ಪೊಲೀಸ್ ಅಧಿಕಾರಿಗಳ ಜೊತೆಗಿನ ಸಭೆ ವಿಫಲ: ಟಿ.ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿಗೆ ಬಿಜೆಪಿ ಕರೆ
ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಆಯೋಜನರಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಧನಜಂಯ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳ ಜತೆ ಬಿಜೆಪಿ ನಾಯಕರು ನಡೆಸಿದ ಸಭೆ ವಿಫಲವಾಗಿದೆ.

ಮೈಸೂರು, (ಸೆಪ್ಟೆಂಬರ್ 13): ಗಣೇಶೋತ್ಸವ ಮೆರವಣಿಗೆ ಸಂಬಂಧ ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಧಮಿ ಹಾಕಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಟಿ.ನರಸೀಪುರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದು, ಇನ್ಸ್ಪೆಕ್ಟರ್ ಧನಂಜಯ್ ಅಮಾನತಿಗೆ ಆಗ್ರಹಿಸಿದ್ದಾರೆ. ಇದು ತಾರಕಕ್ಕೇರುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು, ಬಿಜೆಪಿ ನಾಯಕರೊಂದಿಗೆ ನಡೆಸಿದ ಶಾಂತಿ ಸಭೆ ಸಹ ವಿಫಲವಾಗಿದ್ದು, ಇದೀಗ ಬಿಜೆಪಿ ಠಾಣೆ ಎದುರು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಶಾಂತಿ ಸಭೆ ವಿಫಲ
ಗಣಪತಿ ಕೂರಿಸುವ ಯುವಕರಿಗೆ ಇನ್ಸ್‌ಪೆಕ್ಟರ್ ಧಮ್ಕಿ ವಿಚಾರಕ್ಕೆ ಟಿ.ನರಸೀಪುರದ ಸರ್ಕಾರಿ ಅತಿಥಿಗೃಹದಲ್ಲಿ ಇಂದು (ಸೆಪ್ಟೆಂಬರ್ 13) ಪೊಲೀಸ್ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರ ಸಭೆ ನಡೆದಿದ್ದು, ಸಭೆಯಲ್ಲಿ ಇನ್ಸ್ಪೆಕ್ಟರ್ ಸಸ್ಪೆಂಡ್ಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಆದ್ರೆ, ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದ್ದು, ಟಿ ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸಲು ಮಾಜಿ ಸಂಸದ ಪ್ರತಾಪ್ ಸಿಂಹ ಕರೆ ಕೊಟ್ಟಿದ್ದಾರೆ.
ಇದನ್ನೂ ನೋಡಿ: ಗಣೇಶೋತ್ಸವ ವಿವಾದ: ಮೈಸೂರಿನ ಟಿ. ನರಸೀಪುರದಲ್ಲಿ ಭಾರಿ ಹೈಡ್ರಾಮಾ
ಅಹೋರಾತ್ರಿ ಧರಣಿಗೆ ಸಿಂಹ ಕರೆ
ಪೊಲೀಸ್ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಟಿ.ನರಸೀಪುರ ಪಿಐ ಧನಂಜಯ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ನರಸೀಪುರದ ಅಕ್ರಮಗಳ ಕಿಂಗ್ಪಿನ್ ಪಿಐ ಧನಂಜಯ. ಹೀಗಾಗಿ ಇನ್ಸ್ಪೆಕ್ಟರ್ ಧನಂಜಯರನ್ನ ಸಸ್ಪೆಂಡ್ ಮಾಡ್ಬೇಕು. ಸಸ್ಪೆಂಡ್ ಆಗೋವರೆಗೂ ಆಹೋರಾತ್ರಿ ಧರಣಿ ನಡಿಸುತ್ತೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಆಗಿದ್ದೇನು
ಇನ್ನು ಇದಕ್ಕೂ ಮುನ್ನ ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸ್ತೀನಿ ಎಂದು ಹೇಳಿದ್ದ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಟಿ.ನರಸೀಪುರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇನ್ಸ್‌ಪೆಕ್ಟರ್ ಧನಂಜಯ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಇದೀಗ ಟಿ.ನರಸೀಪುರಕ್ಕೆ ವಿಪಕ್ಷ ನಾಯಕ ಅಶೋಕ್, ಸಂಸದ ಯದುವೀರ್ ಒಡೆಯರ್, ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಸೇರಿ ಹಲವು ನಾಯಕರು ಭೇಟಿ ನೀಡಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.




