ಶಾಸಕರಿಗೆ ಕೆಲಸ ಮಾಡ್ತಿದ್ದೀಯಾ, ಜನರಿಗೆ ಮಾಡ್ತಿದ್ದೀಯಾ? ಮಹಿಳಾ ಅಧಿಕಾರಿ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಕೆಂಡ
Mandya News: ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗರಂ ಆದರು. ಕೇಂದ್ರ ಸರ್ಕಾರದ ಯೋಜನೆ ಕಾಮಗಾರಿಗಳ ಪ್ರಗತಿ ಮಾಹಿತಿ ನೀಡದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಜೊತೆಗೆ ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಸಾಲ ವಸೂಲಾತಿಗೆ ಒತ್ತಡ ಹೇರಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಮಂಡ್ಯ, ಆಗಸ್ಟ್ 29: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು. ಈ ವೇಳೆ ಕೇಂದ್ರದ ಯೋಜನೆಗಳ ಕಾಮಗಾರಿ ಪ್ರಗತಿ ಮಾಹಿತಿ ನೀಡದೆ ಉಡಾಫೆ ಮಾಡಿದ ಮದ್ದೂರು ನಗರಸಭೆ ಕಮಿಷನರ್ ರಾಧಿಕಾಗೆ ಕ್ಲಾಸ್ ತೆಗೆದುಕೊಂಡರು. ಸಮಸ್ಯೆ ಇದ್ದರೆ ನನ್ನನ್ನು ಕೇಳುವ ಸೌಜನ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ
ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿರುವ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಾಹಿತಿ ನೀಡದೆ ಉಡಾಫೆ ಪ್ರದರ್ಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮದ್ದೂರಿನಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ ತೊಂದರೆ ನೀಡುತ್ತಿರುವ ವಿಚಾರವಾಗಿ ಮದ್ದೂರು ನಗರಸಭೆ ಕಮಿಷನರ್ ರಾಧಿಕಾಗೆ ತರಾಟೆ ತೆಗೆದುಕೊಂಡರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್ ಬಾಂಬ್: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!
‘ಶಾಸಕರಿಗೆ ಏನಾದರೂ ಕೊಂಬು ಇದೆಯಾ? ಅವರ ಮಾತು ಕೇಳಿಕೊಂಡು ಸಾರ್ವಜನಿಕ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದೀರಾ? ನೀವು ಶಾಸಕರಿಗೆ ಕೆಲಸ ಮಾಡುತ್ತಿದ್ದೀರಾ ಅಥವಾ ಜನರಿಗಾ? ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರುವ ಸೌಜನ್ಯ ನಿಮಗಿಲ್ಲವೇ? ನನಗೆ ಏಕವಚನದಲ್ಲಿ ಮಾತನಾಡಲು ಬರುವುದಿಲ್ಲವೇ? ಇದು ತುಘಲಕ್ ರಾಜ್ಯವೇ? ನಾನು ಕಳೆದ 20 ವರ್ಷಗಳಲ್ಲಿ ಸಾಕಷ್ಟು ಶಾಸಕರನ್ನು ನೋಡಿದ್ದೇನೆ. ನಾನು ನೋಡುವಷ್ಟು ಜನರನ್ನ ನೀನು ನೋಡ್ತೀಯಾ’ ಎಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ರೈತರಿಂದ ಬಲವಂತದ ಸಾಲ ವಸೂಲಿ ಬೇಡ: ಲೀಡ್ ಬ್ಯಾಂಕ್‌ಗೆ ಸೂಚನೆ
‘ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೇವಲ ಶೇಕಡಾ 18ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಇಂತಹ ಬರಗಾಲದ ಸಂದರ್ಭದಲ್ಲಿ ರೈತರ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಿ ಸಾಲ ವಸೂಲಿ ಮಾಡಬಾರದು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಹೆಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದರು. ‘ಬ್ಯಾಂಕುಗಳ ಒತ್ತಡದಿಂದ ಕಂಗಾಲಾಗಿ ಅನ್ನದಾತರು ಆತ್ಮಹತ್ಯೆಯಂತಹ ದುಡುಕಿನ ದಾರಿ ಹಿಡಿಯಲು ಆಸ್ಪದ ನೀಡಬಾರದು’ ಎಂದಿದ್ದಾರೆ.
ಮಳೆ ಕೊರತೆ ಮತ್ತು ಕೆಆರ್‌ಎಸ್ ನೀರಿನ ಸ್ಥಿತಿಗತಿ ಪರಾಮರ್ಶೆ
ಇನ್ನು ಸಭೆಯಲ್ಲಿ ಜಿಲ್ಲೆಯಲ್ಲಿನ ಮಳೆ ಕೊರತೆ ಹಾಗೂ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟದ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಸಮಗ್ರ ಮಾಹಿತಿ ನೀಡಿದರು. ಮಳೆ ಕೊರತೆಯಿಂದ ಎದುರಾಗಿರುವ ಸಂಕಷ್ಟಗಳು ಹಾಗೂ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ಆವರ್ತನ ಪದ್ಧತಿ, ನೀರು ಬಿಡುಗಡೆ ಸೇರಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಶಾಸಕ ಹೆಚ್.ಟಿ. ಮಂಜು, ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Sat, 29 August 26




