AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಶಿಕ್ಷಕ ಹುದ್ದೆ ತೊರೆದ ಈ ವ್ಯಕ್ತಿಗೆ ಕೃಷಿಯೇ ಪ್ರಯೋಗ, ಅದುವೇ ಪಾಠಶಾಲೆ; ಯಶಸ್ವಿ ಕೃಷಿ ಬದುಕು ಇಲ್ಲಿದೆ

Kolar Farmer: ಬೋರ್ ವೆಲ್ ಕೂಡಾ ಹಾಕಿಸದೆ ಕೇವಲ ಮಳೆ ನೀರಿನಲ್ಲೇ ಕೃಷಿ ಮಾಡುತ್ತಾ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ. ಇವರ ಕೃಷಿಯನ್ನು ನೋಡಲು ಬೇರೆ ಬೇರೆ ಕಡೆಯಿಂದಲೂ ರೈತರು ಬಂದು, ಸುರೇಶ್​ ಬಾಬು ಅವರ ಬಳಿ ತರಬೇತಿ ಪಡೆದು ಹೋಗುತ್ತಾರೆ.

ಶಾಲಾ ಶಿಕ್ಷಕ ಹುದ್ದೆ ತೊರೆದ ಈ ವ್ಯಕ್ತಿಗೆ ಕೃಷಿಯೇ ಪ್ರಯೋಗ, ಅದುವೇ ಪಾಠಶಾಲೆ; ಯಶಸ್ವಿ ಕೃಷಿ ಬದುಕು ಇಲ್ಲಿದೆ
ಕೋಲಾರದ ರೈತ ಶಿಕ್ಷಕ!
TV9 Web
| Updated By: ganapathi bhat|

Updated on: Aug 02, 2021 | 8:12 PM

Share

ಕೋಲಾರ: ಅವರು ಕೈತುಂಬಾ ಸಂಬಳ‌ ತೆಗೆದುಕೊಂಡು ಶಿಕ್ಷಕ ವೃತ್ತಿ ಮಾಡುತ್ತಿದ್ದವರು. ಆದರೆ ತನ್ನ ವೃತ್ತಿಯಲ್ಲಿ ಸಮಾಧಾನ ಕಾಣದ ಶಿಕ್ಷಕರು ಕೈತುಂಬಾ ಸಂಬಳ ಬರುತ್ತಿದ್ದ ತಮ್ಮ ವೃತ್ತಿ ತ್ಯಜಿಸಿ, ಕೃಷಿಯ ಕಡೆಗೆ ಒಲವು ತೋರಿ, ತಮ್ಮ ಜಮೀನಿನಲ್ಲಿ ಕೃಷಿ ಆರಂಭಿಸಿದ್ದಾರೆ. ಅದರಲ್ಲೇ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಯಶಸ್ಸ ಹತ್ತಾರು ಜನರಿಗೆ ಪಾಠ ಮಾಡಲು ತೊಡಗಿದ್ದಾರೆ.

ನಾಲ್ಕು ಎಕರೆಯಲ್ಲಿ ಸಮಗ್ರ ಹಾಗೂ ಸಮೃದ್ದ ಲೆಕ್ಕಾಚಾರದ ಕೃಷಿ ಅಳೆದು ತೂಗಿ ಲೆಕ್ಕಾಚಾರ ಮಾಡಿ ನಿರ್ಮಾಣ ಮಾಡಿರುವ ಕುರಿ ಶೆಡ್, ಅದರ ಕೆಳಗಡೆಯೇ ಆಟವಾಡಿಕೊಂಡು ಇರುವ ನಾಟಿ ಕೋಳಿಗಳು, ಮತ್ತೊಂದೆಡೆ ಜೇನು ಕೃಷಿಯ ಬಾಕ್ಸ್ ಗಳು ಮುಂದೆ ಹೋದರೆ ಸುಂದರವನದಂತೆ ಗೋಚರಿಸುತ್ತಿರುವ ಹೆಬ್ಬೇವಿನ ತೋಟ. ಇಂಥಹ ದೃಶ್ಯವನ್ನು ನೀವು ಕೋಲಾರ ತಾಲೂಕಿನ ನೆರ್ನಹಳ್ಳಿ ಗ್ರಾಮದ ಸುರೇಶ್ ಬಾಬು ಹಾಗೂ ನರಸಿಂಹ ಎಂಬ ಸೋದರರ ಗ್ರೀನ್ ವುಡ್ ಫಾರಂನಲ್ಲಿ ಕಾಣಬಹುದು. ಇವರು ತಮ್ಮ 4 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೇಸಾಯವನ್ನು ಮಾಡಿ ಸೈ ಎನಿಸಿಕೊಳ್ಳುವ ಜೊತೆಗೆ ಕಡಿಮೆ‌ ಹಣದಲ್ಲಿ‌ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.

ಶಿಕ್ಷಕ ವೃತ್ತಿಗೆ ಗುಡ್​ಬೈ ಹೇಳಿ ಕೃಷಿಯಲ್ಲಿ ಪ್ರಯೋಗ! ಸುರೇಶ್ ಬಾಬು, ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ 10 ವರ್ಷ ಹಾಗೂ ಮೈಸೂರಿನಲ್ಲಿ ಮತ್ತು ಭಾಗೇಪಲ್ಲಿಯಲ್ಲಿ ಕೆಲಕಾಲ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಇವರಿಗೆ ವೃತ್ತಿಯಲ್ಲಿ ಸಂತೃಪ್ತಿ ಸಿಗದ ಕಾರಣ ಆ ಉದ್ಯೋಗಕ್ಕೆ ವಿದಾಯ ಹೇಳಿ, ತಮ್ಮ ಗ್ರಾಮದದತ್ತ ಹೆಜ್ಜೆ‌ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಯಶಸ್ವಿ ರೈತ ನಾಗಿದ್ದಾರೆ.‌

ತನಗಿರುವ 4 ಎಕರೆ ಜಮೀನಿನಲ್ಲಿ ಅರ್ಧ ಎಕರೆ ಕುರಿ ಸಾಕಾಣಿಕೆ ಶೆಡ್ ಮತ್ತು ಅದರ ಕೆಳಗೆ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಫೈಟರ್ ಹುಂಜಗಳನ್ನು ಸಾಕುತ್ತಿದ್ದು ಇದಕ್ಕೆ ಅವರ ತಮ್ಮ ಸಹ ಕೈ ಜೋಡಿಸಿದ್ದಾರೆ. ಅದರಿಂದ, ವರ್ಷಕ್ಕೆ 8 ರಿಂದ 10 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಬೋರ್ ವೆಲ್ ಕೂಡಾ ಹಾಕಿಸದೆ ಕೇವಲ ಮಳೆ ನೀರಿನಲ್ಲೇ ಕೃಷಿ ಮಾಡುತ್ತಾ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ. ಇವರ ಕೃಷಿಯನ್ನು ನೋಡಲು ಬೇರೆ ಬೇರೆ ಕಡೆಯಿಂದಲೂ ರೈತರು ಬಂದು, ಸುರೇಶ್​ ಬಾಬು ಅವರ ಬಳಿ ತರಬೇತಿ ಪಡೆದು ಹೋಗುತ್ತಾರೆ.

Sheep Kolar Farmer

ಕುರಿ ಸಾಕಾಣಿಕೆ

ಒಂದಲ್ಲ ಎರಡಲ್ಲಾ ಹತ್ತಾರು ಪ್ರಯೋಗ ಮಾಡಿ ನಷ್ಟದಿಂದ ಪಾರು ಸುರೇಶ್‌ಬಾಬು 4 ಎಕರೆಯಲ್ಲಿ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಪೈಟರ್ ಹುಂಜುಗಳ ಸಾಕಾಣಿಕೆ, ಮೀನು‌ ಸಾಕಾಣಿಕೆ‌, ಹೆಬ್ಬೇವು, ಶ್ರೀಗಂಧ, ರಕ್ತಚಂಧನ ಹೀಗೆ‌ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ತನ್ನ ಜಮೀನನ್ನು ಒಂದು ಪ್ರಯೋಗ‌ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಕುರಿ ಸಾಕಾಣಿಕೆಯನ್ನು ಹೈಟೆಕ್ ಮಾಡಿರುವ ಇವರು ಕೇವಲ ಟಗರುಗಳನ್ನು ಮಾತ್ರ ಸಾಕಾಣಿಕೆ‌ ಮಾಡುತ್ತಿದ್ದಾರೆ. ಇವುಗಳನ್ನು ಚಿತ್ರದುರ್ಗ, ಮೈಸೂರಿನ ಕಿರಗವಲ್ಲು, ಬನ್ನೂರು ಹಾಗೂ‌ ಆಂಧ್ರಪ್ರದೇಶ ಪೆನ್ನಕೊಂಡ ಗ್ರಾಮಗಳಿಂದ ತಂದು ಸಾಕಾಣಿಕೆ ಮಾಡುತ್ತಿದ್ದಾರೆ.

Suresh Babu Kolar Farmer

ರೈತ ಶಿಕ್ಷಕ ಸುರೇಶ್ ಬಾಬು

ಜೊತೆಗೆ ಕುರಿ ಮತ್ತು ಕೋಳಿಗಳಿಗೆ ಬೇಕಾಗಿರುವ ಹೆಬ್ಬೇವು, ಸುಬಾಬುಲ್ಲ, ಅಜೋಲಾವನ್ನು ಇವರೇ ಬೆಳೆದುಕೊಳ್ಳುವುದರಿಂದ ಮೇವಿನ ಸಮಸ್ಯೆ ಇಲ್ಲ. ಇನ್ನು ಉತ್ತಮ ತಳಿಯ ಟಗರುಗಳು, ಪೈಟರ್ ಹುಂಜಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ.

Kolar Farmer Hen

ಕೋಳಿ ಸಾಕಾಣಿಕೆ

ಈ ಕೆಲಸಗಳಿಂದ ನಾವು ನೆಮ್ಮದಿಯ ಜೀವನ ಕಂಡುಕೊಳ್ಳಬಹುದು. ಖಾಸಗಿ‌ ಉದ್ಯೋಗಕ್ಕಿಂತ, ಭೂಮಿಯನ್ನು‌ ನಂಬಿದರೆ ಯಾವುದೇ ಮೋಸವಿಲ್ಲ ಎನ್ನುವುದು ‌ರೈತ ನರಸಿಂಹ ಅವರ ಮಾತು. ಒಟ್ಟಾರೆ ಖಾಸಗಿ ಉದ್ಯೋಗ ತೊರೆದು ಉಪನ್ಯಾಸಕನ ಕುಟುಂಬ ನಾವು ಮಾಡುವ ಕೆಲಸ ಯಾವುದೇ ಇರಲಿ ಅದರಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ‌ಕಾಣಬಹುದು ಅನ್ನುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ: ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಲ್ಲದ ಅಕ್ರಮ; ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿರುದ್ಧ ಆರೋಪ

ಕೋಲಾರ: ಲಾಕ್​ಡೌನ್​ನಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳ

(Agriculture Enthusiast Teacher who turned out as Farmer Success Story from Kolar)