ಕೊಡಗು: ಟೂರಿಸ್ಟ್ ಸೆಂಟರ್ ಅಕ್ರಮಗಳಿಗೆ ಸ್ಥಳೀಯ ಆಡಳಿತದಿಂದಲೇ ಅನುಮೋದನೆ; ಕಾವೇರಿ ನದಿಯ ಬುಡದಿಂದಲೇ ನಡೆಯುತ್ತಿದೆ ವಾಣಿಜ್ಯ ಚಟುವಟಿಕೆ
ನದಿ ಅತಿಕ್ರಮಣದ ಬಗ್ಗೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೆ ಸರ್ವೆ ನಡೆಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಒಂದು ವೇಳೆ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಕೊಡಗು: ಪ್ರವಾಸೋದ್ಯಮದ ಹೆಸರಿನಲ್ಲಿ ಪಕೃತಿಯನ್ನು ನಾಶ ಮಾಡುತ್ತಿರುವ ಆರೋಪ ಸದ್ಯ ಕೊಡಗು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಜಿಲ್ಲೆಯಲ್ಲಿ ಅತಿಯಾದ ಪ್ರವಾಸೋದ್ಯಮದಿಂದಾಗಿ ಪ್ರವಾಹ ಮತ್ತು ಭೂ ಕುಸಿತಗಳು ಸಂಬವಿಸುತ್ತಲೇ ಇವೆ. ಆದರೂ ಕೂಡ ಇಲ್ಲಿನ ಪ್ರವಾಸೋದ್ಯಮಿಗಳ ದುರಾಸೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಿಶ್ವ ಪ್ರಸಿದ್ಧ ಕಾವೇರಿ ನಿಸರ್ಗಧಾಮದ ಬಳಿಯೇ ಕಾವೇರಿ ನದಿಯನ್ನು ಪ್ರವಾಸೋದ್ಯಮಿಯೊಬ್ಬರು ಅತಿಕ್ರಮಣ ಮಾಡಿರುವ ವಿಚಾರ ಸದ್ಯ ಬೆಳಕಿಗೆ ಬಂದಿದೆ. ಇದು ಸಹಜವಾಗಿಯೇ ಇಲ್ಲಿನ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೊಡಗಿನ ವಿಶ್ವ ಪ್ರಸಿದ್ಧ ಕಾವೇರಿ ನಿಸರ್ಗಧಾಮ ಯಾರಿಗೆ ಗೊತ್ತಿಲ್ಲ ಹೇಳಿ. ಅರಣ್ಯ ಇಲಾಖೆ ನಡೆಸುತ್ತಿರುವ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಅದರಲ್ಲೂ, ಇಲ್ಲಿ ಹರಿಯುವ ಜುಳು ಜುಳು ನೀರಿನ ಸೌಂದರ್ಯವನ್ನು ಸವಿಯಲು ದೂರದ ಊರುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಆಗಮಿಸುವ ಪ್ರವಾಸಿಗರ ಸಂತೋಷ ಇಮ್ಮಡಿಗೊಳಿಸಲು ಕಾವೇರಿ ತಟದಲ್ಲಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ಗಳು ಆರಂಭವಾಗಿದೆ. 2015 ರಿಂದ ಆರಂಭವಾದ ಈ ಟೂರಿಸ್ಟ್ ಸೆಂಟರ್ಗಳಲ್ಲಿ ಫನ್ ಗೇಮ್ಗಳು ಮತ್ತು ಶಾಪಿಂಗ್ ಸೆಂಟರ್ಗಳು ಕೂಡ ಇದೆ. ಆದರೆ ಹೀಗೆ ಆರಂಭವಾದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಸಲಾಂ ಎಂಬುವರು ಕಾವೇರಿ ನದಿಯನ್ನೇ ಅತಿಕ್ರಮಣ ಮಾಡಿ ತಮ್ಮ ಟೂರಿಸ್ಟ್ ಸೆಂಟರ್ ನಿರ್ಮಿಸಿದ್ದಾರೆ ಎಂಬ ಆರೋಪ ಸದ್ಯ ಕೇಳಿ ಬಂದಿದೆ.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಸಲಾಂ ಎಂಬುವರು ನದಿಯನ್ನು ಅತಿಕ್ರಮಿಸಿ ಹಲವಾರು ಕಟ್ಟಡ, ತಡೆಗೋಡೆ, ಪಾರ್ಕ್, ಮತ್ತು ಡ್ರೈವಿಂಗ್ ಟ್ರ್ಯಾಕ್ಗಳನ್ನ ನಿರ್ಮಾಣ ಮಾಡಿದ್ದಾರೆ. ಇದರಿಂದ ಕಾವೇರಿ ನದಿಯ ಹರಿಯುವಿಕೆಗೆ ತೀವ್ರ ಅಡಚಣೆಯಾಗಿದೆ. ಇದೇ ಕಾರಣದಿಂದಾಗಿ ಪ್ರತಿ ವರ್ಷ ಇಲ್ಲಿ ಅತಿಯಾದ ಪ್ರವಾಹ ಸಂಭವಿಸುತ್ತಿದ್ದು, ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮುಳಗಡೆಯಾಗುತ್ತಿದೆ. ನಿಯಮಗಳ ಪ್ರಕಾರ ಯಾವುದೇ ನದಿಯಿಂದ 100 ಮೀಟರ್ ದೂರದವರೆಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೆ ನಿಸರ್ಗಧಾಮದಲ್ಲಿ ಕಾವೇರಿ ನದಿ ದಂಡೆಯಲ್ಲೇ ಕೋಟಿ ಹಣ ಹೂಡಿಕೆ ಮಾಡಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ. ವಿಪರ್ಯಾಸ ಅಂದರೆ ಪ್ರವಾಸೋದ್ಯಮಿಯ ಅಕ್ರಮಗಳಿಗೆ ಸ್ಥಳೀಯ ಗ್ರಾಮ ಪಂಚಾಯತಿ ಮತ್ತು ಕಾವೇರಿ ನಿಗಮದ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹಾಗಾಗಿ ಯಾವುದೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದರೆ, ಸಲಾಂ ತಮ್ಮ ಬಳಿ ಇರುವ ಅಧಿಕೃತ ದಾಖಲೆಗಳನ್ನು ನೀಡಿ ಬಾಯಿ ಮುಚ್ಚಿಸುತ್ತಾರೆ ಎನ್ನುವುದು ಟಿವಿ9 ಡಿಜಿಟಲ್ನ ರಿಯಾಲಿಟಿ ಚೆಕ್ ವೇಳೆ ಬೆಳಕಿಗೆ ಬಂದಿದೆ.
ನದಿಯ ಬದಿಯಲ್ಲಿ ತಡೆಗೋಡೆ ಕಟ್ಟಲು, ಉದ್ಯಾನವನ ನಿರ್ಮಾಣ ಮಾಡಲು, ವಾಣಿಜ್ಯ ಚಟುವಟಿಕೆ ನಡೆಸಲು ನನಗೆ ಸಂಬಂಧಪಟ್ಟ ಪ್ರಾಧಿಕಾರ, ಕಾವೇರಿ ನಿಗಮ, ಸ್ಥಳೀಯ ಪಂಚಾಯಿತಿ ಹಾಗೂ ತಹಶಿಲ್ದಾರರಿಂದ ಅನುಮತಿ ದೊರೆತಿದೆ. ಇದು ಅಕ್ರಮ ಎಂದಾದಲ್ಲಿ ಅವರು ಅನುಮತಿ ಯಾಕೆ ಕೊಟ್ಟರು. ಸ್ಥಳೀಯ ಅರಣ್ಯ ಇಲಾಖೆ ಕೂಡ ಕಾವೇರಿ ನಿಸರ್ಗಧಾಮದಲ್ಲಿ ನದಿ ಪಕ್ಕ ಅತಿಕ್ರಮಿಸಿ ಕಾಟೇಜ್ಗಳನ್ನು ನಿರ್ಮಿಸಿದೆ. ಅವರಿಗೆ ಒಂದು ಕಾನೂನು, ನನಗೆ ಒಂದು ಕಾನೂನಾ? ಎಂದು ಅತಿಕ್ರಮಣದಾರ ಸಲಾಂ ಪ್ರಶ್ನಿಸಿದ್ದಾರೆ.
ನದಿ ಅತಿಕ್ರಮಣದ ಬಗ್ಗೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೆ ಸರ್ವೆ ನಡೆಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಒಂದು ವೇಳೆ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಟೂರಿಸ್ಟ್ ಸೆಂಟರ್ನಲ್ಲಿ ನಿರ್ಮಾಣವಾಗಿರುವ ಪ್ರತಿಯೊಂದು ಕಟ್ಟಡಗಳಿಗೂ ಅನುಮತಿ ಪಡೆಯಲಾಗಿದೆ. ಆದರೆ ನದಿ ಪಕ್ಕದಲ್ಲಿ ಇಷ್ಟೊಂದು ಅಕ್ರಮಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ದಾರೆ ಎನ್ನುವುದು ನಾಗರಿಕರ ಪ್ರಶ್ನೆ. ಸದ್ಯ ಕಾವೇರಿ ಉಳಿಸುವ ನಿಟ್ಟಿನಲ್ಲಿ, ಈ ಅಕ್ರಮ ಟೂರಿಸ್ಟ್ ಸೆಂಟರ್ ಅನ್ನು ಇಲ್ಲಿಂದ ತೆರವುಗೊಳಿಸಬೇಕಾದ ಅನಿರ್ವಾತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಕೊಡಗು ಪ್ರವಾಸಿ ತಾಣ; ಪ್ರವಾಸೋದ್ಯಮಕ್ಕೆ 2 ಕೋಟಿ ರೂಪಾಯಿ ನಷ್ಟ
ಲಾಕ್ಡೌನ್ ಹಿನ್ನೆಲೆ ಕೊಡಗು ಜಿಲ್ಲೆಯೊಳಕ್ಕೆ ಯಾವುದೇ ಪ್ರವಾಸಿಗರು ಬರುವಂತಿಲ್ಲ: ಕಟ್ಟೆಚ್ಚರ
Published On - 9:56 am, Tue, 6 July 21