ಗುತ್ತಿಗೆದಾರರ ಸಂಘ ಎನ್ನುವುದು ಬಿಟ್ಟು ಕಾಂಗ್ರೆಸ್ ಕಚೇರಿ ಮಾಡಲಿ: ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ವಾಗ್ದಾಳಿ
ಕೋಲಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40% ಕಮಿಷನ್ ಆರೋಪಕ್ಕೆ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ: ಗುತ್ತಿಗೆದಾರರ ಸಂಘದಿಂದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಚಿವ ಮುನಿರತ್ನ ಹರಿಹಾಯ್ದಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಷ್ಟು ಕಾಮಗಾರಿ ಮಾಡಿದ್ದಾರೆ. ಅವರು ಮಾಡಿರುವ ಕೆಲಸ ತೋರಿಸಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿ ಕೆಂಪಣ್ಣ ನಡೆದುಕೊಳ್ಳುತ್ತಿದ್ದು, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆಯೇ ಮಾತನಾಡುವುದಿಲ್ಲ. ಇದೀಗ ಗುತ್ತಿಗೆದಾರರ ಅಸೋಸಿಯೇಷನ್ ಬ್ಯಾಂಕ್ನ್ನೇ ಮುಚ್ಚಲಾಗಿದೆ. ಅವರಿಗೆ ಕಷ್ಟದಲ್ಲಿರುವ ಗುತ್ತಿಗೆದಾರರಿಗೆ ಏನು ಮಾಡಬೇಕೆಂಬ ಮನಸ್ಥಿತಿಯೇ ಇಲ್ಲ. ಅವರು ಗುತ್ತಿಗೆದಾರರ ಸಂಘ ಬಿಟ್ಟು ಕಾಂಗ್ರೆಸ್ ಕಚೇರಿ ಮಾಡಲಿ. ಮುಂದಿನ ದಿನಗಳಲ್ಲಿ ಕೋಲಾರಕ್ಕೆ ಮುಖ್ಯಮಂತ್ರಿಗಳೇ ಬಂದು ಜನರ ಸಮಸ್ಯೆಯನ್ನ ಕೇಳುತ್ತಾರೆ. ಮುಂಬರುವ ಚುನಾವಣೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ವಿರುದ್ದ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ
ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಬಳಿಕ MLAಗಳಿಗೆ 10 ಪರ್ಸೆಂಟ್ ಕಮಿಷನ್ ಕೊಡಬೇಕು, ಮಂತ್ರಿಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್ ಕೊಡಬೇಕು ಎಂಬ ಸ್ಫೋಟಕ ಬಾಂಬ್ ಸಿಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ 40%, 50% ಕಮಿಷನ್ ವಸೂಲಿ ಆಗುತ್ತಿದ್ದು, 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್ ಹೆಚ್ಚಾಗಿದೆ. ಕಾಂಟ್ರಾಕ್ಟರ್ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್ ವಸೂಲಿ ಆಗುತ್ತಿದೆ, ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ. ಕರ್ನಾಟಕದಲ್ಲಿ 1 ಲಕ್ಷ ಮಂದಿ ಕಾಂಟ್ರಾಕ್ಟರ್ಗಳು ಇದ್ದಾರೆ. KRIDL ಗುತ್ತಿಗೆಯಲ್ಲಿ ಕೆಲಸ ಮಾಡದೇ ಹಣ ಪಡೆಯುತ್ತಿದ್ದಾರೆ, ಏಪ್ರಿಲ್ನಲ್ಲಿ 50 ಸಾವಿರ ಕಾಂಟ್ರಾಕ್ಟರ್ಗಳು ಹೋರಾಟ ಮಾಡಿದ್ದೇವೆ. ರಸ್ತೆಗಳೂ ಕಳಪೆ ಕಾಮಗಾರಿಯಿಂದ ನಿರ್ಮಾಣ ಆಗ್ತಾ ಇವೆ, 20 ರಿಂದ 25 ಸಾವಿರ ಕೋಟಿ ರಾಜಕಾರಣಿಗಳ ಜೇಬು ಸೇರ್ತಿದೆ. ಭ್ರಷ್ಟಾಚಾರದ ಬಗ್ಗೆ ಯಾರೂ ಕ್ರಮ ಕೈಗೊಳ್ತಿಲ್ಲ ಎಂದು ಕೆಂಪಣ್ಣ ಕಿಡಿಕಾರಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




