ಯಾವುದೇ ಕಾರಣಕ್ಕೂ ಬಂದ್ ಬೇಡ, ಅದರಿಂದ ಪರಿಹಾರ ಸಿಗಲ್ಲ: ಸಿಎಂ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಭೀಕರ ಮಳೆ ಕೊರತೆ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ CWMA ನೀಡಿರುವ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಆಗಸ್ಟ್ 13ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಪ್ರಯಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ದಯವಿಟ್ಟು ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
- ಅಖಂಡ ಕರ್ನಾಟಕ ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ
- ಬಂದ್ ಕೈಬಿಡುವಂತೆ ಸಂಘಟನೆಗಳಿಗೆ ಸಿಎಂ ಮನವಿ
ಬೆಂಗಳೂರು, ಜುಲೈ 31: ಸದ್ಯ ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery Water Dispute) ಕಾವೇರಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀಡಿರುವ CWMA ಆದೇಶವನ್ನು ಖಂಡಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar), ‘ಯಾವುದೇ ಕಾರಣಕ್ಕೂ ಬಂದ್ ಬೇಡ, ಬಂದ್‌ನಿಂದ ಪರಿಹಾರ ಸಿಗಲ್ಲ. ದಯವಿಟ್ಟು ಬಂದ್ ಕೈಬಿಡಿ’ ಎಂದು ಮನವಿ ಮಾಡಿದ್ದಾರೆ.
ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ: ಡಿ.ಕೆ.ಶಿವಕುಮಾರ್
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬಂದ್‌ನಿಂದ ಪರಿಹಾರ ಸಿಗಲ್ಲ. ಅಖಂಡ ಕರ್ನಾಟಕ ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ’. ಹೀಗಾಗಿ ಆಗಸ್ಟ್ 13ರ ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ವಿಚಾರವಾಗಿ ಮಾತನಾಡಿದ ಅವರು, ‘15 ದಿನಗಳ ಕಾಲ ಕಾವೇರಿ ನೀರು ಬಿಡುವಂತೆ CWMA ಆದೇಶಿಸಿದೆ. ಸಂಕಷ್ಟದ ಕಾಲದಲ್ಲಿ ಇಂತಹ ತೀರ್ಪು ಹೊರಬಿದ್ದಿದೆ. ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಹಾಗಾಗಿ ಹಿಂದಿನ ವರ್ಷ ತಮಿಳುನಾಡಿಗೆ 400ಕ್ಕೂ ಹೆಚ್ಚು ಟಿಎಂಸಿ ನೀರು ಹೋಗಿದೆ. ಸಿಡಬ್ಯುಆರ್‌ಸಿ ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಿದ್ದೆವು’ ಎಂದರು.
ಇದನ್ನೂ ಓದಿ: ಕಾವೇರಿ ಜಲ ವಿವಾದ: ಆ.13ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು
‘CWMA ಸಭೆಗೆ ಯಾರೂ ಹೋಗಿಲ್ಲ ಅಂತಾ ವಿಪಕ್ಷಗಳು ಆರೋಪಿಸಿವೆ. ನಮ್ಮ ರಾಜ್ಯದ ಪರ ಮೂವರು ಹಿರಿಯ ಅಧಿಕಾರಿಗಳು ಹೋಗಿದ್ದರು. ನೀರು ಬಿಡುಗಡೆಗೆ ಕೆಲ ಸಮಯ ನೀಡುವಂತೆ ಮನವಿ ಮಾಡಿದ್ದೆವು. ತಮಿಳುನಾಡು ಅಧಿಕಾರಿಗಳೂ ಪ್ರಬಲ ವಾದ ಮಂಡಿಸಿದ್ದಾರೆ. ರಾಜ್ಯದ ಪರ ಎಸಿಎಸ್ ಗೌರವ್ ಗುಪ್ತಾ ಸಹ ಪ್ರಬಲ ವಾದ ಮಂಡಿಸಿದರು. ನಿಮಗೆ ಹೆಚ್ಚು ನೀರು ಬರುತ್ತಿದೆ ಎಂದು CWMAನವರು ಹೇಳಿದ್ದಾರೆ’.
ರಾಜ್ಯದ ಹಿತ ಕಾಪಾಡುವುದೇ ಸರ್ಕಾರದ ಮುಖ್ಯ ಉದ್ದೇಶ: ಸಿಎಂ
‘ಇನ್ನು ಹೇಮಾವತಿ ಶೇ.67ರಷ್ಟು ತುಂಬಿದೆ, ಕೆಆರ್‌ಎಸ್ 36%, ಹಾರಂಗಿ 95%, ಕಬನಿ 83% ನೀರು ತುಂಬಿದೆ. ಎಲ್ಲರ ಬಳಿಯೂ ಈ ದಾಖಲೆ ಇದೆ. ಆದರೆ ಈಗ ಕೊಟ್ಟಿರುವ ಆದೇಶ ಪ್ರಕಾರ 4.5 ಟಿಎಂಸಿ ನೀರು ಬಿಡಲು ಹೇಳಿದೆ. ಈಗಾಗಲೇ ನಮಗೂ ಒಳಹರಿವು ಬರುತ್ತಿದೆ. ಆದರೂ ನನ್ನ ಮತ್ತು ಸರ್ಕಾರದ ಕರ್ತವ್ಯ ರಾಜ್ಯದ ಹಿತ ಕಾಪಾಡಬೇಕು. ಹಿಂದಿನ ಪರಿಸ್ಥಿತಿ ನಮಗೆ ಗೊತ್ತಿದೆ. ಈ ವರ್ಷವು ಶಾಸಕರ ಸಭೆ ಕರೆದು ಮಾತಾಡಿದ್ದೇನೆ. ರೈತರ ರಕ್ಷಣೆ ನಾವು ಮಾಡಿದ್ದೇವೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದ ಹಿತಕ್ಕೆ ಎಲ್ಲಾ ರೀತಿಯ ರಕ್ಷಣೆಗೆ ನಾವು ಬದ್ಧತೆ ತೋರಿಸಿದ್ದೇವೆ. ಈಗಲೂ ರಾಜ್ಯದ ಹಿತ ಕಾಪಾಡುವ ಬದ್ಧತೆ ನಮಗೆ ಇದೆ’ ಎಂದಿದ್ದಾರೆ.
ಬೇರೊಂದು ದಿನ ರಾಜ್ಯಕ್ಕೆ ಬರುವಂತೆ ಸಿಎಂ ವಿಜಯ್‌ಗೆ ಡಿಕೆ ಶಿವಕುಮಾರ್ ಮನವಿ
ತಮಿಳುನಾಡು ಸಿಎಂ ವಿಜಯ್ ಆಗಮನದ ವಿಚಾರವಾಗಿ ಮಾತನಾಡಿದ ಅವರು, ‘ಈ ಬಗ್ಗೆ ಪತ್ರ ಬರೆದಿದ್ದಾರೆ. ರಾಜ್ಯದ ಸಿಎಸ್‌ಗೆ ತಮಿಳುನಾಡು ಸಿಎಸ್ ಪತ್ರ ಬರೆಯುವ ಮೂಲಕ ಆಗಸ್ಟ್ 3ರಂದು ತಮಿಳುನಾಡು ಸಿಎಂ ವಿಜಯ್ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನೂ ಸಹ ಫೋನ್‌ನಲ್ಲಿ ಅವರೊಂದಿಗೆ ಚರ್ಚಿಸಿದ್ದೇನೆ. ಈಗ ಪರಿಸ್ಥಿತಿ ಸರಿ ಇಲ್ಲ, ಎರಡು ರಾಜ್ಯಗಳಿಗೂ ಒಳ್ಳೇದು ಆಗಬೇಕು. ಇಂತಹ ಸಂದರ್ಭದಲ್ಲಿ ತಮಿಳುನಾಡು ಸಿಎಂ ಬರೋದು ಬೇಡ. ಆಗಸ್ಟ್ 3ರ ಬದಲು ಬೇರೊಂದು ದಿನ ಬರುವಂತೆ ಮನವಿ ಮಾಡಿದ್ದೇನೆ. ಸೌಹಾರ್ದಯುತವಾಗಿ ಕಾವೇರಿ ವಿವಾದವನ್ನು ಬಗೆಹರಿಸಬೇಕಿದೆ. ರಾಜ್ಯದ ಹಿತ, ರೈತರ ಹಿತ ಕಾಪಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಾಮನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು
ಪ್ರಶ್ನೆ: ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್‌ಗೆ ಯಾವ ದಿನದಂದು ಕರೆ ನೀಡಿವೆ?
ಉತ್ತರ: ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಪ್ರಶ್ನೆ: CWMA ಆದೇಶದ ಪ್ರಕಾರ ಎಷ್ಟು ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು?
ಉತ್ತರ: 3,500 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.
ಪ್ರಶ್ನೆ: ಆಗಸ್ಟ್ 3 ರಂದು ರಾಜ್ಯಕ್ಕೆ ಬರದಂತೆ ಯಾರಿಗೆ ಮನವಿ ಮಾಡಲಾಗಿದೆ?
ಉತ್ತರ: ಆಗಸ್ಟ್ 3 ರಂದು ರಾಜ್ಯಕ್ಕೆ ಬರದಂತೆ ತಮಿಳುನಾಡು ಸಿಎಂ ವಿಜಯ್‌ಗೆ ಮನವಿ ಮಾಡಲಾಗಿದೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Fri, 31 July 26




