AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವಿನ ಮರಗಳು ಹೂಬಿಡಲಾರಂಭಿಸಿರುವುದರಿಂದ ಫಸಲು ಹಾಳಾಗಾದಂತೆ ಕಾಪಾಡಿಕೊಳ್ಳಲು ಬೆಳೆಗಾರರು ಈ ಕ್ರಮಗಳನ್ನು ಅನುಸರಿಸಬೇಕು

ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ರವರೆಗೆ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿತ್ತು. ಇದೇ ತೇವಾಂಶ ಈ ವರ್ಷದ ಫಸಲಿನ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

ಮಾವಿನ ಮರಗಳು ಹೂಬಿಡಲಾರಂಭಿಸಿರುವುದರಿಂದ ಫಸಲು ಹಾಳಾಗಾದಂತೆ ಕಾಪಾಡಿಕೊಳ್ಳಲು ಬೆಳೆಗಾರರು ಈ ಕ್ರಮಗಳನ್ನು ಅನುಸರಿಸಬೇಕು
ಹೂಬಿಟ್ಟಿರುವ ಮಾವಿನ ಮರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 05, 2022 | 7:04 PM

Share

ಕರ್ನಾಟಕದ ಮಾವಿನ ತವರು ಕೋಲಾರ ಜಿಲ್ಲೆಯ (Kolar district) ಬೇರೆ ಭಾಗಗಳು ಸೇರಿದಂತೆತ ಸೇರಿದಂತೆ ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ಮಾವಿನ ಗಿಡಗಳು ಹೂವು ಬಿಡಲಾರಂಬಿಸಿವೆ. ಮಾವು ಬೆಳೆಗಾರರು ಹೂವನ್ನು ಸಂರಕ್ಷಿಸಿಕೊಳ್ಳಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು (precautionary measures) ತೆಗೆದುಕೊಂಡರೆ ಈ ವರ್ಷದ ಹಂಗಾಮಿನಲ್ಲಿ ಉತ್ತಮ ಇಳುವರಿ ಪಡೆಯಬಹುದು. ಕಳೆದ ವರ್ಷದ ಸುರಿದ ಅಕಾಲಿಕ (untimely) ಮಳೆಯಿಂದ ಮಾವು ಬೆಳೆಗಾರರು ತೀವ್ರ ತೊಂದರೆ ಅನುಭವಿಸಿದ್ದು, ಈ ಬಾರಿ ಬೆಳೆಗಾರರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ ಪುನಃ ನಷ್ಟ ಅನುಭವಿಸುವ ಸ್ಥಿತಿ ಎದುರಾಗಬಹುದು. ಹಾಗಾಗಿ ಹೂವು ಬಿಡುವ ಸಮಯದಲ್ಲಿ ಅವುಗಳಿಗೆ ಯಾವುದೇ ರೋಗ ತಗುಲದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಂತೆ ಮಾವು ಹೂ ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಬೆಳೆಗಾರರು ಸಸ್ಯ ಸಂರಕ್ಷಣೆಯ ಪೂರಕ ಕ್ರಮಗಳಿಗೆ ಮುಂದಾಗಬೇಕಿದೆ ಎಂದು ಕೋಲಾರ ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ರವರೆಗೆ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿತ್ತು. ಇದೇ ತೇವಾಂಶ ಈ ವರ್ಷದ ಫಸಲಿನ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. 2022ನೇ ಮಾವು ಹಂಗಾಮು ಇಳಿ ಹಂಗಾಮು ಫಸಲಾಗಿರುವ ಸಾಧ್ಯತೆಯಿದ್ದು, ಪ್ರಸ್ತುತ ಮಾವಿನ ಗಿಡಮರಗಳು ದಟ್ಟ ಹಸಿರು ಬಣ್ಣದ ಎಲೆಗಳಿಂದ ಕೂಡಿವೆ. ಜಿಲ್ಲೆಯಾದ್ಯಂತ ಈಗಾಗಲೇ 20ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಮರಗಳು ಹೂವು ಬಿಟ್ಟಿದ್ದು, ಹೂವಿನ ಸಂರಕ್ಷಣೆ ಅತ್ಯಗತ್ಯವಾಗಿದೆ.

ಹೂವಿನ ರಕ್ಷಣೆಗೆ ಎರಡು ಬಾರಿ ಔಷದಿಯ ಸಿಂಪಡಣೆ ಅಗತ್ಯ..!

ಮೊದಲ ಸಿಂಪಡಣೆ: ಹೂ ಬಿಡುವ ಸಂದರ್ಭದಲ್ಲಿ ಮತ್ತು ಹೂತೆನೆ ಚಿಗುರೊಡೆಯುವ ಹಂತದಲ್ಲಿ ಹೂವಿಗೆ ಜಿಗಿಹುಳು, ಹೂತೆನೆ ಬುಡ ಕೊರಕ, ಥ್ರಿಪ್ಸ್, ನುಸಿ, ಬೂದಿರೋಗ, ಕಾಡಿಗೆ ರೋಗದ ಶೇಷ, ಚಿಬ್ಬು ರೋಗ, ಹಿಟ್ಟು ತಿಗಣೆ, ಓಟೆ ಕೊರಕ ಮುಂತಾದ ರೋಗಗಳಿಗೆ ಥೈಯೋಮೆಥೋಕ್ಸಾಮ್ ಹಾಗೂ ನೀರಿನಲ್ಲಿ ಕರಗುವ ಗಂಧಕ ಅಥವಾ ಇಮಿಡಾಕ್ಲೋಪ್ರಿಡ್ ಹಾಗೂ ನೀರಲ್ಲಿ ಕರಗುವ ಗಂಧಕ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ ಹಾಗೂ ನೀರಲ್ಲಿ ಕರಗುವ ಗಂಧಕ ಅಥವಾ ಆಸಿಫೇಟ್ ಹಾಗೂ ನೀರಲ್ಲಿ ಕರಗುವ ಗಂಧಕ ಔಷಧಗಳನ್ನು ಸಿಂಪಡಣೆ ಮಾಡಬೇಕು.

ಹೀಗೆ ಮಾಡುವುದರಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವ ಹಂತ ಕುಂಠಿತಗೊಂಡು ಇಳುವರಿಗೆ ಕಡಿಮೆಯಾಗುತ್ತದೆ. ಮೊದಲ ಹಂತದ ಸಿಂಪಡಣೆಯಾದ 15-20 ದಿನಗಳ ನಂತರ ಎರಡನೇ ಸಿಂಪಡಣೆಯನ್ನು ಕೈಗೊಳ್ಳಬೇಕು ಅನ್ನೋದು ತಜ್ಞರು ಸಲಹೆ.

ಎರಡನೇ ಸಿಂಪಡಣೆ: ಹೂತೆನೆ ಹೊರಡುವ ಹಾಗೂ ಹೂ ಅರಳುವ ಹಂತದಲ್ಲಿ ಜಿಗಿ ಹುಳು, ಥ್ರಿಪ್ಸ್, ಬೂದಿ ರೋಗ, ಹೂತೆನೆ ಒಣಗುವ ರೋಗ ಬರುವ ಸಾಧ್ಯತೆಯಿರುತ್ತದೆ. ರೋಗ ತಡೆಗಾಗಿ ಡೆಲ್ಟಾಮೆಥ್ರಿನ್ ಹಾಗೂ ಹೆಕ್ಸಕೊನಜೋಲ್ ಅಥವಾ ಬೂಪ್ರೊಪೆಜಿನ್ ಹಾಗೂ ಥಯೋಪನೈಟ್ ಮಿಥೈಲ್ ಅಥವಾ ಡಯಾಫೆಂತಿಯುರಾನ್ ಹಾಗೂ ಡೈಫೆಂಕೊನಜಾಲ್ ಅಥವಾ ಅಜಾದರ‍್ಯಾಕ್ಟಿನ್ ಹಾಗೂ ಡೈಫೆಂಕೊನಜಾಲ್ ಅಥವಾ ಮೆಲಾಥಿಯಾನ್ ಹಾಗೂ ಹೈಕ್ಸಕೊನಜೋಲ್ ಅಥವಾ ಇಂಡಾಕ್ಸಕಾರ್ಬ್ ಹಾಗೂ ಟೆಬೂಕೋನಜಾಲ್ ಅಥವಾ ಬೂಪ್ರೊಪೆಜಿನ್ ಹಾಗೂ ಟ್ರೆಫ್ಲಾಕ್ಸಿಸ್ಟೊಬಿನ್‌ ಮೊದಲಾಲದವುಗಳನ್ನು ಇಲಾಖೆ ಅಧಿಕಾರಿಗಳು ಸೂಚಿಸುವ ಹಾಗೆ ಸಿಂಪಡಣೆ ಮಾಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರ ಸಿಂಪರಣೆ ಮಾಡಬೇಕು.

ಮೇಲ್ಕಂಡ ಎರಡು ಹಂತದಲ್ಲಿ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ ಶಾಂಪೂ ಅಥವಾ ಅಂಟನ್ನು ಬೆರೆಸಿ ಸಿಂಪಡಿಸಬೇಕು. ಇದರಿಂದ ಸಿಂಪಡಿಸಿದ ದ್ರಾವಣ ಎಲೆ ಹೂಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ ಎಂದು ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ. ತೋಟಗಾರಿಕಾ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಸಿಂಪಡಣೆ ಕ್ರಮಗಳನ್ನು ಅನುಸರಿಸಿದರೆ, ರೈತರು ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.

ಮಾವು ಬೆಳೆಗಾರರು ಕೈಗೊಳ್ಳಬೇಕಾದ ಇತರ ಮುಂಜಾಗ್ರತಾ ಕ್ರಮಗಳು

ಹೂ ಬಿಟ್ಟಾಗ, ಪರಾಗ ಸ್ಪರ್ಷದ ಸಮಯದಲ್ಲಿ ಗಂಧಕ ಸಿಂಪಡಿಸುವುದರಿಂದ ಸ್ಪರ್ಷ ಕ್ರಿಯೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂ, ಎಳೆಯ ಕಚ್ಚಿದ ಕಾಯಿಗೆ ಹಾನಿಯಾಗುತ್ತದೆ.

ಪರಾಗ ಸ್ಪರ್ಷ ವೇಳೆ ಗಿಡಗಳಿಗೆ ನೀರುಣಿಸಬಾರದು. ಕಾಯಿ ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬೇಕು. ಎರಡು ಮೂರು ಬಾರಿ ಪೂರಕ ನೀರಾವರಿ ಕೊಡುವುದು ಉತ್ತಮ.

ಕಾಯಿ ಕಚ್ಚಲು ಆರಂಭಿಸಿದ ನಂತರ ಕಾಯಿ ಉದುರದಂತೆ ನೋಡಿಕೊಳ್ಳಬೇಕು. ಚಿಕ್ಕಕಾಯಿಗಳು ಬೆಳೆಯುವ ಹಂತದಲ್ಲಿ ಐಎಚ್‌ಆರ್‌ಸಿ ಹೊರತಂದ ಮ್ಯಾಂಗೋ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ 50 ಗ್ರಾಂನಷ್ಟು ಕರಗಿಸಿ ಸಿಂಪಡಿಸುವುದು. ಪೊಟ್ಯಾಸ್ಸಿಯಂ ನೈಟ್ರೆಟ್ ಸಿಂಪಡಣೆಯಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸುತ್ತದೆ.

ಕೈಗೆಟುಕುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ನೇರ ಮಾರುಕಟ್ಟೆ ಸಂಪರ್ಕ ಹೊಂದಿದ ಬೆಳೆಗಾರರಿಗೆ ಇದು ಉತ್ತಮ ಕ್ರಮವಾಗಿದೆ.

ಇದನ್ನೂ ಓದಿ:   ವಾತಾವರಣದ ಏರುಪೇರು ಹಾಗೂ ಕೀಟಬಾಧೆ; ಕೋಲಾರದ ಮಾವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ವರದಿ: ರಾಜೇಂದ್ರ ಸಿಂಹ, ಕೋಲಾರ