ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ, ಯಾರಿಗೆ ಎಷ್ಟು ಹಣ ಸಿಗುತ್ತೆ?
ಮುಂಗಾರು ಮುನ್ನವೇ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಕೆಲವರು ಮನೆ, ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರಿಂದ ರಾಜ್ಯ ಸರ್ಕಾರ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ 1 ತಿಂಗಳಿನಲ್ಲಿ ಉಂಟಾದ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ.

ಬೆಂಗಳೂರು, (ಜೂನ್ 18): 2025-26ನೇ ಸಾಲಿನಲ್ಲಿ ಕರ್ನಾಟಕದ (Karnataka)ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಮುಂಗಾರು ಮಳೆ (Monsoon Rains) ಪ್ರಾರಂಭವಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ ರಾಜ್ಯ ಸರ್ಕಾರ, ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ. ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ಪಾವತಿಸಲು ಆದೇಶ ಹೊರಡಿಸಿದೆ. 1-4-2025ರಿಂದ 31-5-2025ರ ಅವಧಿಯಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿ ಆದೇಶಿಸಲಾಗಿದ್ದು, ಪೂರ್ಣ ಪ್ರಮಾಣ ಮನೆ ಕಳೆದುಕೊಂಡವರಿಗೆ 1.20 ಲಕ್ಷ ರೂ ಹಾಗೂ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಸೂಚಿಸಲಾಗಿದೆ.
ಯಾವುದಕ್ಕೆ ಎಷ್ಟು ಪರಿಹಾರ
- ಪೂರ್ಣ ಹಾನಿಯಾದ ಮನೆಗೆ ರೂ.1.20 ಲಕ್ಷ ರೂ. ಪರಿಹಾರ. ಜೊತೆಗೆ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಹಂಚಿಕೆ.
- ಹೆಚ್ಚು ಪ್ರಮಾಣದ ಮನೆ ಹಾನಿ (ಶೇ 50% ಕ್ಕಿಂತ ಮೇಲ್ಪಟ್ಟು ಆಗೂ ಶೇ 75% ಕ್ಕಿಂತ ಕಡಿಮೆ), ಮನೆಯ ಗೋಡೆಗಳ ಕುಸಿತ ಹಾಗೂ ಮೇಲ್ಚಾವಣಿ ಹಾನಿಗೆ 50,000 ರೂ. ಪರಿಹಾರ.
- ಅತೀ ಸಣ್ಣ ಪ್ರಮಾಣದ ಹಾನಿ (ಶೇ15% ಕ್ಕಿಂತ ಮೇಲ್ಪಟ್ಟು ಹಾಗೂ ಶೇ 20% ಕ್ಕಿಂತ ಕಡಿಮೆ), ಮನೆಯ ಮೇಲ್ಛಾವಣಿಯ ಹಂಚು/ಶೀಟುಗಳ, ಬಾಗಿಲು ಮತ್ತು ಕಿಟಕಿಗಳ ಹಾನಿ ಹಾಗೂ ಇನ್ನಿತರ ಸಣ್ಣ ಪುಟ್ಟ ಹಾನಿಗೆ- ರೂ 6,500.
- ಮಧ್ಯಮ ಪ್ರಮಾಣ ಮನೆ ಹಾನಿ (ಶೇ 20%ಕ್ಕಿಂತ ಮೇಲ್ಪಟ್ಟು ಹಾಗೂ ಶೇ 50% ಕ್ಕಿಂತ ಕಡಿಮೆ), ಮನೆಯ ಗೋಡೆಗಳಲ್ಲಿ ಬಿರುಕು/ಸಣ್ಣ ಪ್ರಮಾಣದ ಕುಸಿತಕ್ಕೆ ರೂ 25,000ರೂ.
ಸರ್ಕಾರದ ಆದೇಶದಲ್ಲೇನಿದೆ?
ಅತಿವೃಷ್ಟಿ/ಪ್ರವಾಹದಿಂದ ಮನೆಯ ಗೋಡೆಗಳೊಂದಿಗೆ ಮೇಲ್ಮಾವಣಿ ಕುಸಿತದಿಂದ ಹಾನಿಯಾದ ಮನೆಗಳನ್ನು ಸಂಪೂರ್ಣ ಹಾನಿಯಾದ ಮನೆಯೆಂದು ಪರಿಗಣಿಸಲು ಸೂಚಿಸಿದೆ. ಮನೆಹಾನಿಯ ಪ್ರಮಾಣವನ್ನು ಈ ಮೇಲಿನಂತೆ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸುವುದು. ಕಾಲಮಿತಿಯೊಳಗೆ ನಿಯಮಾನುಸಾರ ಅರ್ಹ ಸಂತ್ರಸ್ಮರಿಗೆ ಪರಿಹಾರ ಪಾವತಿಸಲು ಕ್ರವಹಿಸಲು ಸೂಚಿಸಲಾಗಿದೆ.
ಭಾಗಶಃ ಮನೆ ಹಾನಿಗಾಗಿ ರೂ.50,000 ಗಳ ವರೆಗೆ ಪಾವತಿಸಲಾಗುವ ಮನೆ ಹಾನಿ ಪರಿಹಾರ ಪಡೆಯುವ ಸಂತ್ರಸ್ಥರ ವಿವರಗಳಾದ, ಹಾನಿಯಾದ ಮನೆಯ ಜಿ.ಪಿ.ಎಸ್. ಛಾಯಾಚಿತ್ರ, ಆರ್.ಆರ್. ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪೂರ್ಣ ಹಾನಿಯಾದ ಮನೆಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷ ರೂ. ಪರಿಹಾರ. ಇದರ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಹಂಚಿಕೆ ಪತ್ರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿಯೇ RGRHCL ತಂತ್ರಾಂಶದ ಮೂಲಕ ವಿತರಿಸಲು ಸೂಚಿಸಿದೆ.
ಪರಿಹಾರ ಹಣ ಪಡೆದುಕೊಳ್ಳುದ್ಹೇಗೆ?
ಈ ವರ್ಷದ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಬಂದ ಮಳೆಗೆ ಮನೆಯಾನಿಯಾಗಿರುವ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮ ಪಂಚಾಯತಿ ಅಥವಾ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ಅರ್ಜಿಯನ್ನು ಸಲ್ಲಿಸಬೇಕು.