ಕೊರೊನಾ ಲಸಿಕೆ ವಿತರಣೆಯಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ ನಂ.1; ಇದೀಗ ಬೀದಿಬದಿ ವ್ಯಾಪಾರಿಗಳು, ವಿಶೇಷ ಚೇತನರಿಗಾಗಿ ಲಸಿಕೆ ಅಭಿಯಾನ ಆರಂಭ

ಮೈಸೂರು ಜಿಲ್ಲೆಯಲ್ಲಿರುವ 24ಲಕ್ಷ ಜನರಿಗೂ ಆದಷ್ಟು ಬೇಗ ಕೊರೊನಾ ಲಸಿಕೆ ತಲುಪಿಸಬೇಕು ಎಂಬ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದ್ದು, ಜನರು ಕೂಡಾ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಮತ್ತಷ್ಟು ಬಲ ನೀಡಿದೆ.

ಕೊರೊನಾ ಲಸಿಕೆ ವಿತರಣೆಯಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ ನಂ.1; ಇದೀಗ ಬೀದಿಬದಿ ವ್ಯಾಪಾರಿಗಳು, ವಿಶೇಷ ಚೇತನರಿಗಾಗಿ ಲಸಿಕೆ ಅಭಿಯಾನ ಆರಂಭ
ಪ್ರಾತಿನಿಧಿಕ ಚಿತ್ರ

ಮೈಸೂರು: ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂಬ ಹಿರಿಮೆಗಳಿಗೆ ಪಾತ್ರವಾಗಿರುವ ಮೈಸೂರು ಇದೀಗ ಕೊರೊನಾ ಲಸಿಕೆಯ ವಿಚಾರದಲ್ಲೂ ನಂ.1 ಆಗಿ ಹೊರಹೊಮ್ಮುವ ಮೂಲಕ ಇತರೆ ಜಿಲ್ಲೆಗಳಿಗೆ ಮಾದರಿ ಎನ್ನಿಸಿಕೊಂಡಿದೆ. ರಾಜ್ಯದಲ್ಲಿ ಇಲ್ಲಿಯ ತನಕ ಅತಿ ಹೆಚ್ಚು ಲಸಿಕೆ ನೀಡಿದ ಜಿಲ್ಲೆ ಎಂಬ ಕೀರ್ತಿ ಮೈಸೂರಿಗೆ ಸಲ್ಲುತ್ತಿದ್ದು, ಶೇ.43ರಷ್ಟು ಮಂದಿಗೆ ಲಸಿಕೆ ಹಂಚುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 10ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಕೆ.ಆರ್.ನಗರ ತಾಲ್ಲೂಕಿನಲ್ಲಿ ಅತಿ ವೇಗವಾಗಿ ಲಸಿಕೆ ವಿತರಣೆ ಆಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿರುವ 24ಲಕ್ಷ ಜನರಿಗೂ ಆದಷ್ಟು ಬೇಗ ಕೊರೊನಾ ಲಸಿಕೆ ತಲುಪಿಸಬೇಕು ಎಂಬ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದ್ದು, ಜನರು ಕೂಡಾ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವುದು ಮತ್ತಷ್ಟು ಬಲ ನೀಡಿದೆ. ಲಸಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣ ಕೊರೊನಾ ಸೋಂಕಿತರ ಪ್ರಮಾಣವೂ ಕಡಿಮೆಯಾಗಿದ್ದು, ಹೊಸದಾಗಿ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಇದೀಗ ಬೀದಿಬದಿ ವ್ಯಾಪಾರಿಗಳು ಮತ್ತು ವಿಶೇಷ ಚೇತನರಿಗೆ ಕೊರೊನಾ ಲಸಿಕೆ ತಲುಪಿಸಲು ಇಂದಿನಿಂದ ಮೈಸೂರಿನಲ್ಲಿ ಲಸಿಕಾ ಅಭಿಯಾನ ಆರಂಭವಾಗುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ ಅಭಿಯಾನ ಸರಾಗವಾಗಿ ಸಾಗಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಬೀದಿಬದಿ ವ್ಯಾಪಾರಿಗಳು ಹಾಗೂ ವಿಶೇಷ ಚೇತನಿರಿಗಾಗಿ ಲಸಿಕಾ ಅಭಿಯಾನ
ಇಂದಿನಿಂದ (ಜೂನ್ 16) ಜೂನ್ 20ರವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲು ಹಾಗೂ ನಾಳೆಯಿಂದ (ಜೂನ್ 17) ಜೂನ್ 19ರವರೆಗೆ ವಿಶೇಷ ಚೇತನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಪುರಭವನ ಹಾಗೂ ತಿಲಕ್‌ನಗರದ ಅಂಧಮಕ್ಕಳ‌ ಪಾಠಶಾಲೆಯಲ್ಲಿ ಲಸಿಕೆ ‌ನೀಡಲು ವ್ಯವಸ್ಥೆ ಮಾಡಲಾಗಿದ್ದು, ಪಾಲಿಕೆ ವತಿಯಿಂದ ವಾರ್ಡ್‌ವಾರು ಉಚಿತ ವಾಹನ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ನೀಡಲಾಗುವುದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಜೂನ್ 16 ರಿಂದ 20ರ ತನಕ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಪುರಭವನದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು ನೋಂದಾಯಿತ ಹಾಗೂ ನೋಂದಾಯಿಸಲ್ಪಡದ ಬೀದಿ ಬದಿ ವ್ಯಾಪರಿಗಳಿಗೂ ಲಸಿಕೆ ನೀಡಲಾಗುವುದು ಅರ್ಹರು ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ ತೆಗೆದುಕೊಂಡು ಬರಬೇಕು ಎಂದು ಮಹಾನಗರ ಪಾಲಿಕೆ ತಿಳಿಸಿದೆ.

ವಿಶೇಷ ಚೇತನರಿಗೆ ಜೂನ್​ 17 ರಿಂದ 19 ರವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಿಲಕನಗರದ ಅಂಧಮಕ್ಕಳ‌ ಪಾಠಶಾಲೆಯಲ್ಲಿ ಲಸಿಕೆ ‌ನೀಡಲು ನಿರ್ಧರಿಸಲಾಗಿದೆ. ವಿಶೇಷ ಚೇತನರು ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕಿದ್ದು, ವಾರ್ಡ್​ವಾರು ಉಚಿತ ವಾಹನದ ಸೌಲಭ್ಯ ಸಹಾ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:
ಮೈಸೂರು ಡಿಸಿಯಾಗಿ ನೇಮಿಸಲು ಒತ್ತಾಯ; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್​ಲೈನ್​ ಕ್ಯಾಂಪೇನ್ 

ಜೂನ್​ 16ರಿಂದ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ವಿಶೇಷ ಚೇತನರಿಗಾಗಿ ಮೈಸೂರಿನಲ್ಲಿ ಕೊರೊನಾ ಲಸಿಕೆ ಅಭಿಯಾನ