ಜಿಮ್ಸ್ ಆಸ್ಪತ್ರೆ ಆಕ್ಸಿಜನ್ ಸಮಸ್ಯೆ ಪ್ರಕರಣಕ್ಕೆ ಟ್ವಿಸ್ಟ್: ವಿಡಿಯೋ ವೈರಲ್ ಹಿಂದೆ ಖಾಸಗಿ ಆಸ್ಪತ್ರೆ ಕೈವಾಡ; ಸಚಿವ ಪಾಟೀಲ್
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ನೀಡುವಲ್ಲಿ ಆದ ಸಮಸ್ಯೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ವಿದ್ಯುತ್ ಸಮಸ್ಯೆ ಬಗ್ಗೆ ಒಪ್ಪಿಕೊಂಡಿರುವ ಅವರು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ವಿಡಿಯೋ ವೈರಲ್ ವಿಚಾರವಾಗಿ ಖಾಸಗಿ ಆಸ್ಪತ್ರೆಗಳ ಮೇಲೆ ಆರೋಪ ಮಾಡಿದ್ದಾರೆ.

ಕಲಬುರಗಿ, ಮಾರ್ಚ್ 24: ವಿದ್ಯುತ್ ಸಮಸ್ಯೆಯಿಂದ ಆಕ್ಸಿಜನ್ (Oxygen) ಸಿಗದೇ ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ರೋಗಿಗಳು ಪರದಾಡುವಂತಾದ ಘಟನೆ ಬಗ್ಗೆ ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakash Patil) ಪ್ರತಿಕ್ರಿಯಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರೆಗಳ ಕೈವಾಡ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯ ದಕ್ಷತೆಯನ್ನು ಅವರಿಗೆ (ಖಾಸಗಿ ಆಸ್ಪತ್ರೆಗಳು) ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿಡಿಯೋ ವೈರಲ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ಖಾಸಗಿ ಆಸ್ಪತ್ರೆ ಲೋಗೊ ಇದೆ ಎಂದು ಅವರು ದೂರಿದ್ದಾರೆ.
ಆಕ್ಸಿಜನ್ ಕೊರತೆ ಇಲ್ಲ: ಸಚಿವ ಪಾಟೀಲ್ ಸ್ಪಷ್ಟನೆ
ಮೊನ್ನೆ ಐಸಿಯೂ ವಾರ್ಡ್ನಲ್ಲಿ ವಿದ್ಯುತ್ ಸಮಸ್ಯೆ ಆಗಿತ್ತು. ತಕ್ಷಣವೇ ವಿದ್ಯುತ್ ಬಂದಿದೆ. ಹೀಗಾಗಿ ಯಾವುದೇ ತೊಂದರೆಯಾಗಿಲ್ಲ. ತಾಂತ್ರಿಕ ದೋಷದಿಂದ ವಿದ್ಯುತ್ ಟ್ರಿಪ್ ಆಗಿತ್ತು. ಆದರೆ ಅಕ್ಸಿಜನ್ ಕೊರತೆಯಿರಲಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಜೆಸ್ಕಾಂ ಎಂಡಿ ಜೊತೆ ಮಾತನಾಡಿದ್ದೇನೆ. ಜಿಮ್ಸ್ಗೆ ಪ್ರತ್ಯೆಕ ಎಇಇ ನೇಮಕ ಮಾಡುವಂತೆ ಸೂಚನೆ ನೀಡಿದ್ದೇನೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ನಮಗೆ ಖಾಯಂ ಎಇಇ ಅವಶ್ಯಕತೆಯಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿ ಏನಾಗಿತ್ತು?
ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲುಕಿನ ರೇವಣಸಿದ್ದಪ್ಪ, ದೇವೆಂದ್ರಪ್ಪ, ಯಾದಗೀರಿ ಜಿಲ್ಲೆಯ ಶಹಾಪುರದ ಒಂದು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಕೈಕೊಟ್ಟಿತ್ತು. ಎಲ್ಲಾ ರೋಗಿಗಳ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ವಿದ್ಯುತ್ ಇಲ್ಲದಾಗ ರೋಗಿಗಳಿಗೆ ಆಕ್ಸಿಜನ್ ನೀಡಲು ಪರ್ಯಾಯ ವ್ಯವಸ್ಥೆ ಜಿಮ್ಸ್ ಆಸ್ಪತ್ರೆಯಲ್ಲಿ ಇರಲಿಲ್ಲ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಕಾರಣ ಹ್ಯಾಂಡ್ ಪಂಪ್ನಿಂದ ಆಕ್ಸಿಜನ್ ಪೂರೈಕೆ ಮಾಡಿದ್ದರು. ಹತ್ತರಿಂದ ಹದಿನದು ನಿಮಿಷದಲ್ಲಿ ವಿದ್ಯುತ್ ಬಂದಿದ್ದರಿಂದ ಭಾರಿ ದುರಂತ ತಪ್ಪಿತ್ತು.
ಇದನ್ನೂ ಓದಿ: ಕಲಬುರಗಿ: ಜಿಮ್ಸ್ನಲ್ಲಿ ಆಕ್ಸಿಜನ್ಗಾಗಿ ರೋಗಿಗಳ ನರಳಾಟ, ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೇ ಅಧ್ವಾನ
ಒಂದು ವೇಳೆ ಗಂಟೆಗಟ್ಟಲೆ ವಿದ್ಯತ್ ಇಲ್ಲವಾಗಿದ್ದರೆ ಆಗ ರೋಗಿಗಳು ಏನು ಮಾಡಬೇಕಿತ್ತು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಇದೇ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಒಂದೇ ಒಂದು ಗಂಟೆಯ ಅವಧಿಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 24 March 25