AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar News: ಮಣ್ಣಿಗೂ ಬಂತು ಚಿನ್ನದ ಬೆಲೆ; ಕೆರೆ ಮಣ್ಣನ್ನು ಬಿಡದ ಲೂಟಿಕೋರರು, ಕೈಕಟ್ಟಿ ಕುಳಿತ ಅಧಿಕಾರಿಗಳು

ಕೋಲಾರದಲ್ಲಿ ಒಂದು ಕಾಲದಲ್ಲಿ 100 ಅಡಿ ಮಣ್ಣು ಅಗೆದರೆ ಚಿನ್ನ ಸಿಗುತ್ತಿತ್ತು, ಆದರೆ, ಈಗ ಕೋಲಾರದ ಮಣ್ಣು ಸಹ ಚಿನ್ನವಾಗಿ ಬಿಟ್ಟಿದೆ. ಹೌದು ಜಿಲ್ಲೆಯ ಕೆರೆ ಮಣ್ಣನ್ನು ಬಿಡದ ಲೂಟಿಕೋರರು ಜಿಲ್ಲೆಯ ಕೆರೆಗಳಲ್ಲಿರುವ ಬಂಗಾರದ ಬೆಲೆ ಬಾಳುವ ಕೋಟ್ಯಾಂತರ ರೂಪಾಯಿ ಮಣ್ಣನ್ನ ಲೂಟಿ ಮಾಡುತ್ತಿದ್ದಾರೆ. ಏನಪ್ಪ ಇದು ಬಂಗಾರದ ಮಣ್ಣಿನ ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ.

Kolar News: ಮಣ್ಣಿಗೂ ಬಂತು ಚಿನ್ನದ ಬೆಲೆ; ಕೆರೆ ಮಣ್ಣನ್ನು ಬಿಡದ ಲೂಟಿಕೋರರು, ಕೈಕಟ್ಟಿ ಕುಳಿತ ಅಧಿಕಾರಿಗಳು
ಕೋಲಾರ ಮಣ್ಣುಲೂಟಿ
ಕಿರಣ್ ಹನುಮಂತ್​ ಮಾದಾರ್
|

Updated on: Jun 11, 2023 | 1:59 PM

Share

ಕೋಲಾರ: ಹಾಡಹಗಲೇ ಕೆರೆಯಲ್ಲಿ ಮಣ್ಣು ಬಗೆಯುತ್ತಿರುವ ಜೆಸಿಬಿಗಳು, ಕೆರೆಯ ಸ್ವರೂಪವನ್ನೇ ನಾಶ ಪಡಿಸಿ ಕೆರೆಯ ಮಣ್ಣನ್ನೇ ಲೂಟಿ ಮಾಡುತ್ತಿರುವ ಮಣ್ಣು ಮಾಫಿಯಾದವರು. ಇದೆಲ್ಲ ಕಂಡು ಬಂದಿದ್ದು, ಕೋಲಾರ(Kolar) ತಾಲೂಕಿನ ಆಲೇರಿ, ಮೂರಂಡಹಳ್ಳಿ ಹಾಗೂ ತೊಟ್ಲಿ ಗ್ರಾಮದ ಕೆರೆಗಳಲ್ಲಿ. ಹೌದು ಇತ್ತೀಚೆಗೆ ಮಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಣ್ಣಿಗೆ ಡಿಮ್ಯಾಂಡ್​ ಹೆಚ್ಚಾಗಿರುವ ಹಿನ್ನೆಲೆ ಮಣ್ಣನ್ನು ಬಿಡದ ಮಾಫಿಯಾದವರು, ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನ ತೆಗೆದು ಹಗಲು ರಾತ್ರಿ ಎನ್ನದೆ ಲಾರಿ ಟಿಪ್ಪರ್​ ಮೂಲಕ ಲೂಟಿ ಮಾಡುತ್ತಿದ್ದಾರೆ. ಒಂದೆಡೆ ಇಟ್ಟಿಗೆ ಪ್ಯಾಕ್ಟರಿಗಳವರು ಮಣ್ಣನ್ನು ಲೂಟಿ ಮಾಡಿದ್ರೆ, ಇನ್ನೂ ಕೆಲವರು ಔಷಧಿಯ ಗುಣಗಳಿರುವ ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಸೂಕ್ತವಾದ ಜೇಡಿ ಮಣ್ಣನ್ನ ಹೊರ ರಾಜ್ಯಗಳಿಗೆ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ.

ಇನ್ನು ಸ್ಥಳೀಯವಾಗಿ ರೈತರು ಮಣ್ಣನ್ನು ತಮ್ಮ ಹೊಲಗಳಿಗೆ ಬಳಸಿಕೊಳ್ಳಲು ಹೋದರೆ, ಪಂಚಾಯ್ತಿ ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ. ಅದರೆ, ಮಾಫಿಯಾದವರು ಮಣ್ಣು ಲೂಟಿ ಮಾಡಲು ಬಂದರೆ ಮಾತ್ರ ಉಸಿರೇ ತೆಗೆಯೋದಿಲ್ಲ, ಇನ್ನು ಕೆರೆಯ ಮಣ್ಣನ್ನು ತೆಗೆಯಲು ಹೋಗಿ ಕೆರೆಯ ಸ್ವರೂಪವನ್ನೇ ಹಾಳು ಮಾಡಿರುವ ಮಾಫಿಯಾದವರಿಗೆ ಕಡಿವಾಣ ಇಲ್ಲದಂತಾಗಿದೆ. ಕರೆಯಲ್ಲಿ ಇದ್ದ ನೀರನ್ನು ಹೊರ ಹಾಕಿ ಮಣ್ಣು ಲೂಟಿ ಮಾಡುತ್ತಿದ್ದಾರೆ. ಒಂದು ವೇಳೆ ತನ್ನ ಸ್ವರೂಪ ಕಳೆದು ಕೊಂಡಿರುವ ಈ ಕೆರೆಗಳಲ್ಲಿ ನೀರು ತುಂಬಿಕೊಂಡಾಗ ಪ್ರಾಣಿ ಪಕ್ಷಿಗಳು ಕೆರೆಯಲ್ಲಿ ಬಿದ್ದು ಸಾವನ್ನಪ್ಪುವ ಆತಂಕ ಕೂಡ ಇದೆ.

ಇದನ್ನೂ ಓದಿ:ಕೊಪ್ಪಳ ಗ್ರಾಮೀಣ ಬ್ಯಾಂಕ್‌ನಲ್ಲಿ ಬೃಹತ್ ದರೋಡೆ: 1 ಕೋಟಿ ರೂ. ಮೌಲ್ಯದ ನಗದು, ಆಭರಣ ಲೂಟಿ

ಕಳೆದ ಕೆಲವು ದಿನಗಳಿಂದ ಸುರಿದ ಮಳೆ ಹಾಗೂ ಕೆಸಿ ವ್ಯಾಲಿ ನೀರಿನಿಂದ ಕೆರೆಗಳು ತುಂಬಿವೆ. ದನ ಕರುಗಳು, ಪ್ರಾಣಿ ಪಕ್ಷಿಗಳು ಕುಡಿಯಲು ಇರುವ ನೀರನ್ನು ಉಳಿಸದೆ. ಮಣ್ಣು ಮಾಫಿಯಾದವರು ಕೆರೆಗಳನ್ನು ಬಗೆಯುತ್ತಿದ್ದು, ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಇನ್ನು ಕೆರೆಗಳಲ್ಲಿ ಪ್ರಪಾತದ ರೀತಿಯಲ್ಲಿ ಹಳ್ಳಗಳನ್ನು ತೆಗೆದಿರುವ ಹಿನ್ನೆಲೆ ನೀರು ಕುಡಿಯಲು, ಮೇಯಲು ಹೋದ ಪ್ರಾಣಿಗಳು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪುತ್ತಿವೆ. ಜೊತೆಗೆ ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಕೆರೆಗಳ ಸ್ವರೂಪವೇ ಹಾಳಾಗುತ್ತಿದೆ ಅನ್ನೋದು ಗ್ರಾಮಸ್ಥರ ಆರೋಪ.

ಮೊದಲೆಲ್ಲಾ ಸ್ಥಳೀಯವಾಗಿ ಇಟ್ಟಿಗೆ ಕಾರ್ಖಾನೆಯವರು, ಇಲ್ಲವೇ ರೈತರು ತಮ್ಮ ಹೊಲಗಳಿಗೆ ಮಣ್ಣು ಅಗೆಯುತ್ತಿದ್ರು, ಆದ್ರೆ, ಈಗಂತೂ ಈ ಮಣ್ಣಿಗೂ ಬೆಲೆ ಬಂದಿರುವ ಕಾರಣ ಇದನ್ನೂ ಲೂಟಿ ಮಾಡುವುದೇ ದೊಡ್ಡ ಕಾಯಕವಾಗಿದೆ. ಇನ್ನು ಮಣ್ಣು ಲೂಟಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಹಿಡಿದು, ಸಾರಿಗೆ ಇಲಾಖೆ, ಪೊಲೀಸ್​ ಇಲಾಖೆ, ಗಣಿಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೂ ದೂರು ನೀಡಲಾಗಿದ್ದು, ಅಲ್ಲದೆ ಲೋಕಾಯುಕ್ತ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಆದರೂ ಯಾರೊಬ್ಬರು ಮಣ್ಣು ಲೂಟಿ ಕೋರರಿಗೆ ಕಡಿವಾಣ ಹಾಕಿಲ್ಲ.

ಇದನ್ನೂ ಓದಿ:Bihar: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿಸಿದ ಮಹಿಳಾ ಅಧಿಕಾರಿಗೆ ಥಳಿತ

ಎಲ್ಲರೂ ಕೂಡ ಮಣ್ಣು ಲೂಟಿಕೋರರ ಹಣಕ್ಕೆ ಮರುಳಾಗಿದ್ದಾರೆ. ಕೊನೆ ಪಕ್ಷ ಅವರಿಂದ ಕನಿಷ್ಠ ರಾಜಧನ ಕಟ್ಟಿಸಿಕೊಂಡು ಅನುಮತಿ ನೀಡೋದಕ್ಕೂ ಅಧಿಕಾರಿಗಳು ಮುಂದಾಗಿಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದ್ದು, ಒಟ್ಟಾರೆ ಚಿನ್ನದ ನಾಡಲ್ಲಿ ಈಗ ಮಣ್ಣಿಗೂ ಚಿನ್ನದ ಬೆಲೆ ಬಂದಿರುವುದರಿಂದ ಮರಳು ಮಾಫಿಯಾಗಿಂತ ಹೆಚ್ಚಾಗಿ ಮಣ್ಣು ಲೂಟಿ ಜೋರಾಗಿ ನಡೆಯುತ್ತಿದ್ದು, ಜಿಲ್ಲೆಯ ಪ್ರಕೃತಿ ಸಂಪತ್ತು, ಜೀವ ವೈವಿದ್ಯ ಹಾಳಾಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಮಣ್ಣು ಲೂಟಿ ಕೋರರಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ