AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನ ಹಾಕಿದ ತಾಯಿಯನ್ನೇ ಕೊಂದ ಆಟೋ ಚಾಲಕ: ಅಜ್ಜಿಯನ್ನು ನಂಬಿಸಿ ಕರೆದೊಯ್ದು ಭೀಕರ ಕೊಲೆ

ಕುಶಾಲನಗರದ ರುದ್ರಮ್ಮ ಅವರನ್ನು ನಂಬಿಕಸ್ಥ ಆಟೋ ಚಾಲಕ ಕುಮಾರ ಹಣ ಮತ್ತು ಚಿನ್ನಕ್ಕಾಗಿ ಬೈಲುಕುಪ್ಪೆ ಸಮೀಪ ಭೀಕರವಾಗಿ ಕೊಲೆ ಮಾಡಿದ್ದಾನೆ. ಮಗನಂತೆ ನೋಡಿಕೊಂಡ ವೃದ್ಧೆಯನ್ನು ಮೋಸದಿಂದ ಕರೆದೊಯ್ದು, ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಕೊಲೆಗೆ ಮುನ್ನ ನಾಯಿ ಅಪಾಯದ ಸುಳಿವು ನೀಡಿದರೂ ವೃದ್ಧೆ ನಿರ್ಲಕ್ಷಿಸಿದ್ದರು. ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿದ್ದು, ಇತರ ಸಹಚರರಿಗಾಗಿ ಶೋಧ ನಡೆಸುತ್ತಿದ್ದಾರೆ.

ಅನ್ನ ಹಾಕಿದ ತಾಯಿಯನ್ನೇ ಕೊಂದ ಆಟೋ ಚಾಲಕ: ಅಜ್ಜಿಯನ್ನು ನಂಬಿಸಿ ಕರೆದೊಯ್ದು ಭೀಕರ ಕೊಲೆ
ಕುಶಾಲನಗರ ಕೊಲೆ
ಗೋಪಾಲ್​ ಸೋಮಯ್ಯ
| Edited By: |

Updated on: Sep 22, 2026 | 5:40 PM

Share

ಕುಶಾಲನಗರ, ಸೆ. 22: ಪ್ರೀತಿಯಿಂದ ಸಾಕಿದ ನಾಯಿ ‘ಜಿಮ್ಮಿ’ ಕಾಲಿಗೆ ಅಡ್ಡಬಂದು ಹೋಗಬೇಡ ಎಂದು ತಡೆದರೂ, ಅದನ್ನೇ ಬೈದು ಪಕ್ಕಕ್ಕೆ ತಳ್ಳಿ ಆಟೋ ಹತ್ತಿದ ಆ ಅಮ್ಮನಿಗೆ ತಾನು ನಂಬಿದ ‘ಮಗನಂತಹ’ ವ್ಯಕ್ತಿಯೇ ತನ್ನ ಕುತ್ತಿಗೆ ಹಿಸುಕಿ ಹೆಣ ಮಾಡುತ್ತಾನೆ ಎಂಬ ಸಣ್ಣ ಅನುಮಾನವೂ ಇರಲಿಲ್ಲ. ಹಣದ ಆಸೆಗೆ ಬಿದ್ದು, ತನಗೆ ಅನ್ನ ಹಾಕಿದ ತಾಯಿಯಂತಿದ್ದ ವೃದ್ಧೆಯನ್ನೇ ಆಟೋ ಚಾಲಕನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಕರುಣಾಜನಕ ಘಟನೆ ಕೊಡಗು ಹಾಗೂ ಮೈಸೂರು ಗಡಿಭಾಗದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಬಡಾವಣೆಯ ನಿವಾಸಿ, ವಿಶ್ರಾಂತ ನೌಕರರಾಗಿದ್ದ ರುದ್ರಮ್ಮ (65) ಕೊಲೆಯಾದ ದುರದೃಷ್ಟಕರ ವೃದ್ಧೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಆಪ್ತ ಆಟೋ ಚಾಲಕ ಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರುದ್ರಮ್ಮ ಅವರು ಕೂಡಿಗೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಬಂದ ಹಣದಲ್ಲಿ ಮನೆ ಖರೀದಿಸಿ ಮಗಳು ಸಾವಿತ್ರಿ, ಅಳಿಯ ಹಾಗೂ ಮೊಮ್ಮಗನ ಜೊತೆ ನೆಮ್ಮದಿಯಿಂದ ವಾಸವಾಗಿದ್ದರು. ಅಲ್ಲದೆ, ದಿನನಿತ್ಯದ ಖರ್ಚಿಗೆ ಒಂದಷ್ಟು ಹಣವನ್ನು ಬಡ್ಡಿಗೆ ನೀಡುತ್ತಿದ್ದರು.

ಇದೇ ಕಂಪನಿಯಲ್ಲಿ ಪರಿಚಯವಾಗಿದ್ದ ಆಟೋ ಚಾಲಕ ಕುಮಾರನಿಗೆ ರುದ್ರಮ್ಮ ತಮ್ಮ ಸ್ವಂತ ಮಗನಂತೆಯೇ ಸ್ಥಾನ ನೀಡಿದ್ದರು. ಬಡ್ಡಿ ವ್ಯವಹಾರ ಸೇರಿ ಯಾವುದೇ ಕೆಲಸಕ್ಕೂ ಈತನ ಆಟೋವನ್ನೇ ಬಳಸುತ್ತಿದ್ದರು. ಮನೆಗೆ ಕರೆದು ಊಟವನ್ನೂ ಹಾಕುತ್ತಿದ್ದರು. ಶನಿವಾರದಂದು ರುದ್ರಮ್ಮ ಬ್ಯಾಂಕ್‌ನಿಂದ ₹50,000 ನಗದು ಹಿಂಪಡೆದಿದ್ದರು. ಇದನ್ನು ಗಮನಿಸಿದ್ದ ಕುಮಾರ, ಹಣ ಹಾಗೂ ಅವರ ಮೈಮೇಲಿದ್ದ ಬಂಗಾರದ ಆಭರಣಗಳನ್ನು ದೋಚಲು ಸಂಚು ರೂಪಿಸಿದ್ದ.

ಶನಿವಾರ ಸಂಜೆ ರುದ್ರಮ್ಮಗೆ ಕರೆ ಮಾಡಿದ ಕುಮಾರ, “ನಿನ್ನ ತಲೆನೋವಿಗೆ ಹಸಿರು ಮದ್ದು ಕೊಡಿಸುತ್ತೇನೆ ಬಾ” ಎಂದು ನಂಬಿಸಿ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿದ್ದ. ಕುಮಾರ ವೃದ್ಧೆಯನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗೋಲ್ಡನ್ ಟೆಂಪಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ರಸ್ತೆ ಬದಿಯ ಜೋಳದ ತೋಟದ ಬಳಿ ತನ್ನ ಇಬ್ಬರು ಸಹಚರರೊಂದಿಗೆ ಸೇರಿ, ವೃದ್ಧೆಯ ಬಾಯಿಗೆ ಬಟ್ಟೆ ತೂರಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಬಳಿಯಿದ್ದ 50 ಸಾವಿರ ರೂ. ನಗದು, ಚಿನ್ನದ ಚೈನು, ಓಲೆ ಹಾಗೂ ಬಳೆಗಳನ್ನು ದೋಚಿ ಶವವನ್ನು ಅಲ್ಲೇ ಎಸೆದು ಪರಾರಿಯಾಗಿದ್ದ. ಬಳಿಕ ಏನೂ ತಿಳಿಯದವನಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಫೋಟೋ ಹಾಕಿ ಹುಡುಕಾಡುವ ನಾಟಕವಾಡಿದ್ದ.

ಶನಿವಾರ ಸಂಜೆ ಅಜ್ಜಿ ಆಟೋ ಹತ್ತಲು ಹೋಗುವಾಗ, ಅವರ ಪ್ರೀತಿಯ ನಾಯಿ ‘ಜಿಮ್ಮಿ’ ಅಪಾಯದ ಸುಳಿವು ಅರಿತು ಅಡ್ಡಬಂದು ಹೋಗದಂತೆ ತಡೆದಿತ್ತು. ಆದರೆ “ನನಗೆ ಯಾಕೆ ಅಡ್ಡ ಬರ್ತಿಯಾ” ಎಂದು ಬೈದ ಅಜ್ಜಿ ನಾಯಿಯನ್ನು ಪಕ್ಕಕ್ಕೆ ತಳ್ಳಿ ಆಟೋ ಹತ್ತಿ ಹೋಗಿ ಶವವಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಶಾಂತಿ ಹಾಗೂ ಮಗಳು ಸಾವಿತ್ರಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ; ಹಾಸನ ನವವಿವಾಹಿತೆ ಕಣ್ಮರೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರಿಯಾಂಕಾ ಬಗ್ಗೆ ಸತ್ಯ ಮುಚ್ಚಿಟ್ಟು ಮದುವೆ ಮಾಡಿದ್ರು ಎಂದು ಪತಿ ಸಂಬಂಧಿಕರ ಆರೋಪ

ಭಾನುವಾರವೂ ರುದ್ರಮ್ಮ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಕುಮಾರ ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದುದನ್ನು ಗಮನಿಸಿದ ಪೊಲೀಸರು, ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹಣದ ಆಸೆಗೆ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಕುಶಾಲನಗರ ಗ್ರಾಮಾಂತರ ಹಾಗೂ ಬೈಲುಕುಪ್ಪೆ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us