ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ‘ಕನ್ನಡತಿ’, ಇಲ್ಲಿದೆ ರಂಜನಿ ರಾಘವನ್ ಅವರ ಮನದಾಳದ ಮಾತು
ನಮ್ಮ ಕನ್ನಡ ಭಾಷೆ ಬಗ್ಗೆ ಸ್ವಲ್ಪವೂ ಕೀಳರಿಮೆ ಇಟ್ಟುಕೊಳ್ಳದೆ ಹೆಮ್ಮೆಯಿಂದ ಉಳಿಸಿಕೊಂಡು ಹೋಗುವವನೆ ನಿಜವಾದ ಕನ್ನಡಿಗ -ರಂಜನಿ ರಾಘವನ್
ನವೆಂಬರ್ ಬಂತೆಂದರೆ ಸಾಕು ಇಡೀ ಕರ್ನಾಟಕ ಕನ್ನಡ ಮಯವಾಗುತ್ತೆ. ಎಲ್ಲೆಲ್ಲೂ ಕನ್ನಡ ಡಿಂಡಿಮ ಕೇಳಿಸುತ್ತದೆ. ನವೆಂಬರ್ನಲ್ಲಿ ಬಹುತೇಕ ಕನ್ನಡಿಗರ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಗೆಗಿನ ಗೌರವ ಹೆಚ್ಚಾಗಿ ಕನ್ನಡಾಂಬೆಯ ಆರಾಧನೆ ನಡೆಯುತ್ತಿರುತ್ತದೆ. ಎಲ್ಲಾದರಿರು ಎಂತಾದರಿರು, ಎಂದೆಂದಿಗೂ ನೀ ಕನ್ನಡವಾಗಿರು.. ಬಾರಿಸು ಕನ್ನಡ ಡಿಂಡಿಮವಾ.. ಹೀಗೆ ಅನೇಕ ಘೋಷಣೆಗಳ ಮೂಲಕ ತಮ್ಮ ಪೌರುಷ ಪ್ರದರ್ಶನವಾಗುತ್ತಿರುತ್ತದೆ. ಆದ್ರೆ ನವೆಂಬರ್ ಕಳೆದು ಡಿಸೆಂಬರ್ ಬಂತೆಂದರೆ ಸಾಕು ಕ್ರಿಸ್ಮಸ್, ನ್ಯೂ ಇಯರ್ ಕನ್ನಡವನ್ನು ಮಾಯ ಮಾಡಿಬಿಡುತ್ತವೆ. ಹಾಗಾದ್ರೆ ನಮ್ಮಲ್ಲಿ ಭಾಷಾಭಿಮಾನವಿಲ್ಲವೇ? ಈ ರೀತಿ ಆಗುವುದು ಎಷ್ಟು ಸರಿ? ಇದರ ಅಂತಿಮ ಯಾವಾಗ? ಇಂಗ್ಲಿಷ್, ಹಿಂದಿಯಂತೆ ನಮ್ಮ ಭಾಷೆಗೆ ಪ್ರಮುಖ್ಯತೆ ಸಿಗುವುದು ಯಾವಾಗ? ಈ ರೀತಿಯ ಅನೇಕ ಪ್ರಶ್ನೆಗಳಿಗೆ ‘ಕನ್ನಡತಿ’ ಧಾರವಾಹಿ ಖ್ಯಾತಿಯ ಕರ್ನಾಟಕದ ಮನ ಮೆಚ್ಚಿದ ನಟಿ ರಂಜನಿ ರಾಘವಾನ್ ತಮ್ಮ ಮನದ ಮಾತನ್ನು ಟಿವಿ9 ಕನ್ನಡ ಡಿಜಿಟಲ್ ಮೀಡಿಯಾ ಜೊತೆ ಹಂಚಿಕೊಂಡಿದ್ದಾರೆ.
1. ನಿಮ್ಮ ಪ್ರಕಾರ ಅಪ್ಪಟ ಕನ್ನಡತಿ/ ಕನ್ನಡಿಗ ಅಂದ್ರೆ ಯಾರು? ನಮ್ಮ ಕನ್ನಡ ಭಾಷೆ ಬಗ್ಗೆ ಸ್ವಲ್ಪವೂ ಕೀಳರಿಮೆ ಇಟ್ಟುಕೊಳ್ಳದೆ ಹೆಮ್ಮೆಯಿಂದ ಉಳಿಸಿಕೊಂಡು ಹೋಗುವವನೆ ನಿಜವಾದ ಕನ್ನಡಿಗ..ಕನ್ನಡವನ್ನು ಎತ್ತಿಹಿಡಿಯಲು ಎಷ್ಟು ಸಾಧ್ಯವಾಗುತ್ತೋ ಅಷ್ಟು ಬಳಸಿ ಬೇರೆಯವರಿಗೂ ನಮ್ಮ ಭಾಷೆಯ ಮೇಲೆ ಗೌರವ ಬರುವಂತಾಗಬೇಕು. ಕನ್ನಡ ಮಾತಾಡಿದ್ರೆ ಎನೋ ತಪ್ಪು ಮಾಡಿದ್ವಿ ಎನ್ನುವ ಭಾವನೆ ಇರುತ್ತೆ. ಆದ್ರೆ ವಿದೇಶಗಳಲ್ಲಿ ಕನ್ನಡ ಸಂಘಟನೆಗಳು ನಮ್ಮ ಭಾಷೆಗೆ ತುಂಬಾ ಗೌರವ ಕೊಡ್ತಾರೆ.
2. ಐಟಿ-ಬಿಟಿ ಮಂದಿ ಕನ್ನಡ ಬಳಸೋಕೆ ತುಂಬಾ ಹಿಂಜರಿತಾರೆ.. ಇದಕ್ಕೇ ನೀವ್ ಏನಂತೀರಿ? ಎಂಎನ್ ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇಂಗ್ಲೀಷ್ ಬಳಸೋದು ಅಭ್ಯಾಸವಾಗಿದೆ. ಇದು ವಿಪರ್ಯಾಸ. ಕನ್ನಡ ಮಾತನಾಡುವುದು ಶುರುವಾಗಬೇಕಿರುವುದು ಮೊದಲು ಮನೆಗಳಲ್ಲಿ, ಶಾಲೆಗಳಲ್ಲಿ. ಶಾಲೆಗಳಲ್ಲಿ ಕನ್ನಡ ಮಾತಾಡುದ್ರೆ ಫೈನ್ ಕಟ್ಟಬೇಕಾದ ಸ್ಥಿತಿ ಇದೆ. ಮಕ್ಕಳನ್ನ ಇಂಗ್ಲೀಷ್ನಲ್ಲಿ ಮಾತಾಡಿಸುವ ಬದಲು ಕನ್ನಡದಲ್ಲಿ ಮಾತಾಡಿಸಿ. ಅವರೂ ಸಹ ಕನ್ನಡವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಾರೆ.
3. ವಿವಿಧ ಭಾಗದ ಕನ್ನಡ ಭಾಷೆಯಿಂದ ಶುದ್ಧ ಕನ್ನಡ ಮರೆಯಾಗುತ್ತಿದೆ. ಭಾಷೆ ಅಪಬ್ರಂಶಕ್ಕೆ ಇಳಿಯುತ್ತಿದೆ. ಇದನ್ನು ಸರಿ ಮಾಡುವುದು ಹೇಗೆ? ಜನ ಮಾತಾಡುವಾಗ ಯಾವುದಕ್ಕೋ ಯಾವುದೋ ಪದ ಬಳಸ್ತಾರೆ. ಆ ಪದದ ಮೀನಿಗ್ಗ್ಯೇ ಕಳ್ಕೊಂಡ್ಬಿಟ್ಟಿರುತ್ತೆ. ಮೊದಲು ಆಡು ಭಾಷೆ ಹೆಚ್ಚಾಗಬೇಕು. ಸಂಸ್ಕೃತ ಕಡಿಮೆ ಆಗುವುದಕ್ಕೂ ಇದೇ ಕಾರಣ. ಸಂಸ್ಕೃತಕ್ಕೆ ಶುದ್ಧ ರೂಪ ಬಂದೇ ಇರೋದು. ಅದಕ್ಕೆ ಆಡು ಭಾಷೆ ಇಲ್ಲ. ಆಡು ಭಾಷೆ ಇದಿದ್ರೆ ಜನ ಜಾಸ್ತಿ ಮಾತಾಡ್ತಿದ್ರೋ ಏನೋ.. ಭಾಷೆಯಲ್ಲಿ ಬೈಗುಳ ಇರ್ಬೇಕು. ಹಾಸ್ಯ ಇರ್ಬೇಕು. ಪ್ರತಿಯೊಂದು ಇದ್ದಾಗ ಅದು ಆಡು ಭಾಷೆಯಾಗುತ್ತೆ.
4. ಸಿನಿಮಾ ಅಥವಾ ಧಾರವಾಹಿಗೆ ಬರ್ಬೇಕು ಅಂದ್ರೆ ತುಂಬಾ ಫ್ಯಾಷನೆಬಲ್ ಆಗಿ ಇರ್ಬೇಕು ಅಂತಾರೆ. ಆದ್ರೆ ನೀವು ಬೆಂಗಳೂರಿನವರಾಗಿದ್ರೂ ತುಂಬಾ ಕ್ಲಾಸಿಕ್ ಹೇಗೆ? ತುಂಬಾ ಜನ ಕೇಳ್ತಿರ್ತಾರೆ ನೀವು ನಿಜವಾಗಲೂ ಬೆಂಗಳೂರಿನವರಾ ಅಂತ. ಅದು ನನ್ನ ಭಾಷೆ ಮತ್ತು ನನ್ನ ಔಟ್ ಲುಕ್ ಕಾರಣ ಇರಬಹುದು ಅನ್ಸುತ್ತೆ. ನನ್ನ ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಬಂದಿರುವ ಸ್ಟೇಜ್ ಇದು. ಲಂಗ-ದಾವಣಿ ಹಾಕಿರುವ ಹುಡುಗೀರು ಇಷ್ಟ ಆಗ್ತಾರೆ. . ಫ್ಯಾಷನೆಬಲ್ ಇರೋರು ಔಟ್ ಡೇಟ್ ಆಗ್ತಾರೆ. ಆದ್ರೆ, ಕೊನೆಗೆ ಉಳಿಯುವುದು ನಮ್ಮ ಒರಿಜಿನಾಲಿಟಿ ಅಷ್ಟೆ.
5. ಕ್ಲಾಸಿಕ್ ಧಾರವಾಹಿ, ಸಿನಿಮಾಗಳಲ್ಲಿ ನಟಿಸಿದ ನಿಮಗೆ ಮಾಸ್ ಅಥವಾ ಫ್ಯಾಷನೆಬಲ್ ಪಾತ್ರ ಸಿಕ್ಕರೆ ಮಾಡ್ತೀರಾ? ಐಟಿ ಕಂಪನಿಗಳಿಗೆ ಸೀರೆ ಹಾಕಿಕೊಂಡು ಹೋಗಕ್ಕೆ ಆಗಲ್ಲ ಹಾಗೇ ಟೀಚರ್ ಆದವರು ಮಾರ್ಡನ್ ಡ್ರೆಸ್ ಹಾಕಿಕೊಂಡು ಶಾಲೆಗೆ ಹೋಗೋಕೆ ಆಗಲ್ಲ. ಅದೇ ರೀತಿ ಪಾತ್ರಗಳಿಗೆ ತಕ್ಕ ಹಾಗೆ ಬೇಕಾದ ಬಟ್ಟೆಗಳನ್ನೇ ಹಾಕಬೇಕು. ಗೌರವ ಕಡಿಮೆ ಆಗುವ ತರ ಇದ್ರೆ ಅದನ್ನ ನಾನು ಮಾಡಲ್ಲ. ಮಾರ್ಡನ್ ಬಟ್ಟೆ ಹಾಕಿಕೊಳ್ಳುವವರನ್ನೂ ವಿರೋಧಿಸಲ್ಲ. ಏಕೆಂದರೆ ಬಟ್ಟೆಯಿಂದ ಗೌರವ, ದೃಷ್ಟಿಕೋನ ಬದಲಾಗಬಾರದು.
6. ಕನ್ನಡತಿ ಪಾತ್ರ ಒಪ್ಪಿಕೊಳ್ಳೋಕೆ ಎಷ್ಟು ಚಾಲೆಂಜಿಂಗ್ ಆಗಿತ್ತು. ಕನ್ನಡತಿ ಪಾತ್ರ ಒಪ್ಪಿಕೊಳ್ಳುವಾಗ ನನಗೆ ಅಷ್ಟೇನು ಭಯ ಇರ್ಲಿಲ್ಲ. ಯಾಕಂದ್ರೆ ಪುಟ್ಟ ಗೌರಿಯಲ್ಲಿ ಮನೆ ಹುಡುಗಿ ಪಾತ್ರನೇ ಮಾಡಿದ್ದೆ. ಹಾಸ್ಯಾಸ್ಪದವಾದಾಗಲೆಲ್ಲಾ ಜನ ಬೈತಿದ್ರು. ಆಗ ತುಂಬಾ ಟ್ರೋಲ್ ಆಗಿದ್ದೆ. ಆದ್ರೆ, ಕನ್ನಡತಿ ಸ್ಟೋರಿ ಕೇಳಿದಾಕ್ಷಣ ಖುಷಿಯಾಯ್ತು. ಕನ್ನಡ ಟೀಚರ್ ಅಂದಾಗ ಒಂದು ಗೌರವ ಇರುತ್ತೆ. ಅದನ್ನು ಕಡಿಮೆ ಮಾಡೋಕೆ ಸಾಧ್ಯವೇ ಇಲ್ಲ. ಹಿಂದಿನ ಇಮೇಜ್ ಬ್ರೇಕ್ ಮಾಡಿ ಹೊಸ ಇಮೇಜ್ನ ಶುರು ಮಾಡೋದು ನನಗೆ ಚಾಲೆಂಜಿಂಗ್ ಅನಿಸಿತ್ತು.
7. ನಿಮ್ಮ ಕತೆ ಡಬ್ಬಿ ರೆಸ್ಪಾನ್ಸ್ ಹೇಗಿದೆ? ನನ್ನ ಕತೆ ಡಬ್ಬಿ ಒಳ್ಳೆ ಸಕ್ಸಸ್ ಕಂಡಿದೆ. ಕೇವಲ 25 ದಿನಗಳ ಅವದಿಯಲ್ಲೇ 2 ಸಾವಿರನ್ನೂ ಹೆಚ್ಚು ಪುಸ್ತಕಗಳು ಸೇಲ್ ಆಗಿದ್ದವು, ಈಗ ಅದು ನಾಲ್ಕನೇ ಮುದ್ರಣದತ್ತ ಸಾಗಿದೆ. ಸಾಹಿತಿಗಳು, ಕವಿಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ.. ಈಗ ನಾನು ಮುಂದಿನ ಕಾದಂಬರಿಯ ತಯಾರಿಯಲ್ಲಿದ್ದೇನೆ. ಕನ್ನಡ ಬೆಳೆಸಲು, ಬಳಸಲು ನನಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಯತ್ನ ಮಾಡ್ತೀನಿ.
8. ಕನ್ನಡಿಗರಿಂದಲೇ ಕನ್ನಡತಿ ಎಂಬ ಬಿರುದು ಪಡೆದಿರುವ ನೀವು ಮುಂದೆ ಏನಾದ್ರು ಕನ್ನಡ ಪರ ಸಂಘಟನೆಗಳಿಂದ ಹೋರಾಟಕ್ಕೆ ಕರೆ ಬಂದ್ರೆ ಹೋಗ್ತೀರಾ? ನನ್ನ ವ್ಯಕ್ತಿತ್ವದಲ್ಲಿ ನನಗೆ ಅಗ್ರೆಸ್ಸಿವ್ ಮೆಂಟಾಲಿಟಿ ಇಲ್ಲ. ಈಗಿನ ಕಾಲದಲ್ಲಿ ನಾವು ಯಾವುದನ್ನು ಮಾತಿನಿಂದ, ಗಲಾಟೆಯಿಂದ ಪಡೆದುಕೊಳ್ಳೋಕೆ ಸಾಧ್ಯವಿಲ್ಲ. ನೂರಾರು ಜನ, ನಾನು ಬರೆದಿರುವ ಪುಸ್ತಕವನ್ನು ಓದೋಕೆ ಕೈಗೆತ್ತಿಕೊಂಡಿದ್ದಾರೆ. ಇದೇ ನನ್ನ ಹೋರಾಟ. ಇದೇ ನನ್ನ ಗೆಲುವು. ಇದೇ ನನ್ನ ಪರೋಕ್ಷವಾದ ಪ್ರಯತ್ನ.
9. ನವೆಂಬರ್ಗೆ ಮಾತ್ರ ಕೆಲವರು ಕನ್ನಡಿಗರಾಗುತ್ತಾರೆ. ಹಾಗೇ ನೀವು ಕನ್ನಡತಿ ಧಾರವಾಹಿ ನಡೆಯುವವರೆಗೆ ಮಾತ್ರ ಕನ್ನಡತಿನಾ? ನಾನು ಕನ್ನಡ ಪುಸ್ತಕಗಳನ್ನು ಬರೆಯುತ್ತಿದ್ದೇನೆ. ಪುಟ್ಟ ಗೌರಿ ನಂತರ ಕನ್ನಡ ಧಾರವಾಹಿ ಇಷ್ಟ ದೇವತೆಗೆ ಕನ್ನಡದಲ್ಲೇ ಚಿತ್ರ ಕಥೆ ಬರೆದಿದ್ದೇನೆ. ನಾನು ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕನ್ನಡದ ಕಾದಂಬರಿ, ಕವನಗಳನ್ನು ಓದಿದ್ದೇನೆ, ಮುಂದೆಯೂ ಓದುತ್ತಿರುತ್ತೇನೆ. ನನ್ನ ಭಾಷೆ ಮೇಲೆ ನನಗೆ ಗೌರವ, ಪ್ರೀತಿ ಇದೆ. ಹಾಗಾಗಿ ನಾನು ಕನ್ನಡತಿ ಧಾರವಾಹಿಗೆ ಮಾತ್ರ ಕನ್ನಡತಿ ಅಲ್ಲ.
10. ಕನ್ನಡ ಉಳಿಸಲು, ಬೆಳೆಸಲು ರಾಜ್ಯ ಸರ್ಕಾರ ಅಭಿಯಾನ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಹೆಚ್ಚಾಗಿ ಮಾತೃ ಭಾಷೆ ಮನೆಗಳಲ್ಲಿ ಮಾತ್ರವೇ ಸೀಮಿತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಂದ್ರೆ ಕೇವಲ ಚಾಮರಾಜಪೇಟೆ ಒಳಗಡೆ ಇರುವುದು ಮಾತ್ರ ಅಲ್ಲ. ಎಲ್ಲಾ ಕಡೆಯೂ ಕನ್ನಡ ಭಾಷೆ ತಲುಪಬೇಕು. ಹಿಂದಿ, ಇಂಗ್ಲೀಷ್ ಅಥವಾ ಒಂದು ಭಾಷೆಯನ್ನು ದ್ವೇಷ ಮಾಡಿ ಮತ್ತೊಂದು ಭಾಷೆಯನ್ನು ಗೆಲ್ಲಿಸುವ ಅಗತ್ಯವಿಲ್ಲ. ನಮ್ಮ ಭಾಷೆಯನ್ನು ಪ್ರೀತಿಸುದ್ರೆ ಸಾಕು.
11. ರಂಜನಿ ಅಂದ್ರೆ ಅಪ್ಪಟ ಕನ್ನಡತಿ ಎಂಬ ಭಾವನೆ ಕನ್ನಡಿಗರಲ್ಲಿಇದೆ. ಹೀಗಾಗಿ ರಂಜನಿ ಹೀಗೆ ಇರ್ಬೇಕು ಅಂತ ಜನ ಬಯಸ್ತಾರೆ. ಇದರಿಂದ ನಿಮ್ಮ ಪರ್ಸನಲ್ ಲೈಫ್ಗೆ ಹೇಗೆ ಎಫೆಕ್ಟ್ ಆಗಿದೆ? ರಂಜನಿಗೆ ಶುದ್ಧ ಕನ್ನಡ ಬರುತ್ತೆ ಎನ್ನುವ ಕಾರಣಕ್ಕೆ ನಾನ್ ಮಾಡುವ ಎಲ್ಲಾ ಪಾತ್ರದಲ್ಲೂ ಹಾಗೇ ಬಳಸಿದ್ರೆ ಅದು ಆ ಪಾತ್ರಕ್ಕೆ ಸರಿಯಾದ ಪೋಷಣೆ ಆಗಿರಲ್ಲ. ಆ ಪಾತ್ರಕ್ಕೆ ತಕ್ಕ ಹಾಗೆ ಭಾಷೆ, ವೇಷ ಎಲ್ಲವೂ ಬದಲಾಗುತ್ತೆ. ನನ್ನ ಹಕುನಾಮ್ ಟಾಟಾ ಎಂಬ ವೆಬ್ ಸಿರೀಸ್ನಲ್ಲಿ ನಾನು ಇನ್ವೆಸ್ಟಿಗೇಟರ್ ಆಗಿ ಪಾತ್ರ ಮಾಡ್ತಿದ್ದೀನಿ. ಅದಕ್ಕೆ ನಾನು ಈಗಿನ ಕಾಲದ ಪೊಲೀಸ್ ಡಿಪಾರ್ಟ್ಮೆಂಟ್ನ ಟ್ರೆಂಡಿ ಹುಡುಗಿಯಾಗಿ ಎಷ್ಟೋ ಇಂಗ್ಲೀಷ್ ಬಳಕೆ ಮಾಡಿದ್ದೀನಿ. ಅದು ಆ ಪಾತ್ರಕ್ಕೆ ಸಿಕ್ಕಬೇಕಾದ ನ್ಯಾಯ. ಅಲ್ಲಿ ರಂಜನಿ ಬದಲಾಗಿಲ್ಲ. ಈ ರೀತಿ ಬೇರೆ ಬೇರೆ ಪಾತ್ರ ಬಂದಾಗ ಆ ಪಾತ್ರಕ್ಕೆ ತಕ್ಕನಾಗಿ ಮಾತಾಡಬೇಕಾಗುತ್ತೆ ಎನ್ನತ್ತಾರೆ ನಮ್ಮ ಕನ್ನಡತಿ ರಂಜನಿ ರಾಘವನ್. ಈ ವೇಳೆ ಅವರು ಕನ್ನಡಿಗರಿಗೆ ತುಂಬು ಹೃದಯದಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?
Published On - 9:36 am, Sun, 31 October 21