊಟ್ಟಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ