ತೂಗುವ ಬಂಡೆಯಲ್ಲಿ ನಿಮ್ಮದೊಂದು ದಾಖಲೆ ಬರೆಯಿರಿ; ಇದು ಪ್ರಕೃತಿ ನಿರ್ಮಿತ ವಿಸ್ಮಯ, ಇಲ್ಲಿ ಗಾಳಿಯಲ್ಲಿ ತೂಗುತ್ತೆ ಬೃಹತ್ ಬಂಡೆ
ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ತೇರಹಳ್ಳಿ ಬೆಟ್ಟವೊಂದಿದೆ, ಈ ಬೆಟ್ಟದಲ್ಲಿ ಒಂದಲ್ಲಾ, ಎರಡಲ್ಲಾ ಸಾವಿರಾರು ಬೃಹತ್ ಬಂಡೆಗಳಿವೆ. ಆದ್ರೆ ಇಂತಹ ವಿಸ್ಮಯ ಬಂಡೆ ಇರುವ ಬಗ್ಗೆ ಇಲ್ಲಿನ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಇದು ಬೆಳಕಿಗೆ ಬಂದದ್ದೇ ಅನಿರೀಕ್ಷಿತವಾಗಿ. ಅಷ್ಟಕ್ಕೂ ಅಂಥಾದೊಂದು ವಿಸ್ಮಯ ಇರೋದು ತೇರಹಳ್ಳಿ ಬೆಟ್ಟದ ತುದಿಯಲ್ಲಿ.
ಕೋಲಾರ: ತ್ರೇತಾಯುಗದಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತೊಯ್ದನಂತೆ, ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದನಂತೆ, ಕಲಿಯುಗದಲ್ಲಿ ನಾವೇನು ಸಾಧನೆ ಮಾಡಲಾಗಿಲ್ಲ ಅನ್ನೋ ಬೇಸರ ನಿಮ್ಮಲ್ಲಿದ್ದರೆ ಅದರ ಪರಿಹಾರಕ್ಕೆ ಕಲಿಯುಗದಲ್ಲಿ ನಿಮಗೊಂದು ಅದ್ಭುತ ಅವಕಾಶವಿದೆ. ನೀವು ಕೂಡಾ ಅದೊಂದು ಬೆಟ್ಟದ ಮೇಲೆ ನಿಮ್ಮದೂ ಒಂದು ದಾಖಲೆ ಬರೆಯಬಹುದು.
ನಾವು ಚಿಕ್ಕ ಮಕ್ಕಳಾಗಿದ್ದಾಗ ಅಜ್ಜ-ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ದೇವತೆಗಳು, ರಾಕ್ಷಸರು, ಬೃಹತ್ ಬಂಡೆಗಳನ್ನು ಎತ್ತೆಸೆಯುತ್ತಿದ್ದರು ಅನ್ನೋದನ್ನ ಕೇಳಿದ್ದೇವೆ. ಅದು ಇವತ್ತಿನ ದಿನಕ್ಕೆ ನಮಗೆ ಅದೊಂದು ಕಲ್ಪನೆ ಎನ್ನಿಸಬಹುದು. ಆದರೆ ಅಂತಹದೊಂದು ಅದ್ಭುತ ಕಲ್ಪನೆಯನ್ನು ನಿಜವಾಗಿಸಬಲ್ಲ ಪ್ರಕೃತಿಯ ವಿಸ್ಮಯವೊಂದರ ಕುರಿತು ತಿಳಿಸಿಕೊಡುತ್ತೇವೆ. ನಿಮ್ಮ ಕಲ್ಪನೆಗೂ ನಿಲುಕದ ಬೃಹತ್ ಬಂಡೆಯೊಂದನ್ನು ನೀವು ಒಬ್ಬರೇ ಬೇಕಾದ್ರೆ ಅಲ್ಲಾಡಿಸಬಹುದು. ನೂರಾರು ಟನ್ ತೂಕದ ಬಂಡೆಯನ್ನು ಅಲ್ಲಾಡಿಸೋದು ಅಸಾಧ್ಯದ ಮಾತು ಅನ್ನಿಸುತ್ತೆ, ಆದ್ರೆ ಇಲ್ಲಿ ಅಂತಹ ಕುತೂಹಲದ ಮಧ್ಯೆ ಪ್ರಕೃತಿ ವಿಸ್ಮಯಗಳನ್ನು ನೋಡಬಹುದಾಗಿದೆ. ಇಂತಹ ಅತ್ಯದ್ಬುತವಾದ ಬಂಡೆ ಇರೋದು ಕೋಲಾರದ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ತೇರಹಳ್ಳಿ ಬೆಟ್ಟದಲ್ಲಿ.
ತೇರಹಳ್ಳಿ ಬೆಟ್ಟದಲ್ಲಿದೆ ಅದ್ಭುತ ಹಾಗೂ ಪ್ರಕೃತಿ ವಿಸ್ಮಯದ ಬಂಡೆ ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ತೇರಹಳ್ಳಿ ಬೆಟ್ಟವೊಂದಿದೆ, ಈ ಬೆಟ್ಟದಲ್ಲಿ ಒಂದಲ್ಲಾ, ಎರಡಲ್ಲಾ ಸಾವಿರಾರು ಬೃಹತ್ ಬಂಡೆಗಳಿವೆ. ಆದ್ರೆ ಇಂತಹ ವಿಸ್ಮಯ ಬಂಡೆ ಇರುವ ಬಗ್ಗೆ ಇಲ್ಲಿನ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಇದು ಬೆಳಕಿಗೆ ಬಂದದ್ದೇ ಅನಿರೀಕ್ಷಿತವಾಗಿ. ಅಷ್ಟಕ್ಕೂ ಅಂಥಾದೊಂದು ವಿಸ್ಮಯ ಇರೋದು ತೇರಹಳ್ಳಿ ಬೆಟ್ಟದ ತುದಿಯಲ್ಲಿ. ತೇರಹಳ್ಳಿ ಬೆಟ್ಟದ ಮೇಲೆ ಸ್ವಲ್ಪ ದೂರ ಬೈಕ್‌ಗಳಲ್ಲಿ ಹೋಗಿ ನಂತರ ಬೆಟ್ಟವನ್ನು ನಡೆದೇ ಹತ್ತಬೇಕು. ಬೆಟ್ಟವನ್ನೇರಿ ಸ್ವಲ್ಪದೂರ ನಡೆದು ಸಾಗಿದ್ರೆ ಕಿರಿದಾದ ಕಲ್ಲು ಮುಳ್ಳುಗಳ ರಸ್ತೆಯಲ್ಲಿ ಕಾಡಿನಂತ ಪ್ರದೇಶದಲ್ಲಿ ವಿಸ್ಮಯಕಾರಿ ಹಾಗೂ ಚಮತ್ಕಾರಿಯಾದ ಬೃಹತ್ ಬಂಡೆ ಸಿಗುತ್ತೆ. ಅದರ ಜೊತೆಗೆ ಬೆಟ್ಟದ ಮೇಲೆ ಸುಂದರ ಕಲ್ಪನಾ ಲೋಕದ ಪ್ರಕೃತಿ ಸೌಂದರ್ಯ ಕಣಜವೇ ಇದೆ. ಅಲ್ಲಿಯೇ ಈ ವಿಸ್ಮಯಕಾರಿ ಬಂಡೆ ಇದ್ದು, ಬೃಹತ್ ಬಂಡೆಯನ್ನು ನೋಡಿದ್ರೆ ಕುತೂಹಲ ಜಾಸ್ತಿಯಾಗುತ್ತಲೇ ಹೋಗುತ್ತೆ.
ನೀವೊಬ್ಬರೇ ಬೃಹತ್ ಬಂಡೆಯನ್ನು ಅಲ್ಲಾಡಿಸಬಹುದು ಇನ್ನು ಸ್ವಲ್ಪ ಐಸಾ, ಇನ್ನು ಜೋರಾಗಿ ಐಸಾ ಅಂತ ಒಮ್ಮೆ ಧಮ್ಮು ಕಟ್ಟಿ ಕೈ ಹಾಕಿದ್ರೆ ಆ ಬಂಡೆ ನಿಧಾನವಾಗಿ ಅಲುಗಾಡಲು ಆರಂಭಿಸುತ್ತದೆ. ನಿಜಕ್ಕೂ ನನ್ನ ತೋಳಲ್ಲಿ ಇಷ್ಟೋಂದು ಶಕ್ತಿ ಇದೆಯಾ ಅನ್ನೋ ಅನುಮಾನ ನಮಗೆ ಕಾಡುತ್ತೆ. ಆದ್ರು ನೂರಾರು ಟನ್ ತೂಕದ ಬಂಡೆಯನ್ನು ಅಲುಗಾಡಿಸಿದ್ರೆ ನಮ್ಮ ಮೇಲೆ ನಮಗೆ ಹುಮ್ಮಸ್ಸಿನ ಅನುಭವ. ಇದು ಕೆಲ ವರ್ಷಗಳ ಹಿಂದೆಯಷ್ಟೆ ಸ್ಥಳೀಯರ ಕಣ್ಣಿಗೆ ಕಂಡಿದ್ದು, ಇದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನಿಜಕ್ಕೂ ಈ ಪ್ರಕೃತಿ ವಿಸ್ಮಯ ಕಣ್ತುಂಬಿಕೊಳ್ಳಲು ದೂರದೂರಗಳಿಂದ ಜನರು ಬರುತ್ತಾರೆ. ಬೆಟ್ಟದ ತುದಿಯಲ್ಲಿ ಯಾವುದೋ ಒಂದು ಗ್ರಿಪ್ ನಿಂದ ಕುಳಿತಿರುವ ಸುಮಾರು ನೂರಾರು ಟನ್ ತೂಕದ ಬೃಹತ್ ಬಂಡೆ ಅಲ್ಲಾಡುತ್ತದೆ. ಇಲ್ಲಿನ ಸ್ಥಳೀಯರಿಗೂ ಇದೊಂದು ಅಚ್ಚರಿಯಾಗಿದ್ದು, ಈ ಭಾಗದಲ್ಲಿ ಸಾಕಷ್ಟು ಗುಹೆಗಳು, ನೀರು ನಿಲ್ಲುವ ಹಳ್ಳಗಳು ಅದ್ಬುತವಾಗಿವೆ. ಇನ್ನೂ ಬೆಟ್ಟಕ್ಕೆ ಬರುವ ಪ್ರವಾಸಿಗರು ಇಲ್ಲಿಗೆ ಬಂದು ಈ ತೂಗು ಬಂಡೆಯನ್ನ ನೋಡಿ ಖುಷಿ ಪಡುತ್ತಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ನಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಯೋಧರು; ವಿಡಿಯೋ ಇಲ್ಲಿದೆ