ವಾರ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಈ ವಾರ? ಇಲ್ಲಿದೆ ಸಂಪೂರ್ಣ ವಿವರ
ನವೆಂಬರ್ ಮೊದಲ ವಾರವು ಅನಿರೀಕ್ಷಿತ ಘಟನೆಗಳು, ಅದೃಷ್ಟದ ತಿರುವುಗಳು ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ತರಲಿದೆ. ಸ್ಪರ್ಧೆ, ಅಧಿಕಾರ ಮತ್ತು ಹೊಸ ಆವಿಷ್ಕಾರಗಳು ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು. ಕಳೆದುಹೋದ ಅವಕಾಶಗಳ ಮರುಪ್ರಾಪ್ತಿ ಹಾಗೂ ಜೀವನದ ನಿರ್ಣಾಯಕ ಘಟ್ಟಗಳು ಈ ವಾರ ನಿಮಗೆ ಲಭಿಸಲಿವೆ. ಪ್ರತಿಯೊಂದು ರಾಶಿಗಳಿಗೂ ವಿಶಿಷ್ಟ ಅವಕಾಶಗಳು ಕಾದಿರುವುದು ಈ ವಾರದ ವಿಶೇಷ.

ನವೆಂಬರ್ ಮೊದಲ ವಾರದಲ್ಲಿ ಅನಿರೀಕ್ಷಿತ ಘಟನೆಗಳು, ಅದೃಷ್ಟದ ತಿರುವುಗಳು, ಸಾಮಾಜಿಕ ಪ್ರತಿಷ್ಠೆ, ಗುಪ್ತ ವಿಚಾರಗಳು, ಸ್ಪರ್ಧೆ, ಅಧಿಕಾರ, ಪ್ರತಿಭೆ, ಹೊಸ ಆವಿಷ್ಕಾರ, ಕಳೆದುಹೋದ ಅವಕಾಶಗಳ ಮರುಪ್ರಾಪ್ತಿ ಮತ್ತು ಜೀವನದ ನಿರ್ಣಾಯಕ ಘಟ್ಟಗಳು ಇನ್ನೂ ಮುಂತಾದ ಆಯಾಮಗಳು ಈ ವಾರ ನಿಮಗೆ ಸಿಗಲಿದೆ.
ಮೇಷ ರಾಶಿ : ಬಹುಕಾಲದಿಂದ ನಿಮ್ಮನ್ನು ಕಡೆಗಣಿಸುತ್ತಿದ್ದ ವ್ಯಕ್ತಿಗಳೇ ನಿಮ್ಮ ಸಾಮರ್ಥ್ಯವನ್ನು ಗುರುತಿಸುವ ಸಂದರ್ಭ ಬರಬಹುದು. ಸಾರ್ವಜನಿಕವಾಗಿ ನಿಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರೆಯಬಹುದು. ಹಳೆಯ ವಿವಾದವೊಂದರಲ್ಲಿ ನಿಮ್ಮ ಪರವಾಗಿ ಸಾಕ್ಷ್ಯ ಅಥವಾ ದಾಖಲೆ ದೊರೆಯುವ ಸಾಧ್ಯತೆಯಿದೆ. ಹೊಸ ತಂತ್ರಜ್ಞಾನ ಕಲಿಯುವ ಆಸಕ್ತಿ ಮೂಡಲಿದೆ. ಆದರೆ ನಿಮ್ಮ ಯಶಸ್ಸನ್ನು ಸಹಿಸದವರ ಟೀಕೆಗಳಿಗೆ ಹೆಚ್ಚು ಮಹತ್ವ ನೀಡಬೇಡಿ.
ವೃಷಭ ರಾಶಿ : ನಿಮ್ಮ ಜೀವನದಲ್ಲಿ ಸಂಗ್ರಹಿಸಿಕೊಂಡಿದ್ದ ಹಳೆಯ ವಸ್ತು, ದಾಖಲೆ ಅಥವಾ ಆಸ್ತಿಯೊಂದು ಅನಿರೀಕ್ಷಿತವಾಗಿ ಉಪಯುಕ್ತವಾಗಬಹುದು. ಕಲಾತ್ಮಕ ಪ್ರತಿಭೆಗೆ ಹೊಸ ಮನ್ನಣೆ ಸಿಗಬಹುದು. ಕುಟುಂಬದ ಪರಂಪರೆಯ ವೃತ್ತಿಯನ್ನು ಪುನರುಜ್ಜೀವನಗೊಳಿಸುವ ಆಲೋಚನೆ ಮೂಡಬಹುದು. ಸಾರ್ವಜನಿಕ ಸಂಪರ್ಕದಿಂದ ಹೊಸ ಅವಕಾಶ ದೊರೆಯಬಹುದು. ಆದರೆ ಇನ್ನೊಬ್ಬರ ಮಾತಿಗೆ ಮರುಳಾಗಿ ನಿಮ್ಮ ದೀರ್ಘಕಾಲದ ಯೋಜನೆ ಬದಲಿಸಬೇಡಿ.
ಇದನ್ನೂ ಓದಿ: ನವೆಂಬರ್ ತಿಂಗಳ ಮಾಸಿಕ ರಾಶಿಫಲ: ತುಲಾ, ಧನು ರಾಶಿಗೆ ಅದೃಷ್ಟದ ಬಾಗಿಲು ಓಪನ್; ನಿಮ್ಮ ರಾಶಿಗೆ ಈ ತಿಂಗಳು ಶುಭವೋ? ಅಶುಭವೋ?
ಮಿಥುನ ರಾಶಿ : ನಿಮ್ಮ ಆಲೋಚನೆಗಳು ಇತರರಿಗಿಂತ ಭಿನ್ನವಾಗಿರುವುದರಿಂದ ವಿಶೇಷ ಗಮನ ಸೆಳೆಯಬಹುದು. ಪುಸ್ತಕ, ಬರವಣಿಗೆ, ಭಾಷೆ, ಸಂಶೋಧನೆ ಅಥವಾ ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಹೊಸ ಗುರುತಿನ ಸಾಧ್ಯತೆಯಿದೆ. ಹಳೆಯ ಸ್ನೇಹಿತನೊಬ್ಬ ನಿಮ್ಮ ಪ್ರತಿಭೆಗೆ ವೇದಿಕೆ ಕಲ್ಪಿಸಬಹುದು. ಸಾರ್ವಜನಿಕ ಚರ್ಚೆಗಳಲ್ಲಿ ನಿಮ್ಮ ಮಾತುಗಳಿಗೆ ಪ್ರಾಮುಖ್ಯತೆ ದೊರೆಯಬಹುದು. ಆದರೆ ಅಪೂರ್ಣ ಮಾಹಿತಿಯ ಆಧಾರದಲ್ಲಿ ಯಾರ ಬಗ್ಗೆಯೂ ತೀರ್ಮಾನಿಸಬೇಡಿ.
ಕರ್ಕಾಟಕ ರಾಶಿ : ಕುಟುಂಬದ ಹಳೆಯ ರಹಸ್ಯವೊಂದು ಅಥವಾ ಬಹುಕಾಲದಿಂದ ಚರ್ಚೆಯಾಗದ ವಿಷಯವೊಂದು ಮತ್ತೆ ಮುನ್ನೆಲೆಗೆ ಬರಬಹುದು. ನಿಮ್ಮ ಸಲಹೆಗಾಗಿ ಬಂಧುಗಳು ನಿಮ್ಮನ್ನು ಸಂಪರ್ಕಿಸಬಹುದು. ಭೂಮಿ, ತೋಟ ಅಥವಾ ಕೃಷಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುವ ಯೋಚನೆ ಮೂಡಬಹುದು. ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ನಿಮ್ಮ ತಾಳ್ಮೆ ಮುಖ್ಯವಾಗಲಿದೆ. ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದೆ ತೊಂದರೆ ಕೊಡದಂತೆ ಎಚ್ಚರ ವಹಿಸಿ.
ಸಿಂಹ ರಾಶಿ : ನಿಮ್ಮ ವ್ಯಕ್ತಿತ್ವ ಮತ್ತು ನಾಯಕತ್ವದ ಗುಣಗಳು ಈ ವಾರ ಹೆಚ್ಚು ಪ್ರಕಾಶಿಸಬಹುದು. ಸಂಘಟನೆ, ಧಾರ್ಮಿಕ ಸಂಸ್ಥೆ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಗೌರವದ ಸ್ಥಾನ ದೊರೆಯುವ ಸಾಧ್ಯತೆಯಿದೆ. ನಿಮ್ಮಿಂದ ಪ್ರೇರಣೆ ಪಡೆದ ವ್ಯಕ್ತಿಯೊಬ್ಬರು ತಮ್ಮ ಸಾಧನೆಯನ್ನು ಹಂಚಿಕೊಳ್ಳಬಹುದು. ಹಳೆಯ ಸ್ಪರ್ಧೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ಬರಬಹುದು. ಆದರೆ ಹೊಗಳಿಕೆಯಿಂದ ಅತಿಯಾದ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಡಿ.
ಕನ್ಯಾ ರಾಶಿ : ನಿಮ್ಮ ಜೀವನದಲ್ಲಿ ಶಿಸ್ತು ಮತ್ತು ಸೂಕ್ಷ್ಮ ಪರಿಶೀಲನೆಯ ಮಹತ್ವ ಹೆಚ್ಚಾಗಲಿದೆ. ಹಳೆಯ ದಾಖಲೆಗಳಲ್ಲಿ ಕಂಡುಬರುವ ತಪ್ಪನ್ನು ಸರಿಪಡಿಸುವ ಮೂಲಕ ದೊಡ್ಡ ಸಮಸ್ಯೆಯನ್ನು ತಪ್ಪಿಸಬಹುದು. ಸಂಶೋಧನೆ, ಹಸ್ತಪ್ರತಿ ಅಧ್ಯಯನ, ಭಾಷಾ ತರಬೇತಿ ಮತ್ತು ವಿಶ್ಲೇಷಣಾತ್ಮಕ ಕೆಲಸಗಳಲ್ಲಿ ತೊಡಗಿರುವವರಿಗೆ ಹೊಸ ವಿಚಾರ ಹೊಳೆಯಬಹುದು. ಇತರರು ಗಮನಿಸದ ಸಣ್ಣ ಸಂಗತಿಯೇ ನಿಮ್ಮ ಯಶಸ್ಸಿಗೆ ಕಾರಣವಾಗಬಹುದು.
ತುಲಾ ರಾಶಿ : ಸಾಮಾಜಿಕ ಜೀವನದಲ್ಲಿ ನಿಮ್ಮ ಸ್ಥಾನಮಾನ ಬದಲಾಗುವ ಸೂಚನೆಗಳಿವೆ. ಹಿಂದೆ ನಿಮ್ಮನ್ನು ವಿರೋಧಿಸಿದ್ದ ವ್ಯಕ್ತಿಯೊಬ್ಬರು ನಿಮ್ಮೊಂದಿಗೆ ಸಹಕರಿಸಲು ಮುಂದೆ ಬರಬಹುದು. ಕಲಾ ಕ್ಷೇತ್ರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವ ಅವಕಾಶವಿದೆ. ಹಳೆಯ ಸ್ನೇಹವಲಯದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಆದರೆ ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವುದರಿಂದ ನಿಮ್ಮ ಸ್ವಂತ ಗುರಿ ಮರೆಯಾಗದಿರಲಿ.
ವೃಶ್ಚಿಕ ರಾಶಿ : ಗುಪ್ತವಾಗಿ ನಡೆಯುತ್ತಿದ್ದ ಒಂದು ವ್ಯವಹಾರ ಅಥವಾ ಯೋಜನೆಯ ನೈಜ ಸ್ವರೂಪ ತಿಳಿದುಬರಬಹುದು. ನಿಮ್ಮ ವಿರುದ್ಧ ನಡೆಯುತ್ತಿದ್ದ ತಪ್ಪು ಪ್ರಚಾರಕ್ಕೆ ಸಮರ್ಪಕ ಉತ್ತರ ನೀಡುವ ಸಂದರ್ಭ ಎದುರಾಗಬಹುದು. ಸಂಶೋಧನೆ, ಜ್ಯೋತಿಷ್ಯ, ಪುರಾತನ ವಿದ್ಯೆ ಮತ್ತು ರಹಸ್ಯಮಯ ವಿಷಯಗಳ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಬಹುದು. ಅಪ್ರತೀಕ್ಷಿತ ವ್ಯಕ್ತಿಯೊಬ್ಬರು ನಿಮ್ಮ ಜೀವನದ ಪ್ರಮುಖ ನಿರ್ಧಾರಕ್ಕೆ ಮಾರ್ಗದರ್ಶನ ನೀಡಬಹುದು.
ಧನು ರಾಶಿ : ನಿಮ್ಮ ಪ್ರತಿಭೆಗೆ ಹೊಸ ದಿಕ್ಕು ಸಿಗುವ ವಾರವಿದು. ಬೋಧನೆ, ಉಪನ್ಯಾಸ, ಪ್ರವಚನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಅವಕಾಶ ದೊರೆಯಬಹುದು. ದೂರದ ಪ್ರದೇಶದ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯಬಹುದು. ನಿಮ್ಮ ಅನುಭವವನ್ನು ಇತರರಿಗೆ ಹಂಚಿಕೊಳ್ಳುವ ಮೂಲಕ ಗೌರವ ಹೆಚ್ಚಿಸಿಕೊಳ್ಳುವಿರಿ. ಆದರೆ ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಅವುಗಳ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ.
ಮಕರ ರಾಶಿ : ಬಹುಕಾಲದಿಂದ ಮುಂದೂಡುತ್ತಿದ್ದ ಮಹತ್ವದ ನಿರ್ಧಾರಕ್ಕೆ ಅಂತಿಮ ರೂಪ ನೀಡುವ ಮನಸ್ಸಾಗಬಹುದು. ನಿಮ್ಮ ಕೆಲಸದ ವಿಧಾನದಲ್ಲಿ ಬದಲಾವಣೆ ತರುವ ಮೂಲಕ ಸಮಯ ಮತ್ತು ಶ್ರಮ ಉಳಿಸಿಕೊಳ್ಳಬಹುದು. ಅಧಿಕಾರಿಗಳಿಂದ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ. ಹಳೆಯ ಶತ್ರುತ್ವವನ್ನು ಕೊನೆಗೊಳಿಸುವ ಅವಕಾಶವೂ ಬರಬಹುದು. ನಿಮ್ಮ ಸಾಧನೆಗೆ ಇತರರ ಒಪ್ಪಿಗೆಯೇ ಮಾನದಂಡವಾಗದಿರಲಿ.
ಕುಂಭ ರಾಶಿ : ಸಾಮಾಜಿಕ ಸೇವೆ, ಸಂಘಟನೆ ಮತ್ತು ಹೊಸ ಚಿಂತನೆಗಳಿಗೆ ಈ ವಾರ ವಿಶೇಷ ಪ್ರಾಮುಖ್ಯತೆ ಸಿಗಬಹುದು. ಸಮಾಜದಲ್ಲಿ ಕಾಣುತ್ತಿರುವ ಸಮಸ್ಯೆಯೊಂದಕ್ಕೆ ನಿಮ್ಮದೇ ಆದ ಪರಿಹಾರ ಕಂಡುಕೊಳ್ಳುವಿರಿ. ಯುವಜನರಿಗೆ ಮಾರ್ಗದರ್ಶನ ನೀಡುವ ಅವಕಾಶ ಬರಬಹುದು. ತಂತ್ರಜ್ಞಾನ ಅಥವಾ ಹೊಸ ವಿದ್ಯಾಶಾಖೆಯ ಪರಿಚಯ ನಿಮ್ಮ ಆಸಕ್ತಿಯನ್ನು ವಿಸ್ತರಿಸಬಹುದು. ಅನಿರೀಕ್ಷಿತ ಪ್ರಯಾಣವೊಂದು ಹೊಸ ವ್ಯಕ್ತಿಗಳ ಪರಿಚಯಕ್ಕೆ ಕಾರಣವಾಗಬಹುದು.
ಮೀನ ರಾಶಿ : ಆಧ್ಯಾತ್ಮಿಕತೆ ಮತ್ತು ಜೀವನದ ಆಳವಾದ ಅರ್ಥದ ಕುರಿತು ಚಿಂತನೆ ಹೆಚ್ಚಾಗಬಹುದು. ಹಳೆಯ ಗ್ರಂಥ, ಗುರುಗಳ ಉಪದೇಶ ಅಥವಾ ಪೂರ್ವಜರ ಪರಂಪರೆಯ ಬಗ್ಗೆ ಹೊಸ ಆಸಕ್ತಿ ಮೂಡಬಹುದು. ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವ ಅವಕಾಶ ಬರಬಹುದು. ನಿಮ್ಮ ಮೌನ ಮತ್ತು ಸಹನೆಯ ಹಿಂದಿರುವ ಸಾಮರ್ಥ್ಯವನ್ನು ಯಾರಾದರೂ ಗುರುತಿಸಬಹುದು. ಆದರೆ ಇತರರ ಸಮಸ್ಯೆಗಳನ್ನು ಪರಿಹರಿಸುವ ಭರದಲ್ಲಿ ನಿಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ಮರೆಯಬೇಡಿ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




