ಕೆಪಿಎಸ್‌ಸಿ ಹಗರಣ: ಮೆರಿಟ್ ಲಿಸ್ಟ್ ದುರುಪಯೋಗ, ಲಕ್ಷಾಂತರ ರೂ. ವಸೂಲಿ ಮಾಡ್ತಿದ್ದ ಆರೋಪಿಗಳು
ಮೆರಿಟ್ ಲಿಸ್ಟ್‌ನ ಗೌಪ್ಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ವಿಚಾರ ಕೆಪಿಎಸ್‌ಸಿ ನೇಮಕಾತಿ ಹಗರಣದ ಇ.ಡಿ. ತನಿಖೆ ವೇಳೆ ಬಯಲಾಗಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಕೆಲ ಅಧಿಕಾರಿಗಳು ಮತ್ತು ಕೆಪಿಎಸ್‌ಸಿ ಸದಸ್ಯರು ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಯ ಮಾಹಿತಿ ಪಡೆದು, ಕೆಲಸ ಕೊಡಿಸುವುದಾಗಿ ಹಣ ಕೇಳುತ್ತಿದ್ದರು.

ಬೆಂಗಳೂರು, ಅಕ್ಟೋಬರ್ 13: ಕೆಪಿಎಸ್‌ಸಿ ನೇಮಕಾತಿ ಹಗರಣದ ಇ.ಡಿ ತನಿಖೆಯಲ್ಲಿ ಮತ್ತೊಂದು ಅಕ್ರಮದ ಮಾಹಿತಿ ಬಹಿರಂಗವಾಗಿದೆ. ಅಭ್ಯರ್ಥಿಗಳ ಮೆರಿಟ್ ಲಿಸ್ಟ್‌ನಲ್ಲಿರುವ ಅಂಕಗಳು ಮತ್ತು ಅಂತಿಮ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಾಗಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ವೇಳೆ ಈ ರೀತಿಯ ಅಕ್ರಮದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಜ್ಞಾನೇಂದ್ರ ಮಾತ್ರವಲ್ಲದೆ, ಇತರ ಅಧಿಕಾರಿಗಳು ಮತ್ತು ಕೆಪಿಎಸ್‌ಸಿಯ ಕೆಲವು ಸದಸ್ಯರೂ ಈ ರೀತಿಯ ಅಕ್ರಮದಲ್ಲಿ ಶಾಮೀಲಾಗಿದ್ದರು ಎಂಬ ಆರೋಪವೂ ಇದೆ.
ಮೆರಿಟ್ ಲಿಸ್ಟ್ ಮಾಹಿತಿ ಬಳಸಿ ಹಣ ವಸೂಲಿ
ಪರೀಕ್ಷೆ ಮುಗಿದ ಬಳಿಕ 1:3 ಅನುಪಾತದಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗಿತ್ತು. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಅಂಕಗಳ ಮಾಹಿತಿಯನ್ನು ಗೌಪ್ಯವಾಗಿಡಬೇಕಿತ್ತು. ಆದರೆ, ಮೆರಿಟ್ ಲಿಸ್ಟ್‌ನಲ್ಲಿರುವ ಅಂಕಗಳು ಹಾಗೂ ಅಭ್ಯರ್ಥಿಗಳ ಅಂತಿಮ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದರು. ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರನ್ನು ಕೆಲವು ಸದಸ್ಯರು ಮತ್ತು ಅಧಿಕಾರಿಗಳು ಸಂಪರ್ಕಿಸಿ, ಮೆರಿಟ್ ಲಿಸ್ಟ್‌ನಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಅಂಕಗಳಿವೆ ಹಾಗೂ ಯಾರಿಗೆ ಅಂತಿಮ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಪಡೆಯುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸ್ವಂತ ಸಾಮರ್ಥ್ಯದಿಂದ ಆಯ್ಕೆಯಾಗಬಲ್ಲ ಅಭ್ಯರ್ಥಿಗಳಿಗೂ ವಂಚನೆಯ ಬಲೆ
ಕೆಲವು ಅಭ್ಯರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಅಂತಿಮ ಆಯ್ಕೆಯಾಗುವ ಸಾಧ್ಯತೆಯಿದ್ದರೂ, ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಲಾಗುತ್ತಿತ್ತು. ‘ನಮ್ಮ ಪ್ರಯತ್ನದಿಂದಲೇ ನಿಮಗೆ ಕೆಲಸ ಸಿಗುತ್ತಿದೆ’ ಎಂದು ನಂಬಿಸಿ, ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಅಭ್ಯರ್ಥಿಗಳಿಗೆ ಅಂತಿಮ ಆಯ್ಕೆಯ ಸಾಧ್ಯತೆ ಇರುವ ಮಾಹಿತಿ ಮೊದಲೇ ತಿಳಿದಿದ್ದರೂ, ಅದನ್ನು ತಮ್ಮ ಪ್ರಭಾವದಿಂದ ಸಾಧ್ಯವಾಗಿಸಿದೆ ಎಂದು ಹೇಳಿ ಹಣ ವಸೂಲಿ ಮಾಡಲಾಗುತ್ತಿತ್ತು. ಈ ಮೂಲಕ ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನೇ ಹಣ ಸಂಪಾದನೆಯ ಮಾರ್ಗವನ್ನಾಗಿ ಬಳಸಿಕೊಂಡಿದ್ದರು ಎಂಬ ಆರೋಪದ ಬಗ್ಗೆಯೂ ತನಿಖೆಯಲ್ಲಿ ಸುಳಿವು ದೊರೆತಿದೆ.
ಹಲವು ವಿಭಾಗಗಳ ಅಧಿಕಾರಿಗಳಿಂದಲೂ ಅಕ್ರಮ?
ಮೆರಿಟ್ ಲಿಸ್ಟ್ ಅನ್ನು ಕಂಪ್ಯೂಟರ್ ವಿಭಾಗ, ಸಿ-3 ವಿಭಾಗ ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಅಧಿಕಾರಿಗಳು ಪಟ್ಟಿಯಲ್ಲಿನ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪದ ಬಗ್ಗೆಯೂ ತನಿಖೆಯಲ್ಲಿ ಸುಳಿವು ದೊರೆತಿದೆ.
ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಯ ಬಗ್ಗೆ ಕೆಪಿಎಸ್‌ಸಿಯ ಕೆಲವು ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿತ್ತು. ಅಲ್ಲದೆ, ಹಣ ನೀಡಿದ್ದ ಅಭ್ಯರ್ಥಿಗಳಿಗೂ ನೇರವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು. ನಂತರ ನೇಮಕಾತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಅವರಿಂದ ಹಣ ಪಡೆಯಲಾಗುತ್ತಿತ್ತು.
ಈ ರೀತಿಯಲ್ಲಿ ಹಣ ನೀಡಿ ವಂಚನೆಗೆ ಒಳಗಾದ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೆಪಿಎಸ್‌ಸಿ ಹಗರಣದ ತನಿಖೆಯಲ್ಲಿ ಮೆರಿಟ್ ಲಿಸ್ಟ್‌ನ ಗೌಪ್ಯ ಮಾಹಿತಿ ಹೇಗೆ ದುರುಪಯೋಗವಾಯಿತು ಮತ್ತು ಈ ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




