ಉರ್ದುವಿನಲ್ಲಿ ಪ್ರಕಟವಾಯ್ತು ಸರ್ಕಾರಿ ಆಹ್ವಾನ ಪತ್ರಿಕೆ! ಸಚಿವ ದಿನೇಶ್ ಗುಂಡೂರಾವ್ ಉಡಾಫೆ ಉತ್ತರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಪ್ರಕಟಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡೆ, ಆಡಳಿತ ಭಾಷೆ ಕನ್ನಡವನ್ನೇ ನಿರ್ಲಕ್ಷಿಸಿ, ಓಲೈಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರು, ಫೆಬ್ರವರಿ 25: ಕರ್ನಾಟಕದಲ್ಲಿ (Kanataka) ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ (Kannada) ನಿರ್ಲಕ್ಷಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ (Urdu) ಪ್ರಕಟಿಸಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿಮೋಫಿಲಿಯಾ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ನೆಹರೂ ತಾರಾಲಯದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೇವಲ ಉರ್ದುವಿನಲ್ಲಿ ಮುದ್ರಿಸಲಾಗಿದೆ ಎನ್ನಲಾಗಿದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರ ಆಡಳಿತ ಭಾಷೆ ಕನ್ನಡವನ್ನೇ ಮರೆತುಬಿಟ್ಟಿದೆಯೇ, ಅಥವಾ ಯಾವುದಾದರೂ ಒಂದು ಸಮುದಾಯವನ್ನು ಓಲೈಸುವ ರಾಜಕಾರಣಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕರ್ನಾಟಕ ರಾಜ್ಯ ಅಧಿಕೃತ ಭಾಷಾ ನಿಮಯದಲ್ಲೇನಿದೆ?
ಕರ್ನಾಟಕ ರಾಜ್ಯ ಅಧಿಕೃತ ಭಾಷಾ ಕಾಯ್ದೆಯ ಅನ್ವಯ, ಸರ್ಕಾರವು ಆಹ್ವಾನ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸುವುದು ಶಿಷ್ಟಾಚಾರವಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇಲಾಖೆಯ ಈ ನಡೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುವ ಪ್ರಯತ್ನ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಉರ್ದು ಭಾಷೆ ಮಾತನಾಡುವವರು ಕರ್ನಾಟಕದಲ್ಲಿ ಇಲ್ಲವೇ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ. ಆದರೆ, ರಾಜ್ಯದಲ್ಲಿ ಉರ್ದು ಮಾತನಾಡುವವರಷ್ಟೇ ಅಲ್ಲದೆ, ತುಳು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹೀಗಿರುವಾಗ, ಸರ್ಕಾರವು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ, ಆಯಾ ಭಾಷೆಗಳಲ್ಲೂ ಆಹ್ವಾನ ಪತ್ರಿಕೆಗಳನ್ನು ಪ್ರಕಟಿಸಬೇಕಾಗಿತ್ತು ಎಂಬ ವಾದ ಕೂಡ ಕೇಳಿಬಂದಿದೆ. ಕೇವಲ ಉರ್ದುವಿನಲ್ಲಿ ಮಾತ್ರ ಪ್ರಕಟಿಸಿದ್ದು, ಸರ್ಕಾರದ ಉದ್ದೇಶದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಅರೆಬೆತ್ತಲೆ ಪ್ರತಿಭಟನೆಗೆ ಖರ್ಗೆ ಸಮರ್ಥನೆ: ದೇಶದ ಹಿತಕ್ಕಾಗಿ ಪ್ರೊಟೆಸ್ಟ್ ಎಂದ AICC ಅಧ್ಯಕ್ಷ
ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿವೆ. ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವ ಬದಲು, ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ಸರ್ಕಾರ ನಿರತವಾಗಿದೆ ಎಂದು ಆರೋಪಿಸಿವೆ.
ಕಾಂಗ್ರೆಸ್ ಸರ್ಕಾರದ ಉರ್ದು ವ್ಯಾಮೋಹ ಇದೇ ಮೊದಲಲ್ಲ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉರ್ದು ಭಾಷೆಯ ಅಭಿವೃದ್ಧಿಗೆ 110 ಕೋಟಿ ರೂಪಾಯಿ ಅನುದಾನ ನೀಡಿ, ಕನ್ನಡ ಭಾಷೆಗೆ ಕೇವಲ 32 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಈ ರೀತಿಯ ಬೆಳವಣಿಗೆಗಳು ಸರ್ಕಾರವು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದನ್ನು ಮತ್ತಷ್ಟು ದೃಢಪಡಿಸಿವೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿವೆ.
ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ
ಏತನ್ಮಧ್ಯೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡ ಕಡೆಗಣಿಸಿದೆ. ಈ ಸರ್ಕಾರ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಈ ರೀತಿ ಆಗುತ್ತೆಂದು ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯ ಅಂದರೆ ಕನ್ನಡದ ರಾಮಯ್ಯ ಅಂದುಕೊಂಡಿದ್ದೆವು. ಆದರೆ ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಪ್ರಕಟಿಸಿದ್ದಾರೆ. ಎಲ್ಲಾ ಇಲಾಖೆಗಳ ಆಹ್ವಾನ ಪತ್ರಿಕೆಗಳು ಕನ್ನಡದಲ್ಲಿ ಪ್ರಕಟಿಸುತ್ತಾರೆ. ಆರೋಗ್ಯ ಇಲಾಖೆ ಉರ್ದುವಿನಲ್ಲಿ ಪ್ರಕಟಿಸಿದ್ದನ್ನು ಖಂಡಿಸುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Wed, 25 February 26
