ಬೆಂಗಳೂರಿನಲ್ಲಿ ಮತ್ತೆ ಮಳೆ ಅಬ್ಬರ: ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆ
ಬೆಂಗಳೂರಿನಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಸುರಿದಿದೆ. ನಗರದ ಹಲವೆಡೆ ವರುಣ ಆರ್ಭಟಿಸಿದ್ದಾನೆ. ದಿಢೀರ್ ಮಳೆಯಿಂದ ಜನರು ಪರದಾಡಿದರು. ಇತ್ತ ರಾಮನಗರದಲ್ಲೂ ಮಳೆ ಅಬ್ಬರಿಸಿದ್ದು, ರಾಗಿ ಬೆಳೆಗಾರರು ಸಂತಸಗೊಂಡಿದ್ದಾರೆ. ಹವಾಮಾನ ಇಲಾಖೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು
- ಬೆಂಗಳೂರಿನ ಹಲವಡೆ ಮಳೆ
- ಮಳೆಯಿಂದಾಗಿ ವಾಹನ ಸವಾರರ ಪರದಾಟ
- ಇಂದು ಸಂಜೆ ಜೋರು ಮಳೆ ಬರುವ ಸಾಧ್ಯತೆ
ಬೆಂಗಳೂರು, ನವೆಂಬರ್ 04: ನಗರದಲ್ಲಿ ಸ್ವಲ್ಪ ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೆ ಎಂಟ್ರಿ ಕೊಟ್ಟಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದ್ದು, ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹಲವೆಡೆ ವರುಣನ ಆರ್ಭಟ ಜೋರಾಗಿದೆ. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಕಾರ್ಪೊರೇಷನ್, ವಿಧಾನಸೌಧ ಹಾಗೂ ಕೆ.ಆರ್. ಸರ್ಕಲ್ ಸುತ್ತಮುತ್ತ ಮಳೆಯಾಗಿದೆ. ದಿಢೀರ್ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಏಲ್ಲೆಲ್ಲಿ ಮಳೆ?
ಮೆಜೆಸ್ಟಿಕ್, ಮೈಸೂರ ಬ್ಯಾಂಕ್ ಸರ್ಕಲ್, ವಿಧಾನಸೌಧ, ಕೆಆರ್ ಸರ್ಕಲ್, ಕಾರ್ಪೊರೇಷನ್ ಸುತ್ತಮುತ್ತ ಸೇರಿದಂತೆ ಹಲವೆಡೆ ವರುಣನ ಸಿಂಚನವಾಗಿದೆ. ದಿಢೀರ್ ಮಳೆ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಬಸ್ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡಿದ್ದಾರೆ. ಕೆಲವರು ಛತ್ರಿ ಹಿಡಿದು ಬಸ್ಗಳತ್ತ ತೆರಳಿದರೆ, ಇನ್ನು ಕೆಲವರು ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲೇ ಆಶ್ರಯ ಪಡೆದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ: 4 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಅಲರ್ಟ್
ಇನ್ನು ಕೆಲಸ ಮುಗಿಸಿ ಮನೆಗೆ ತೆರಳುವವರು ಹಾಗೂ ಊರುಗಳಿಗೆ ಪ್ರಯಾಣಿಸುವವರು ಕೂಡ ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಂದು ಸಂಜೆ ನಗರದ ಹಲವೆಡೆ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಸ್ಸೂಚನೆ ನೀಡಿದೆ.
ರಾಮನಗರ ಜಿಲ್ಲೆಯಲ್ಲೂ ಮಳೆ ಅಬ್ಬರ
ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲೂ ಇಂದು ಬೆಳಗ್ಗೆಯೇ ಮಳೆ ಸುರಿದಿದೆ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಬೆಳ್ಳಂಬೆಳಗ್ಗೆ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಅಡ್ಡಿಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಮಳೆ ಸುರಿದಿದ್ದರಿಂದ ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಬೆಳೆಗಳಿಗೆ ಮಳೆ ಅನುಕೂಲವಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




