AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಜಾಗ ಉಳಿಸಲು 4 ಸಾವಿರ ಗಿಡ ನೆಟ್ಟು ಪೋಷಣೆ; ಹಾಸನದ ವ್ಯಕ್ತಿಯ ಪರಿಸರ ಪ್ರೇಮಕ್ಕೆ ಮೆಚ್ಚಿದ ಜನತೆ

ಗಿಡ ನೆಟ್ಟು ಸುಮ್ಮನಾಗದ ಮಂಜೇಗೌಡ ಅವುಗಳನ್ನು ಜನರಿಂದ ಕಾಪಾಡುವುದಕ್ಕೆ ನೂತನ ಯೋಜನೆಯನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮದೇ ಊರಿನ ಜನರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿ ಪ್ರತಿ ಗಿಡಕ್ಕೂ ತಮ್ಮದೇ ಸ್ವಂತ ಖರ್ಚಿನಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿಸಿದ್ದಾರೆ. ಹಾಕಿದ ಒಂದೇ ಒಂದು ಗಿಡವೂ ಹಾಳಾಗದಂತೆ ದಿನವೂ ಎಚ್ಚರ ವಹಿಸಿದ್ದು, ಇಲ್ಲಿಂದ ಶುರುವಾದ ಇವರ ಪರಿಸರದ ಮೇಲಿನ ಪ್ರೀತಿ, ಊರಿನ ಸುತ್ತಮುತ್ತಲ ಪ್ರದೇಶಕ್ಕೂ ವಿಸ್ತರಣೆ ಆಗಿದೆ.

ಸರ್ಕಾರಿ ಜಾಗ ಉಳಿಸಲು 4 ಸಾವಿರ ಗಿಡ ನೆಟ್ಟು ಪೋಷಣೆ; ಹಾಸನದ ವ್ಯಕ್ತಿಯ ಪರಿಸರ ಪ್ರೇಮಕ್ಕೆ ಮೆಚ್ಚಿದ ಜನತೆ
ಸರ್ಕಾರಿ ಜಾಗ ಉಳಿಸಲು 4 ಸಾವಿರ ಗಿಡ ನೆಟ್ಟು ಪೋಷಣೆ
Follow us
TV9 Web
| Updated By: preethi shettigar

Updated on: Jul 12, 2021 | 8:39 AM

ಹಾಸನ: ಇತ್ತೀಚಿನ ದಿನಗಳಲ್ಲಿ ರಸ್ತೆ ಕಾಮಗಾರಿ, ನಗರೀಕರಣ, ಊರಿನ ಅಭಿವೃದ್ಧಿ ಹೆಸರಿನಲ್ಲಿ ಹಸಿರು ಮಾಯವಾಗುತ್ತಿದೆ. ಈ ಕಾರಣಕ್ಕಾಗಿಯೇ ಸುತ್ತಮುತ್ತಲ ಮರಗಳು ನೆಲ ಕಚ್ಚಿವೆ. ಇನ್ನು ಸರ್ಕಾರಿ ಜಾಗ ಇದೆ ಅಂದರೆ ಸಾಕು ಅದನ್ನು ಹೇಗಾದರೂ ಸರಿ ಒತ್ತುವರಿ ಮಾಡಿಕೊಂಡು ಮರಗಳನ್ನು ಉರುಳಿಸಿ ಮನೆ ಕಟ್ಟಲು ಶುರು ಮಾಡುತ್ತಾರೆ. ಆದರೆ ಹಾಸನ ಜಿಲ್ಲೆಯ ವ್ಯಕ್ತಿಯೊರ್ವರು ಇದಕ್ಕೆ ವಿರುದ್ಧವಾಗಿ ನಿಂತುಕೊಂಡಿದ್ದಾರೆ. ತಮ್ಮೂರ ಸರ್ಕಾರಿ ಜಾಗ ಉಳಿಸಬೇಕು, ಮರ-ಗಿಡ ಬೆಳೆಸಿ ಪರಿಸರ ರಕ್ಷಣೆ ಮಾಡಬೇಕು ಎಂದು ರಸ್ತೆಗಳಲ್ಲಿ ಸಾಲು ಮರಗಳನ್ನು ನೆಟ್ಟು, ತಮ್ಮದೇ ಖರ್ಚಿನಲ್ಲಿ ನೀರುಣಿಸಿ ಸಾಲುಮರದ ಸರದಾರನೆನಿಸಿಕೊಂಡಿದ್ದಾರೆ. ಬರೊಬ್ಬರಿ ನಾಲ್ಕು ಸಾವಿರ ಗಿಡನೆಟ್ಟಿರುವ ಈ ವ್ಯಕ್ತಿಯ ಪರಿಸರ ಕಾಳಜಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಖಾಲಿ ಜಾಗದಲ್ಲಿ ಕಾಡು ಸೃಷ್ಟಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಮಂಜೇಗೌಡ ವೃತ್ತಿನಲ್ಲಿ ಉದ್ಯಮಿ. ಆದರೆ ಮಂಜೇಗೌಡರಿಗೆ ಮೊದಲಿನಿಂದಲೂ ಪರಿಸರದ ಮೇಲೆ ವಿಶೇಷ ಕಾಳಜಿ. ತಮ್ಮೂರಿನ ಸಮೀಪ ಊರ ಗೋಮಾಳ ಎಂದು ನಾಲ್ಕು ಎಕರೆ ಜಮೀನಿತ್ತು, ವರ್ಷದಿಂದ ವರ್ಷಕ್ಕೆ ಆ ಪ್ರದೇಶ ಕಡಿಮೆಯಾಗುತ್ತಲೇ ಹೋಗುತ್ತಿತ್ತು. ಹೀಗೆ ಬಿಟ್ಟರೆ ಈ ಭೂಮಿ ಉಳಿಯುವುದಿಲ್ಲ ಎಂದು ಯೋಚನೆ ಮಾಡಿ, ಅರಣ್ಯ ಇಲಾಖೆ ಸಂಪರ್ಕ ಮಾಡಿ ಅಲ್ಲಿ 350 ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ಶುರುಮಾಡಿದೆ ಎಂದು ಮಂಜೇಗೌಡ ತಿಳಿಸಿದ್ದಾರೆ.

ಗಿಡ ನೆಟ್ಟು ಸುಮ್ಮನಾಗದ ಮಂಜೇಗೌಡ ಅವುಗಳನ್ನು ಜನರಿಂದ ಕಾಪಾಡುವುದಕ್ಕೆ ನೂತನ ಯೋಜನೆಯನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮದೇ ಊರಿನ ಜನರನ್ನು ಒಳಗೊಂಡ ಸಮಿತಿಯೊಂದನ್ನು ಮಾಡಿ ಪ್ರತಿ ಗಿಡಕ್ಕೂ ತಮ್ಮದೇ ಸ್ವಂತ ಖರ್ಚಿನಿಂದ ಹನಿ ನೀರಾವರಿ ವ್ಯವಸ್ಥೆ ಮಾಡಿಸಿದ್ದಾರೆ. ಹಾಕಿದ ಒಂದೇ ಒಂದು ಗಿಡವೂ ಹಾಳಾಗದಂತೆ ದಿನವೂ ಎಚ್ಚರ ವಹಿಸಿದ್ದು, ಇಲ್ಲಿಂದ ಶುರುವಾದ ಇವರ ಪರಿಸರದ ಮೇಲಿನ ಪ್ರೀತಿ, ಊರಿನ ಸುತ್ತಮುತ್ತಲ ಪ್ರದೇಶಕ್ಕೂ ವಿಸ್ತರಣೆ ಆಗಿದೆ. ಎಲ್ಲೆಲ್ಲಿ ಸರ್ಕಾರಿ ಜಾಗ ಸಿಗುತ್ತದೆ ಅಲ್ಲಿಗೆ ಗಿಡ ನೆಡುವುದು, ರಕ್ಷಣೆ ಮಾಡುವುದು, ಜತೆಗೆ ಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದು, ಅಲ್ಲಿ ಸಸಿಗಳಿಗೆ ಟ್ಯಾಂಕ್ ಮೂಲಕ ನೀರುಣಿಸುವುದು ಹೀಗೆ ಹಲವು ಪರಿಶ್ರಮದ ಮೂಲಕ ಈಗ ಬರೊಬ್ಬರಿ ಮೂರುವರೆಯಿಂದ ನಾಲ್ಕು ಸಾವಿರ ಗಿಡಗಳನ್ನು ಬೆಳೆಸಿದ್ದಾರೆ.

ಕಾಡು ಜಾತಿಯ ಮರಗಳ ಜತೆಗೆ ಹಣ್ಣಿನ ಮರಗಳ ಪೋಷಣೆ ಊರಿನ ಸರ್ಕಾರಿ ಜಾಗವನ್ನು ಉಳಿಸಬೇಕೆಂದು ಆರಂಭವಾದ ಈ ಹಸಿರೀಕರಣದ ಕಾಯಕ ಅದು ಪರಿಸರದ ಉಳಿವಿಗಾಗಿ ಶುರುವಾಯಿತು. ಕಳೆದ ಅವಧಿಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ತಮಗಿದ್ದ ಸಂಪರ್ಕ ಬಳಸಿಕೊಂಡು ಎಲ್ಲೆಲ್ಲಿ ಗಿಡ ನೆಡಲು ಸಾಧ್ಯವೋ ಅಲ್ಲೆಲ್ಲಾ ಗಿಡ ನೆಡುವುದಕ್ಕೆ ಆರಂಭಿಸಿದ ಮಂಜೇಗೌಡರು ಹಲವು, ಬೇವು, ಮಾವು, ಹೆಬ್ಬೇವು, ಹೊನ್ನೆ, ಹೊಂಗೆ, ನೇರಳೆ, ಮಹಾಗನಿ ಹೀಗೆ ಹತ್ತಾರು ಬಗೆಯ ಕಾಡು ಜಾತಿಯ ಮರಗಳ ಜತೆಗೆ ಹಲವು ಹಣ್ಣಿನ ಗಿಡಗಳನ್ನು ನೆಟ್ಟು ಸಲಹಲು ಶುರು ಮಾಡಿದರು.

ಐದೇ ವರ್ಷದಲ್ಲಿ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ, ಬಯಲು ಪ್ರದೇಶದಂತಿದ್ದ ಊರ ಪ್ರದೇಶ ಈಗ ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಅವ್ಯಾಹತವಾಗಿ ನಡೆಯುತ್ತಿರುವ ಸಮಯದಲ್ಲಿ ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಗಿಡ ಮರ ನೆಡಬೇಕು ಸರ್ಕಾರ ಜನರಿಗೆ ಹಲವು ಯೋಜನೆ ನೀಡುತ್ತದೆ, ಒಂದೊಂದು ಯೋಜನೆಯ ಫಲ ಪಡೆದ ಫಲಾನುಭವಿ ಕನಿಷ್ಠ ಐದು ಗಿಡ ನೆಟ್ಟು ಬೆಳೆಸಬೇಕೆಂಬ ನಿಯಮ ಮಾಡಿದರೆ, ಊರಿಗೊಂದು ವನ ಆಗುತ್ತದೆ. ಆಗ ಆಕ್ಸಿಜನ್​ಗಾಗಿ ಜನರು ಪರಿತಪಿಸುವುದು ನಿಲ್ಲುತ್ತದೆ. ಜನ ಜನಪ್ರತಿನಿಧಿಗಳು ಪರಿಸರದ ಬಗ್ಗೆ ಆಸಕ್ತಿ ವಹಿಸಿದರೆ ಖಂಡಿತಾ ಪರಿಸರ ಉಳಿವಿನ ಜತೆಗೆ ಸರ್ಕಾರದ ಭೂಮಿಯೂ ಉಳಿಯುತ್ತದೆ ಎಂದು ಮಂಜೇಗೌಡರು ಹೇಳಿದ್ದಾರೆ.

ಇದನ್ನೂ ಓದಿ: ಮಗ ವೈದ್ಯನಾಗಬೇಕೆಂದು ಕನಸು ಕಂಡಿದ್ದ ತಂದೆ ಗಿಡ ನೆಟ್ಟು ಪರಿಸರ ಸೇವೆ ಮಾಡಿದ ಅಪರೂಪದ ಕಥೆಯಿದು

ಕೊವಿಡ್​ನಿಂದ ಗುಣಮುಖರಾದವರಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆ ಶಪಥ; ವಿಶ್ವ ಪರಿಸರ ದಿನದಂದು ಮಾದರಿ ಕಾರ್ಯ