ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿ ಬೆಟ್ಟದಲ್ಲಿ ಮಹತ್ವದ ಬೆಳವಣಿಗೆ: ಮುಜರಾಯಿ ಸಿಬ್ಬಂದಿ ಹೊರಕ್ಕೆ, 8 ಕಟ್ಟಡಗಳಿಗೆ ಬೀಗ
ಅಂಜನಾದ್ರಿ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ ಮತ್ತು ಆಡಳಿತಾಧಿಕಾರಿ ನೇಮಕದ ಆದೇಶಗಳನ್ನು ಹೈಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ಹೊಸ ಬೆಳವಣಿಗೆ ನಡೆದಿದೆ. ವಿದ್ಯಾದಾಸ್ ಬಾಬಾ ಮುಜರಾಯಿ ಸಿಬ್ಬಂದಿಯನ್ನು ಬೆಟ್ಟದಿಂದ ಹೊರಗೆ ಕಳುಹಿಸಿ, ಗರ್ಭಗುಡಿ ಹೊರತುಪಡಿಸಿ ಆಡಳಿತ ಕಚೇರಿ ಸೇರಿದಂತೆ ಎಂಟು ಕಟ್ಟಡಗಳಿಗೆ ಬೀಗ ಹಾಕಿದ್ದಾರೆ.

ಮುಖ್ಯಾಂಶಗಳು
- ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿಯಲ್ಲಿ ಬೆಳವಣಿಗೆ
- ಮುಜರಾಯಿ ಸಿಬ್ಬಂದಿ ಹೊರಕ್ಕೆ, ಎಂಟು ಕಟ್ಟಡಗಳಿಗೆ ಬೀಗ
- ಅಂಜನಾದ್ರಿ ದೇವಸ್ಥಾನದ ಆಡಳಿತ ವಿಚಾರ ಮತ್ತೆ ಮುನ್ನೆಲೆಗೆ
ಕೊಪ್ಪಳ, ಅಕ್ಟೋಬರ್ 14: ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ಹೊಸ ಬೆಳವಣಿಗೆ ನಡೆದಿದೆ. ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಗೆ ಕಳುಹಿಸಿರುವ ವಿದ್ಯಾದಾಸ್ ಬಾಬಾ, ದೇವಸ್ಥಾನದ ಗರ್ಭಗುಡಿ ಹೊರತುಪಡಿಸಿ ಆಡಳಿತ ಕಚೇರಿ ಸೇರಿದಂತೆ ಎಂಟು ಕಟ್ಟಡಗಳಿಗೆ ಬೀಗ ಹಾಕಿದ್ದಾರೆ.
ಮುಜರಾಯಿ ಸಿಬ್ಬಂದಿ ಹೊರಕ್ಕೆ, ಕಟ್ಟಡಗಳಿಗೆ ಬೀಗ
ಆಂಜನೇಯನ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ದೇವಸ್ಥಾನದ ಆಡಳಿತ ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳಿಗೆ ಬೀಗ ಹಾಕಲಾಗಿದೆ. ಆಡಳಿತ ಕಚೇರಿ, ಉಗ್ರಾಣ ಕೊಠಡಿ, ಸಂಸ್ಕೃತ ಪಾಠಶಾಲೆ, ಅಡುಗೆ ಕೋಣೆ ಸೇರಿದಂತೆ ಒಟ್ಟು ಎಂಟು ಕಟ್ಟಡಗಳಿಗೆ ವಿದ್ಯಾದಾಸ್ ಬಾಬಾ ಬೀಗ ಹಾಕಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಯನ್ನು ಬೆಟ್ಟದಿಂದ ಕೆಳಗಿಳಿಸಲಾಗಿದ್ದು, ಸಿಬ್ಬಂದಿಗೆ ಮತ್ತೆ ಬೆಟ್ಟದ ಮೇಲೆ ಬರಲು ಪ್ರವೇಶ ನಿರಾಕರಿಸಲಾಗಿದೆ.
ದೇವಸ್ಥಾನದ ಗರ್ಭಗುಡಿಯನ್ನು ಹೊರತುಪಡಿಸಿ ಉಳಿದ ಕಟ್ಟಡಗಳಿಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೇವಸ್ಥಾನದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವ ಸಾಧ್ಯತೆಯೂ ಇದೆ.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಬೆಳವಣಿಗೆ
ಅಂಜನಾದ್ರಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಹಾಗೂ ಆಡಳಿತಾಧಿಕಾರಿ ನೇಮಕದ ಆದೇಶಗಳನ್ನು ಕರ್ನಾಟಕ ಹೈಕೋರ್ಟ್ ಅಕ್ಟೋಬರ್ 9ರಂದು ರದ್ದುಪಡಿಸಿತ್ತು. ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡದೆ ಮತ್ತು ಅವರ ವಾದ ಆಲಿಸದೆ ಕ್ರಮ ಕೈಗೊಂಡಿರುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಗಮನಿಸಿತ್ತು.

ಅಂಜನಾದ್ರಿ ಬೆಟ್ಟದಲ್ಲಿ ಪೊಲೀಸ್ ಭದ್ರತೆ
ಸರ್ಕಾರದ 2018ರ ಸೆಪ್ಟೆಂಬರ್ 24 ರ ಆದೇಶ ಮತ್ತು ಅದೇ ವರ್ಷದ ಡಿಸೆಂಬರ್ 15ರಂದು ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿತ್ತು. ವಿದ್ಯಾದಾಸ್ ಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜೆ ಮತ್ತು ಅರ್ಚಕ ಕರ್ತವ್ಯ ನಿರ್ವಹಿಸಲು ಸುಪ್ರೀಂ ಕೋರ್ಟ್ ಹಿಂದಿನ ಆದೇಶ ಹಾಗೂ ಹೈಕೋರ್ಟ್ ಆದೇಶಗಳ ಅನ್ವಯ ಅವಕಾಶವಿದೆ ಎಂಬ ಅಂಶವನ್ನೂ ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: ಅಂಜನಾದ್ರಿ ದೇಗುಲ ಪೂಜಾ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು, ಸರ್ಕಾರಕ್ಕೆ ಹಿನ್ನಡೆ
ಆದರೆ, ಈ ತೀರ್ಪಿನಿಂದ ದೇವಸ್ಥಾನದ ಮೇಲೆ ಸರ್ಕಾರಕ್ಕೆ ಶಾಶ್ವತ ಹಕ್ಕಿಲ್ಲ ಎಂಬ ಅಂತಿಮ ಘೋಷಣೆಯಾಗಿದೆ ಎಂದು ಅರ್ಥೈಸಬಾರದು. ಅಗತ್ಯವಿದ್ದರೆ ಕಾನೂನು ಪ್ರಕ್ರಿಯೆ ಅನುಸರಿಸಿ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಬಹುದು ಎಂದೂ ಹೈಕೋರ್ಟ್ ತಿಳಿಸಿತ್ತು.
ವಿದ್ಯಾದಾಸ್ ಬಾಬಾ ಯಾರು?
ವಿದ್ಯಾದಾಸ್ ಬಾಬಾ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಹಿಂದಿನ ಅರ್ಚಕರಾಗಿದ್ದು, ಉತ್ತರ ಭಾರತ ಮೂಲದವರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕು ಮತ್ತು ಆಡಳಿತದ ವಿಚಾರವಾಗಿ ಈ ಹಿಂದೆ ವಿವಾದ ಉಂಟಾಗಿತ್ತು. ಇದೀಗ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಮುಜರಾಯಿ ಸಿಬ್ಬಂದಿಯನ್ನು ಹೊರಗಿಟ್ಟು ಕಟ್ಟಡಗಳಿಗೆ ಬೀಗ ಹಾಕಿರುವ ಬೆಳವಣಿಗೆ ದೇವಸ್ಥಾನದ ಆಡಳಿತದ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




