ಕೊಡಗು: ಕಾಡಾನೆ ದಾಳಿಗೆ ಬ್ರೇಕ್; ಸೈರನ್ ಮತ್ತು ಸೆನ್ಸಾರ್ ಅಳವಡಿಕೆಯೇ ಹೊಸ ಆಶಾಕಿರಣ
ಒಮ್ಮೆ ಸೈರನ್ ಆದರೆ 30 ಸೆಕೆಂಡ್ ವರೆಗೆ ಕಿರುಚಿಕೊಳ್ಳುತ್ತದೆ. ಮತ್ತೆ ಆನೆಗಳು ಸೆನ್ಸಾರ್ ವ್ಯಾಪ್ತಿಗೆ ಬಂದರೆ ಮತ್ತೆ ಕಿರುಚಿಕೊಳ್ಳುತ್ತವೆ. ಸಧ್ಯಕ್ಕೆ ಈ ಯಂತ್ರ ಮಾಲತೇಶ್ ಅವರಿಗೆ ಲಾಭಯಾದಯಕವಾಗಿ ಪರಿಣಮಿಸಿದೆ. ಒಂದೆರಡು ಬಾರಿ ಬಂದ ಆನೆಗಳು ಸೈರನ್ಗೆ ಬೆದರಿ ಕಾಲ್ಕಿತ್ತಿವೆ. ಇದರಿಂದ ಇಲ್ಲಿನ ಕಾರ್ಮಿಕರು ತುಸು ನೆಮ್ಮದಿಯಿಂದ ಇದ್ದಾರೆ.
ಕೊಡಗು: ಜಿಲ್ಲೆಯಲ್ಲಿ ಕಾಡು- ನಾಡು ಸಂಘರ್ಷ ಇಂದು ನಿನ್ನೆಯದ್ದಲ್ಲ. ಅದ್ರಲ್ಲೂ ಭತ್ತ, ಕಾಫಿ ಬೆಳೆಯುವ ರೈತರಿಗಂತೂ ಕಾಡಾನೆಗಳು. ಕಾಡು ಕೋಣಗಳಿಂದಾಗುವ ನಷ್ಟಗಳೂ ಅಷ್ಟಿಷ್ಟಲ್ಲ. ಇವುಗಳ ಹಾವಳಿ ತಪ್ಪಿಸಲು ಸರ್ಕಾರ ನೂರಾರು ಕೋಟಿ ರೂ. ವ್ಯಯ ಮಾಡಿದೆ. ಆದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಆದರೆ ಜಿಲ್ಲೆಯ ಕೃಷಿಕರೊಬ್ಬರು ಅಳವಡಿಸಿಕೊಂಡಿರುವ ತಂತ್ರಜ್ಞಾನವೊಂದು ಈ ಸಮಸ್ಯೆಯ ಪರಿಹಾರಕ್ಕೆ ಹೊಸ ಆಶಾಕಿರಣವಾಗಿದೆ.
ಕಾಡಾನೆಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿ ಅಳವಡಿಸಿದ್ದಾಯ್ತು. ರೈಲು ಕಂಬಿ ಹಾಕಿದ್ದಾಯ್ತು, ಪಟಾಕಿ ಸಿಡಿಸಿದ್ದಾಯ್ತು. ಆದರೂ ಆನೆಗಳನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೆ ಕುಶಾಲನಗರ ತಾಲ್ಲೂಕಿನ ಕೂಡು ಮಂಗಳೂರು ಗ್ರಾಮದ ನರ್ಸರಿ ಕೃಷಿಕ ಮಾಲತೇಶ್ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ಸೋಲಾರ್ನಿಂದ ಚಾರ್ಜ್ ಆಗುವ ಬ್ಯಾಟರಿಗೆ ಸೈರನ್ ಮತ್ತು ಸೆನ್ಸಾರ್ ಅಳವಡಿಸಿರುವ ಯಂತ್ರವೊಂದನ್ನು ತಂದಿದ್ದಾರೆ. ಹೆಚ್ಡಿ ಕೋಟೆಯಲ್ಲಿ ಕೆಲವು ಉತ್ಸಾಹಿ ಯುವಕರು ಇದನ್ನು ಸಿದ್ಧಪಡಿಸಿ ಪ್ರಯೋಗ ನಡೆಸಿ ನೋಡುವಂತೆ ಮಾಲತೇಶ್ಗೆ ನೀಡಿದ್ದಾರೆ. ಈ ಸೆನ್ಸಾರ್ ಯಂತ್ರವನ್ನು ತನ್ನ ನರ್ಸರಿಯ ಬದಿಯಲ್ಲಿ ಆನೆಗಳು ಬರುವ ದಾರಿಯಲ್ಲಿ ಅಳವಡಿಸಿದ್ದಾರೆ. ಆನೆಗಳು 80 ಅಡಿ ದೂರದಲ್ಲಿರುವಾಗಲೇ ಸೆನ್ಸಾರ್ ಆನೆಗಳ ಚಲನವಲನ ಗರುತಿಸಿ ಜೋರಾಗಿ ಕಿರುಚಿಕೊಳ್ಳಲು ಶುರುಮಾಡುತ್ತದೆ. ಈ ಸಂದರ್ಭ ಕಾಡು ಪ್ರಾಣಿಗಳು ಬೆದರಿ ಅಲ್ಲಿಂದ ಓಡಿ ಹೋಗುತ್ತವೆ ಎಂದು ಕೃಷಿಕ ಮಾಲತೇಶ್ ಹೇಳಿದ್ದಾರೆ.
ಈ ಸೋಲಾರ್ ಯಂತ್ರದಲ್ಲಿ ಎರಡು ಬಗೆಯ ಸೈರನ್ಗಳಿವೆ. ಒಂದು ಪೊಲೀಸ್ ಅಥವಾ ಆ್ಯಂಬ್ಯುಲೆನ್ಸ್ ಮಾದರಿಯಲ್ಲಿ ಅರಚಿಕೊಂಡರೆ, ಮತ್ತೊಂದು ಸೈರನ್ನಲ್ಲಿ ಹುಲಿ ಘರ್ಜಿಸಿದಂತೆ, ಜನರು ಬೊಬ್ಬೆ ಹೊಡೆದಂತೆ, ಡೋಲು ಬಡಿದಂತೆ ಹೀಗೆ ನಾನಾ ಬಗೆಯ ಧ್ವನಿಗಳು ಮೊಳಗುತ್ತವೆ. ಇದರಿಂದ ಗಲಿಬಿಲಿಯಾಗುವ ಕಾಡಾನೆಗಳು ಇತ್ತಕಡೆ ಬರುವುದಿಲ್ಲ ಎಂದು ಮಾಲತೇಶ್ ತಿಳಿಸಿದ್ದಾರೆ.
ಒಮ್ಮೆ ಸೈರನ್ ಆದರೆ 30 ಸೆಕೆಂಡ್ ವರೆಗೆ ಕಿರುಚಿಕೊಳ್ಳುತ್ತದೆ. ಮತ್ತೆ ಆನೆಗಳು ಸೆನ್ಸಾರ್ ವ್ಯಾಪ್ತಿಗೆ ಬಂದರೆ ಮತ್ತೆ ಕಿರುಚಿಕೊಳ್ಳುತ್ತವೆ. ಸಧ್ಯಕ್ಕೆ ಈ ಯಂತ್ರ ಮಾಲತೇಶ್ ಅವರಿಗೆ ಲಾಭಯಾದಯಕವಾಗಿ ಪರಿಣಮಿಸಿದೆ. ಒಂದೆರಡು ಬಾರಿ ಬಂದ ಆನೆಗಳು ಸೈರನ್ಗೆ ಬೆದರಿ ಕಾಲ್ಕಿತ್ತಿವೆ. ಇದರಿಂದ ಇಲ್ಲಿನ ಕಾರ್ಮಿಕರು ತುಸು ನೆಮ್ಮದಿಯಿಂದ ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ ಆನೆ -ಮಾನವ ಸಂಘರ್ಷ ತಪ್ಪಿಸಲು ಸರ್ಕಾರ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಆದರೆ ಯಾವುದೂ ಕೂಡ ಅಷ್ಟೊಂದು ಫಲಪ್ರದವಾಗಿಲ್ಲ. ಇದೀಗ ಹೆಚ್ಡಿ ಕೋಟೆಯ ಕೆಲವರು ಈ ಯಂತ್ರ ಆವಿಷ್ಕರಿಸಿದ್ದು, ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಮಾಲತೇಶ್ ಅವರ ಬಳಿ ಆರಂಭಿಕ ಯಶಸ್ಸನ್ನೂ ಕಂಡಿದೆ. ಮುಂದಿನ ದಿನಗಳಲ್ಲಿ ಈ ಯಂತ್ರ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ಹಾಸನದಲ್ಲಿ ಕಾಡಾನೆ ದಾಳಿ; ಕಾಫಿ ತೋಟದ ಮಾಲೀಕ ಸಾವು
Karnataka Budget 2021 Highlights: ಜಿಲ್ಲೆಗೊಂದು ಗೋಶಾಲೆ, ಮೇಕೆ-ಕುರಿ-ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ