ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ಸೇರಿಸುವ ಹುನ್ನಾರ ನಡೆದಿದೆ: ಕೇಂದ್ರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರ ಸರ್ಕಾರಕ್ಕೆ ಇದ್ದರೆ ವಿಧಿಸುತ್ತಿರುವ ತೆರಿಗೆ ಕೂಡಲೇ ತಗ್ಗಿಸಲಿ. ಆ ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸುವಂತೆ ಹೇಳಲಿ. ಅದನ್ನು ಬಿಟ್ಟು ರಾಜ್ಯದ ಪಾಲಿನ ಹಣಕ್ಕೆ ಕೈ ಹಾಕಬಾರದು. ರಾಜ್ಯಗಳು ಚೆನ್ನಾಗಿದ್ದರೆ ದೇಶವೂ ಚೆನ್ನಾಗಿರುತ್ತದೆ ಎಂದು ಟ್ವೀಟ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಸೇರಿಸುವ ಹುನ್ನಾರ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವಿಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿಎಸ್ಟಿಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಟ್ವೀಟ್ನಲ್ಲಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರ ಸರ್ಕಾರಕ್ಕೆ ಇದ್ದರೆ ವಿಧಿಸುತ್ತಿರುವ ತೆರಿಗೆ ಕೂಡಲೆ ತಗ್ಗಿಸಲಿ. ಆ ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸುವಂತೆ ಹೇಳಲಿ. ಅದನ್ನು ಬಿಟ್ಟು ರಾಜ್ಯದ ಪಾಲಿನ ಹಣಕ್ಕೆ ಕೈ ಹಾಕಬಾರದು. ರಾಜ್ಯಗಳು ಚೆನ್ನಾಗಿದ್ದರೆ ದೇಶವೂ ಚೆನ್ನಾಗಿರುತ್ತದೆ ಎಂದು ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ? ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ರಾಜ್ಯಗಳ ಆದಾಯ ಲಪಟಾಯಿಸುವ ತಂತ್ರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ ಕುಮಾರಸ್ವಾಮಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು ಜಿಎಸ್ಟಿಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಗಳು ಜಿಎಸ್ಟಿ ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಸರ್ಕಾರ ಈವರೆಗೆ ಸರಿಯಾಗಿ ಕೊಟ್ಟಿಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ. ಅಥವಾ ಬಜೆಟ್ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ ಜಿಎಸ್ಟಿ ಕುಣಿಕೆ ನಮ್ಮನ್ನು ಕಾಡಲಿದೆ.
ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ GSTಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ. 1/6
— H D Kumaraswamy (@hd_kumaraswamy) March 7, 2021
ಇದನ್ನೂ ಓದಿ
ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತದ ವಿಚಾರದಲ್ಲಿ ಧರ್ಮಸಂಕಟದ ಸ್ಥಿತಿ: ನಿರ್ಮಲಾ ಸೀತಾರಾಮನ್
Published On - 12:10 pm, Sun, 7 March 21